Published On: Wed, Oct 16th, 2024

ಹುಬ್ಬಳ್ಳಿ ಗಲಭೆ ಕೇಸ್ ಹಿಂತೆಗೆತ: ಅ.25 ರಂದು ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನೆ 

ಬಂಟ್ವಾಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೇಶಭಕ್ತರು ಯಾರು,ದೇಶದ್ರೋಹಿಗಳು ಯಾರೆಂಬುದೇ ಗೊತ್ತಾಗುತ್ತಿಲ್ಲ,ಹಾಗಾಗಿ ಹುಬ್ಬಳ್ಳಿ ಠಾಣೆ ಮೇಲೆ ಕಲ್ಲೆಸೆದು ಪೊಲೀಸರ ಮೇಲೆ ಹಲ್ಲೆಗೈದು ಗಲಭೆಯಲ್ಲಿ ಭಾಗವಹಿಸಿದ್ದ ದೇಶದ್ರೋಹಿಗಳ ಮೇಲಿನ ಕೇಸನ್ನು ವಾಪಾಸ್ ಪಡೆದಿರುವುದು ಅಕ್ಷಮ್ಯ ಅಪರಾಧವಾಗಿದ್ದು,ಇದರ ವಿರುದ್ಧ  ಅ.25ರಂದು ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.


ಮಂಗಳವಾರ ಬ್ರಹ್ಮರಕೊಟ್ಲುವಿನಲ್ಲಿರುವ ಬಂಟ್ವಾಳದ ಬಂಟರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹುಬ್ಬಳ್ಳಿ ಗಲಭೆ ಪ್ರಕರಣದ ಬಗ್ಗೆ ಎನ್ ಐಎ ತನಿಖೆ ನಡೆಸುತ್ತಿದ್ದು,ಇದರ ನಡುವೆ ಅಲ್ಪಸಂಖ್ಯಾತರ ತುಷ್ಠೀಕರಣಕ್ಕಾಗಿ  ದೇಶದ್ರೋಹಿಗಳನ್ನು ರಕ್ಷಿಸಲು ಸರಕಾರ ಟೊಂಕಕಟ್ಟಿ ನಿಂತಿದೆ  ಎಂದರು.
ಸಿದ್ದರಾಮಯ್ಯ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಹೊಸ ಯೋಜನೆ ಘೋಷಣೆ ಮಾಡಿಲ್ಲ,ರಾಜ್ಯದಲ್ಲಿ ಅಭಿವೃದ್ಧಿಗೆ ಯಾವುದೇ ಅನುದಾನ ದೊರಕುತ್ತಿಲ್ಲ ಎಂಬುದನ್ನು ಆಡಳಿತ ಪಕ್ಷದ ಶಾಸಕರೇ ಹೇಳುತ್ತಾರೆ. ಅಭಿವೃದ್ಧಿಶೂನ್ಯ ಸರಕಾರ ಇದಾಗಿದ್ದು, ಸರಕಾರ ಸಂಪೂರ್ಣ  ನಿಷ್ಕ್ರಿಯವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಸರಕಾರ ಭ್ರಷ್ಟಾಚಾರ, ಹಗರಣಗಳಿಂದ ಮುಳುಗಿದ್ದು, ಸರಕಾರ ಬದುಕಿದ್ದೂ ಸತ್ತಂತೆ. ಒಂದು ಕ್ಷಣವೂ ಈ ಸರಕಾರ ಮುಂದುವರಿಯಲು ನೈತಿಕತೆ ಇಲ್ಲ, ಹೀಗಾಗಿ ರಾಜ್ಯ ಸರಕಾರ ವಜಾ ಮಾಡಬೇಕೆಂದು ಒತ್ತಾಯಿಸಿ  ಅತೀ ಶೀಘ್ರವೇ ಬಿಜೆಪಿ-ಜೆಡಿಎಸ್‌ ನಿಯೋಗ  ರಾಷ್ಟ್ರಪತಿಯವರನ್ನು ಭೇಟಿಯಾಗಿ
ಮನವಿ ಮಾಡಲಿದ್ದೇವೆ ಎಂದರು.
ಸೋಲಿನ ಹಾದಿಯಲ್ಲಿ ಕಾಂಗ್ರೆಸ್:
ಹರಿಯಾಣದಲ್ಲಿ ಗೆಲ್ಲುತ್ತೇವೆ ಎಂದು ಹಗಲುಗನಸು ಕಾಣುತ್ತಿದ್ದ  ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯಲ್ಲಿ ಸೋಲಾಗಿದೆ. ಜಮ್ಮು ಕಾಶ್ಮೀರದಲ್ಲಿಯು ಜನರು ಕಾಂಗ್ರೆಸ್ ಪಕ್ಷವನ್ನು ಧಿಕ್ಕರಿಸಿದ್ದಾರೆ. ಕಾಂಗ್ರೆಸ್ ಇಂದು ಸೋಲಿನ ಹಾದಿಯಲ್ಲಿದೆ ಎಂದರು.
ಭ್ರಷ್ಟಾಚಾರದಿಂದ ನಲುಗಿದೆ ಕಾಂಗ್ರೆಸ್:
ಹಲವು ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್, ಇಂದು ಭ್ರಷ್ಟಾಚಾರದಿಂದಾಗಿ ನಲುಗಿ ಹೋಗಿದೆ. ಕರ್ನಾಟಕದಲ್ಲಿ ಸಿಎಂ ಬಗ್ಗೆ ಜನ ಭ್ರಷ್ಟಾಚಾರ ಕುರಿತು ಮಾತಾಡುವಂತಾಗಿದೆ. ಅಹಿಂದ ಹೆಸರು ಹೇಳಿ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ, ಅಹಿಂದ ಸಮುದಾಯಕ್ಕೇ ಅನ್ಯಾಯ ಮಾಡುತ್ತಿದ್ದಾರೆ. ವಾಲ್ಮೀಕಿ ಹಗರಣದ ಮೂಲಕ ಹಣ ದುರುಪಯೋಗ ಆಗಿರುವುದು ಸಾಬೀತಾಗಿದೆ ಎಂದರು.
ಮೂಡ ಹಗರಣ ಬಿಜೆಪಿ ಹೋರಾಟದ ಫಲವಾಗಿ ಬೆಳಕಿಗೆ ಬಂದಿದೆ. ತನಗೆ ಸೈಟ್ ಹಿಂದುರಿಗಿಸಬೇಕು ಎಂದಿದ್ದರೆ, ಪರಿಹಾರ ಬೇಕು ಎನ್ನುತ್ತಿದ್ದ  ಸಿದ್ದರಾಮಯ್ಯ ಅವರು, ಇದೀಗ ಯಾವುದೇ ಪರಿಹಾರ ನಿರೀಕ್ಷೆ ಮಾಡದೆ ನಿವೇಶನ ಹಿಂದಿರುಗಿಸಿ ತಪ್ಪು ಒಪ್ಪಿಕೊಂಡಂತಾಗಿದೆ ಎಂದರು.

