ಆಗಸ್ಟ್ 18ನ್ನು ‘ಯಕ್ಷಧ್ರುವ ಪಟ್ಲ ಫೌಂಡೇಷನ್ ಡೇ’ ಎಂದು ಘೋಷಿಸಿದ ಅಮೆರಿಕದ ಮೇಯರ್

ಅಮೆರಿಕದಲ್ಲಿ ತುಳುನಾಡಿ ಯಕ್ಷಗಾನಕ್ಕೆ ಅದ್ಭುತ ಗೌರವ ಸಿಕ್ಕಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ. ಪಟ್ಲ ಸತೀಶ್ ಶೆಟ್ಟಿ ಅವರ ನೇತೃತ್ವದಲ್ಲಿ 9 ಮಂದಿಯ ತಂಡ ಅಮೆರಿಕದಲ್ಲಿ 75 ದಿನಗಳ ಕಾಲ ಯಕ್ಷಗಾನ ಪ್ರದರ್ಶನ ನೀಡಿದೆ. ಇದೀಗ ಈ ಕಾರ್ಯಕ್ರಮ ಮುಗಿಸಿ ಮಂಗಳೂರಿಗೆ ಬಂದಿದ್ದಾರೆ. ಈ ಪಟ್ಲ ಸತೀಶ್ ಶೆಟ್ಟಿ ಅವರು ಮಾಧ್ಯಗಳೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ತುಳುನಾಡಿನ ಗಂಡುಮೆಟ್ಟಿನ ಕಲೆಯಾಗಿರುವ ಯಕ್ಷಗಾನ ಪ್ರದರ್ಶನ ಮತ್ತು ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದು ಹೆಮ್ಮೆ ಪಡುವಂತಾಹ ವಿಷಯ. ಅಲ್ಲಿನ ಜನರು ಕೂಡ ಯಕ್ಷಗಾನ ನಾಟ್ಯ ಮತ್ತು ಭಾಗವತಿಕೆಗೆ ಮನಸೋತು ಕಲಿಯಲು ಆಸಕ್ತಿ ತೋರಿಸಿರುವುದು ಖುಷಿಯ ವಿಚಾರ ಎಂದು ಹೇಳಿದ್ದಾರೆ.
ಇನ್ನು ಅಮೆರಿಕದ ಎರಡು ನಗರಗಳಲ್ಲಿ ಪಟ್ಲ ಫೌಂಡೇಶನ್ ದಿನವನ್ನಾಗಿ ಅಲ್ಲಿನ ಮೇಯರ್ ಘೋಷಣೆ ಮಾಡಿದ್ದಾರೆ. ಇದು ಅವಿಸ್ಮರಣೀಯ ಅನುಭವ. ನಮ್ಮ ಕಲೆಗೆ ಇಂದು ವಿಶ್ವವ್ಯಾಪಿ ಮನ್ನಣೆ ಸಿಗುತ್ತಿದೆ. ಪಟ್ಲ ಫೌಂಡೇಷನ್ ಟ್ರಸ್ಟ್ ಅಮೆರಿಕ ಘಟಕದ ಅಧ್ಯಕ್ಷ ಡಾ.ಅರವಿಂದ ಉಪಾಧ್ಯಾಯ, ಡಾ. ಶ್ರೀಧರ ಆಳ್ವ, ಮಹಾಬಲ ಶೆಟ್ಟಿ, ಉಳಿ ಯೋಗೇಂದ್ರ ಭಟ್ ಮತ್ತಿತರ ಪ್ರಮುಖರು ಅಮೆರಿಕದ 20 ರಾಜ್ಯಗಳಲ್ಲಿ ಯಕ್ಷಗಾನ ಪ್ರದರ್ಶನ ಆಯೋಜಿಸಿದ್ದರು ಅವರಿಗೆ ಧನ್ಯವಾದಗಳು ಎಂದು ತಿಳಿಸಿದರು.
ಇನ್ನು ಈ ಕಾರ್ಯಕ್ರಮದಲ್ಲಿ ಪಟ್ಲ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಅಡ್ಯಾರ್ ಪುರುಷೋತ್ತಮ ಭಂಡಾರಿ, ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ, ಸಂಘಟನಾ ಕಾರ್ಯದರ್ಶಿಗಳಾದ ಕದ್ರಿ ನವನೀತ ಶೆಟ್ಟಿ, ಪ್ರದೀಪ್ ಆಳ್ವ ಕದ್ರಿ, ಬಾಳ ಜಗನ್ನಾಥ ಶೆಟ್ಟಿ, ಜೊತೆ ಕಾರ್ಯದರ್ಶಿ ರವಿಚಂದ್ರ ಶೆಟ್ಟಿ, ಮಾಜಿ ವಿಧಾನಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮತ್ತಿತರರು ಉಪಸ್ಥಿತರಿದ್ದರು. ಯಕ್ಷಧ್ರುವ ಪಟ್ಲ ಫೌಂಡೇಷನ್ ಪ್ರದರ್ಶಿಸಿದ ಯಕ್ಷಗಾನ ಹಾಗೂ ಪಟ್ಲ ಫೌಂಡೇಷನ್ ಕಾರ್ಯ ಚಟುವಟಿಕೆಯನ್ನು ಮೆಚ್ಚಿ ಅಮೆರಿಕದ ವಿಸ್ಕಾನ್ಸಿನ್ ರಾಜ್ಯದ ಬ್ರೂಕ್‌ಫೀಲ್ಡ್ ನಗರದ ಮೇಯರ್ ಸ್ಟೀವನ್ ವಿ. ಪೋಂಟೊ ಅವರು ಆಗಸ್ಟ್ 18 ಅನ್ನು ‘ಯಕ್ಷಧ್ರುವ ಪಟ್ಲ ಫೌಂಡೇಷನ್ ಡೇ’ ಎಂದು ಘೋಷಿಸಿದ್ದಾರೆ.