ಕೈಕಂಬ: `ಚಿರತೆ ಬಂತು ಚಿರತೆ ಮನೆಯಿಂದ ಯಾರೂ ಹೊರಗೆ ಬರ್ಬೇಡಿ… ಬಾಗಿಲು ಮುಚ್ಚಿ…. ನಿಮ್ಮ ನಿಮ್ಮ ಮಕ್ಕಳ ಬಗ್ಗೆ ಎಚ್ಚರ ವಹಿಸಿ….’ ಹೀಗೆಂದು ಪೊಲೀಸರು ಮೈಕ್ ನಲ್ಲಿ ಕೂಗಿಕೊಂಡು ಸ್ಥಳೀಯ ಜನರಿಗೆ ಎಚ್ಚರಿಕೆ ನೀಡಿದ ಘಟನೆ ಗುರುಪುರದಲ್ಲಿ ನಡೆದಿದೆ. ಪೊಲೀಸರ ಈಕೂಗಾಟದಿಂದ ಸ್ಥಳೀಯರು ಗಾಬರಿಬಿದ್ದು ಮನೆಯ ಕಿಟಲಿ ಬಾಗಿಲುಗಳನ್ನು ಮುಚ್ಚಿ ಮನೆಯೊಳಗಡೆಯೇ ಸೆಟಲ್ ಆಗಿದ್ದರು.
ಘಟನೆಯ ವಿವರ: ಗುರುಪುರದ ಅಲೈಗುಡ್ಡೆ, ಕಡ್ಲೆಗುಡ್ಡೆ, ಮಟ್ಟಿ ಎಂಬಲ್ಲಿ ಹಲವಾರು ಸಮಯಗಳಿಂದ ಚಿರತೆ ಪ್ರತ್ಯಕ್ಷವಾಗಿರುವುದರ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಲ್ಲದೆ ಇತ್ತೀಚೆಗೆ ಗುರುಪುರದ ಕಡ್ಲೆಗುಡ್ಡೆ ಎಂಬಲ್ಲಿನ ದಟ್ಟ ಅರಣ್ಯ ಪ್ರದೇಶದಲ್ಲಿ ಚಿರತೆ ಮರಿಹಾಕಿದ್ದಲ್ಲದೆ ಸ್ಥಳಿಯರನ್ನು ಹೆದರಿಸುತ್ತಿದೆ ಎಂದು ಸ್ಥಳಿಯರು ಮಾಹಿತಿ ನೀಡಿದ್ದರು. ಕಡ್ಲೆಗುಡ್ಡೆ ಸಮೀಪದಲ್ಲಿ ಹಲವಾರು ಮನೆಗಳಿಂದ ನಾಯಿಗಳನ್ನು ಎತ್ತಿಕೊಂಡು ಹೋಗಿ ತಿಂದು ಮುಗಿಸಿತ್ತು. ಅಲ್ಲದೆ ಈ ಪ್ರದೇಶ ನಿರ್ಜನ ಪ್ರದೇಶವಾಗಿರುವುದರಿಂದ ಶಾಲಾ ಮಕ್ಕಳು ಇಲ್ಲಿ ಸಂಚರಿಸಲು ಹೆದರಿದ್ದರು.
ಹೀಗೆ ಹಲವಾರು ಸಮಯಗಳಿಂದ ಚಿರತೆ ಕಾಟ ಕೊಡುವುದರಿಂದ ಪೀಕಲಾಟಕ್ಕೆ ಸಿಲುಕಿದ ಅರಣ್ಯ ಇಲಾಖೆ ಚಿರತೆ ಬಂತು ಚಿರತೆ ಎಂದು ಹೇಳುತ್ತಾ ಅನೌನ್ಸ್ ಮಾಡಿ ಸ್ಥಳೀಯರಿಗೆ ಎಚ್ಚರಿಕೆ ನೀಡಿದೆ. ಇದರಿಂದ ಸ್ಥಳೀಯರು ಇನ್ನಷ್ಟು ಭಯಗೊಳ್ಳುವಂತಾಗಿದೆ.