ಇದೇ ವೇಳೆ ಪ್ರೇರಣಾ ಟ್ರಸ್ಟ್ ಕುರಿತು ಕಾಂಗ್ರೆಸ್ ಮಾಡಿದ ಆಪಾದನೆಗಳ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಆಧಾರರಹಿತ ಆರೋಪವಾಗಿದೆ ಎಂದರು.
ದೋಸ್ತಿ ಪಕ್ಷ ನಿರ್ಧಾರ ಮಾಡುತ್ತೆ;
ಉಪಚುನಾವಣೆ ಕುರಿತು ಬಿಜೆಪಿಯ ಸಿ.ಪಿ.ಯೋಗೀಶ್ವ‌ರ್, ಜೆಡಿಎಸ್ ಪಕ್ಷದ ನಿಖಿಲ್ ಕುಮಾರಸ್ವಾಮಿ ಹೆಸರುಗಳು ಕೇಳಿಬರುತ್ತಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ‌ ವಿಜಯೇಂದ್ರ ಅವರು ಅಭ್ಯರ್ಥಿ ಆಯ್ಕೆಯಲ್ಲಿ   ಯಾವುದೇ ಗೊಂದಲಗಳಿಲ್ಲ. ಚನ್ನಪಟ್ಟಣ ಉಪಚುನಾವಣೆಯಲ್ಲಿ ಯಾರು ಅಭ್ಯರ್ಥಿ ಆಗಬೇಕು ಎಂಬುದನ್ನು ಜೆಡಿಎಸ್, ಬಿಜೆಪಿ ವರಿಷ್ಟರು ನಿರ್ಧರಿಸುತ್ತಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಸಹ ಉಸ್ತುವಾರಿ ಡಾ.ಸುಧಾಕರ ರೆಡ್ಡಿ, ವಿಧಾನಸಭೆ ಪ್ರತಿಪಕ್ಷ ನಾಯಕ ಆ‌ರ್.ಅಶೋಕ್, ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ, ಸಂಸದ ಕ್ಯಾ.ಬ್ರಿಜೇಶ್ ಚೌಟ, ವಿಧಾನಪರಿಷತ್ ಅಭ್ಯರ್ಥಿ ಕಿಶೋರ್ ಕುಮಾ‌ರ್ ಪುತ್ತೂರು, ಶಾಸಕರಾಸ ವಿ.ಸುನಿಲ್ ಕುಮಾರ್, ರಾಜೇಶ್ ನಾಯ್ಕ, ಡಾ.ವೈ.ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್, ಹರೀಶ್ ಪೂಂಜ, ಭಾಗೀರಥಿ ಮುರುಳ್ಯ, ಪ್ರತಾಪ್ ಸಿಂಹ ನಾಯಕ್, ಪ್ರಭಾರಿ ಕ್ಯಾ.ಗಣೇಶ್ ಕಾರ್ಣಿಕ್, ಸಹಪ್ರಭಾರಿ ಉದಯಕುಮಾರ ಶೆಟ್ಟಿ, ರಾಜೇಶ್ ಕಾವೇರಿ, ಪ್ರೇಮಾನಂದ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter