ದೀಪಿಕಾಪ್ರೌಢಶಾಲೆಗೆ ವಜ್ರಮಹೋತ್ಸವ : ಸೆ.29 ಪೂರ್ವ ಭಾವಿ ಸಭೆ
ಬಂಟ್ವಾಳ: ವಿದ್ಯಾಭಿವೃದ್ಧಿ ಸಮಿತಿ(ರಿ) ಮೊಡಂಕಾಪು ಇದರ ಆಡಳಿತಕ್ಕೊಳಪಟ್ಟ ದೀಪಿಕಾಪ್ರೌಢಶಾಲೆ 60 ನೇ ವರ್ಷ ವಜ್ರಮಹೋತ್ಸವದ ಹೊಸ್ತಿಲಲ್ಲಿದ್ದು, ಈ ಸಮಾರಂಭವನ್ನು ಆರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಪೂರ್ವಭಾವಿ ಸಭೆಯನ್ನು ಸೆ. 29 ರಂದು ಆಯೋಜಿಸಲಾಗಿದೆ ಎಂದು ಶಾಲಾ ಸಂಚಾಲಕ,ಸಮಿತಿಯ ಅಧ್ಯಕ್ಷರಾದ ಪಾ.ವಲೇರೊಯನ್ ಡಿಸೋಜ ಅವರು ತಿಳಿಸಿದ್ದಾರೆ.

ಬುಧವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಈ ಸಭೆಗೆ ಶಾಲೆಯ ಹಿರಿಯ ವಿದ್ಯಾರ್ಥಿಗಳು, ಶಿಕ್ಷಕರು,ನಿವೃತ್ತ ಶಿಕ್ಷಕರು, ಶಿಕ್ಷಕ -ರಕ್ಷಕ ಸಂಘದ ಸದಸ್ಯರು,ವಿದ್ಯಾರ್ಥಿಗಳು,ಪೋಷಕರು ಹಾಗೂ ಸಮಾಜದ ಎಲ್ಲಾ ಬಂಧುಗಳು ಭಾಗವಹಿಸಿ ಸೂಕ್ತ ಸಲಹೆ,ಸೂಚನೆ ನೀಡುವಂತೆ ಅವರು ಮನವಿ ಮಾಡಿದರು.
ವಜ್ರಮಹೋತ್ಸವದ ಹಿನ್ನಲೆಯಲ್ಲಿ ಶಾಲಾ ವಿದ್ಯಾರ್ಥಿಗಳು,ಹಳೇಯವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಅದೇರೀತಿ ಛದ್ಮವೇಷ ಸ್ಪರ್ಧೆ,ಪ್ರಬಂಧ,ಚಿತ್ರಕಲೆ,ಹಗ್ಗಜಗ್ಗಾಟ, ಸಂಗೀತ ಕುರ್ಚಿಗುಂಡುಎಸೆತ ,ಮಹಿಳೆಯರಿಗೆ ತ್ರೋಬಾಲ್ ಸಹಿತ ವಿವಿಧ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
2024 ಡಿ.12 ರಂದು ಶಾಲಾವಾರ್ಷಿಕೋತ್ಸವ ಹಾಗೂ 60 ರ ವಜ್ರಮಹೋತ್ಸವದ ಸಭಾ ಕಾರ್ಯಕ್ರಮ,ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ಸಂಪನ್ನಗೊಳ್ಳಲಿದ್ದು,ಈ ಸಂದರ್ಭದಲ್ಲಿ ಸ್ಮರಣಸಂಚಿಕೆಯನ್ನು ಬಿಡುಗಡೆ ಗೊಳಿಸಲಾಗುವುದು ಎಂದು ವೆಲೇರೊಯನ್ ಡಿಸೋಜ ವಿವರಿಸಿದರು.
60 ವರ್ಷಗಳ ಹಿಂದೆ ತಾಲೂಕಿನ ಕೆಲವೇ ಕೆಲವು ಶಿಕ್ಷಣಸಂಸ್ಥೆಗಳಿದ್ದು,ಆಗಿನ ಫಾದರ್ ಇ.ಎ.ಎ.ಕ್ಯಾಸ್ತಲಿನ್,ಸಾಹಿತಿಗಳಾದ ದಿವಂಗತ ಏರ್ಯ ಲಕ್ಷ್ಮೀನಾರಾಯಣ ಆಳ್ವ,ಮಾಡನ್೯ ಟೈಲ್ಸ್ ಮಾಲಕ ವಿಕ್ಟರ್ ರಸ್ಕೀಂ ಮತ್ರು ಭೂಹಿಡುವಳಿದಾರ ಗುಂಡಿಲ ಮಂಜಪ್ಪ ಶೆಟ್ಟಿ ಅವರ ಮತುವರ್ಜಿಯಲ್ಲಿ ವಿದ್ಯಾಭಿವೃದ್ಧಿ ಸಮಿತಿ ರಚಿಸಿ 1964 ಜೂ.15 ರಂದು ದೀಪಿಕಾ ಪ್ರೌಢಶಾಲೆ ಶಿಕ್ಷಣಸಂಸ್ಥೆ ಸ್ಥಾಪನೆಯಾಗಿದೆ.ತದನಂತರ ಸುತ್ತಮುತ್ತಲಿನ ಸಾವಿರಾರು ಮಂದಿ ಶಿಕ್ಷಣವನ್ನು ಪಡೆದು ದೇಶ,ವಿದೇಶಗಳಲ್ಲಿ ಹಾಗೂ ದೊಡ್ಡೆಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಎಳವೆಯಲ್ಲಿಯೆ ಮಕ್ಕಳಲ್ಲಿ ಅಭಿನಯದ ರುಚಿಯನ್ನು ಮೂಡಿಸುವ ಉದ್ದೇಶದಿಂದ ಶಾಲಾ ಮಕ್ಕಳ ಯಕ್ಷಗಾನ ತಂಡವನ್ನು ಕಟ್ಟಿ ದೂರದ ಅಮೇರಿಕಾದವರೆಗೂ ಕರೆದುಕೊಂಡು ಹೊಗಿ ಪ್ರದರ್ಶನ ನೀಡಿ ಶಾಲೆಯ ಕೀರ್ತಿಯನ್ನು ಹಾಗೂ ನಮ್ಮ ಕರಾವಳಿಯ ಗಂಡು ಕಲೆ ಯಕ್ಷಗಾನ ಸಂಸ್ಕೃತಿಯನ್ನು ದೇಶ,ವಿದೇಶಗಳ ಉದ್ದಗಲಗಳಲ್ಲಿ ಹರಡಿದ ಕೀರ್ತಿ ಈ ಶಾಲೆಯ ಶಿಕ್ಷಕರಾಗಿದ್ದ ಕಾರ್ಕಡ ಶ್ರೀನಿವಾಸ್ ಉಡುಪರದ್ದಾಗಿದೆ.ಅಲ್ಲದೆ ಅವರು ರಾಷ್ಟ್ರಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕರೆಂಬ ಹೆಗ್ಗಳಿಕೆಗೂ ಪಾತ್ರರಾದರೆ, ಗಣಿತ ವಿಷಯದ ಬೋಧನಾ ಪಾಂಡಿತ್ಯ ಹೊಂದಿದ್ದ ದಿವಂಗತರಾದ ಪಿ.ಈಶ್ವರ್ ಭಟ್ ಅವರು ರಾಜ್ಯ ಪ್ರಶಸ್ತಿ ಪುರಸ್ಕೃತರಾಗಿದ್ದರು ಎಂದು ಅವರು ವಿವರಿಸಿದರು.
ಈ ಸಂಸ್ಥೆಯು ಉತ್ತಮ ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡಿಕೊಂಡು ಬಂದಿದ್ದು,ಎಸ್. ಎಸ್.ಎಲ್ ಸಿ ಪರೀಕ್ಷೆಯಲ್ಲಿ ಕಳೆದ 60 ವರ್ಷಗಳಲ್ಲಿ ಸರಾಸರಿ ಶೆ. 95 ಫಲಿತಾಂಶ ಆಗಿದ್ದು ಹಲವು ಬಾರಿ ಶೇ. 100ರ ಸಾಧನೆಯನ್ನು ದಾಖಲಿಸಿದೆ ಎಂದ ಅವರು ಕಳೆದ 60 ವರ್ಷಗಳಿಂದ ಕೇವಲ ಬಾಲಕರಿಗೆ ಮಾತ್ರ ವಿದ್ಯಾಭ್ಯಾಸ ಪಡೆಯುವ ಅವಕಾಶವಿದ್ದು, 2024 – 25 ನೇ ಸಾಲಿನಿಂದ ವಿದಾರ್ಥಿನಿಯರಿಗೂ ಪ್ರವೇಶದ ಅವಕಾಶವನ್ನು ಕಲ್ಪಿಸಲಾಗಿದೆ ಎಂದರು.
ಮಕ್ಕಳ ಶೈಕ್ಷಣಿಕ ಅಗತ್ಯತೆಗಳಿಗೆ ಪೂರಕವಾಗಿ ನೂತನ ಶಾಲಾ ಕಟ್ಟಡ, ವಿಶಾಲವಾದ ತರಗತಿ ಕೋಣೆಗಳು, ವಿಜ್ಞಾನ ಪ್ರಯೋಗಾಲಯ, ವಾಚನಾಲಯ, ವಿಶಾಲವಾದ ಆಟದ ಮೈದಾನ ಹಾಗೂ ಬಿಸಿಊಟದ ತಯಾರಿಕಾ ಘಟಕ, ಬಾಲಕ, ಬಾಲಕಿಯರಿಗೆ ಪ್ರತ್ಯೇಕವಾದ ಶೌಚಾಲಯವನ್ನು ಹೊಂದಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಶಾಲಾ ಟ್ರಸ್ಟಿಗಳಾದ ಅಶ್ವನಿಕುಮಾರ್ ರೈ,ಮಹಮ್ಮದ್ ವಳವೂರು,ಹಿರಿಯ ವಿದ್ಯಾರ್ಥಿಸಂಘದ ಅಧ್ಯಕ್ಷ ರಾಜೇಶ್,ಮುಖ್ಯೋಪಾಧ್ಯಾಯರಾದ ಸಾಧು,ತಿಪ್ಪೇಸ್ವಾಮಿ ಮೊದಲಾದವರಿದ್ದರು.