ಸಿದ್ದಕಟ್ಟೆ ಪ್ರಾ.ಕೃ.ಪ. ಸ. ಸಂಘದ ಸದಸ್ಯರಿಗೆ ಶೇ 12 ಡಿವಿಡೆಂಟ್ ಘೋಷಣೆ : ಪ್ರಭಾಕರ ಪ್ರಭು
ಬಂಟ್ವಾಳ: ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2023-24 ನೇ ಸಾಲಿನಲ್ಲಿ 445.45 ಕೋಟಿ ವ್ಯವಹಾರ ನಡೆಸಿ, 1.68 ಕೋ.ರೂ. ಲಾಭ ಗಳಿಸಿದ್ದು,ಸಂಘದ ಸದಸ್ಯರಿಗೆ ಶೇ 12 ರಷ್ಟು ಡಿವಿಡೆಂಟನ್ನು ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಪ್ರಕಟಿಸಿದರು.
ಶನಿವಾರ ಸಿದ್ದಕಟ್ಟೆಯಲ್ಲಿರುವ ಸಂಘದ ಕೇಂದ್ರ ಕಛೇರಿಯ ಬೆಳ್ಳಿಪ್ಪಾಡಿ ಕೃಷ್ಣ ರೈ ರೈತ ಸಭಾಂಗಣದಲ್ಲಿ ನಡೆದ 2023-24 ನೇ ಸಾಲಿನ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತಾನಾಡಿದರು.ಸಂಘವು ವರದಿ ವರ್ಷದಲ್ಲಿ 1547 ಮಂದಿ ರೈತರಿಗೆ ಶೂನ್ಯ ಬಡ್ಡಿದರದಲ್ಲಿ 34.55 ಕೋ.ರೂ. ಸಾಲವನ್ನು ಮಂಗಳಾ ಕಿಸಾನ್ ಕಾರ್ಡ್ ಮೂಲಕ ವಿತರಿಸಲಾಗಿದ್ದು, ಶೇ.3 ಬಡ್ಡಿದರದಲ್ಲಿ ಕೃಷಿ ಅಭಿವೃದ್ದಿಗಾಗಿ 243 ಮಂದಿ ರೈತರಿಗೆ 7 ಕೋ.ರೂ. ಸಾಲ ನೀಡಿದೆ.ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಸುಗಳ ನಿರ್ವಹಣೆಗಾಗಿ ಶೂನ್ಯ ಬಡ್ಡಿದರದಲ್ಲಿ 2.59 ಕೋ.ರೂ.ಸಾಲ ನೀಡಲಾಗಿದೆ.
ಜಮೀನು ಅಡಮಾನ ಸಾಲ ಮತ್ತು ವೈಯಕ್ತಿಕ ಸಾಲ ಸೇರಿದಂತೆ ಒಟ್ಟು 10.80 ಕೋಟಿ ಸಾಲ ವಿತರಿಸಲಾಗಿದೆ. ಒಟ್ಟಿನಲ್ಲಿ 2194 ಸದಸ್ಯರಿಗೆ 55 ಕೋಟಿ ಸಾಲವನ್ನು ನೀಡಲಾಗಿದೆ ಎಂದರು.
ಲೆಕ್ಕ ಪರಿಶೋಧನೆಯಲ್ಲಿ ಸಂಘವು ಸತತವಾಗಿ ‘ಎ’ ಗ್ರೇಡ್ ಬಂದಿದ್ದು,ಶೇ. 98 ಸಾಲ ವಸೂಲಾತಿ ಯಲ್ಲಿ ಪ್ರಗತಿ ಸಾಧಿಸಲಾಗಿದೆ , ಪ್ರಸಕ್ತ ಸಾಲಿನಲ್ಲಿ ಶೆ.100 ಸಾಲ ವಸೂಲಾತಿ ಸಾಧಿಸಲು ಈ ಸಂದರ್ಭ ಸದಸ್ಯರ ಸಹಕಾರ ಯಾಚಿಸಿದರು.
ಸಂಘದ ವ್ಯಾಪ್ತಿಯ ನಿರುದ್ಯೋಗಿ ಮಹಿಳೆಯರಿಗೆ ಸ್ವ ಉದ್ಯೋಗಕ್ಕೆ ಒತ್ತು ನೀಡುವ ಉದ್ದೇಶದಿಂದ 60 ಮಂದಿ ಮಹಿಳೆಯರಿಗೆ ಮಂಗಳೂರು ಸರಕಾರಿ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ಸಹಯೋಗದಲ್ಲಿ “ಟೈಲರಿಂಗ್ ಮತ್ತು ಫ್ಯಾಶನ್ ಡಿಸೈನಿಂಗ್ “ತರಬೇತಿಯನ್ನು ರೋಟರಿ ಕ್ಲಬ್ ಗಳ ಸಹಯೋಗದಲ್ಲಿ ಸಂಘದ ವತಿಯಿಂದ ಉಚಿತವಾಗಿ ನೀಡಲಾಗುತ್ತಿದೆ ಎಂದು ಅಧ್ಯಕ್ಷ ಪ್ರಭಾಕರ ಪ್ರಭು ತಿಳುಸಿದರು.
ಕೃಷಿ ಇಲಾಖಾ ವತಿಯಿಂದ ಸಹಾಯ ಧನದಲ್ಲಿ ಸಂಘದ ವತಿಯಿಂದ ಎರಡು ಟ್ರಾಕ್ಟರ್ ಗಳನ್ನು ಖರೀದಿಸಿ ಭತ್ತ ಬೇಸಾಯ ಮಾಡುವ ರೈತರಿಗೆ ಉಳುಮೆ ಮಾಡಲು ಯೋಗ್ಯ ಬಾಡಿಗೆ ದರದಲ್ಲಿ ನೀಡಲಾಗುತ್ತಿದೆ. ಸಂಘದ ವತಿಯಿಂದ ಪಡಿತರ ವ್ಯವಸ್ಥೆ ವಿತರಣೆ ಮಾಡಲಾಗುತ್ತಿದ್ದು,ಕೃಷಿ ಔಷಧಿಗಳು,ರಾಸಾಯನಿಕ ಮತ್ತು ಸಾವಯವ ಗೊಬ್ಬರ ಇತ್ಯಾದಿಗಳ ಮಾರಾಟ ಸೌಲಭ್ಯಗಳನ್ನು ಸಂಘವು ಒದಗಿಸುತ್ತಿದೆ ಎಂದರು.
ಸಂಘವು ನಿರಂತರವಾಗಿ ಪ್ರಗತಿ ಸಾಧಿಸಿದ್ದಕ್ಕಾಗಿ ದ.ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಮೆಚ್ಚುಗೆ ವ್ಯಕ್ತ ಪಡಿಸಿದೆ . ಸತತವಾಗಿ ಪ್ರಶಸ್ತಿ ಪುರಸ್ಕಾರಕ್ಕೂ ಪಾತ್ರವಾಗಿದೆ.
ನಿವೃತ್ತ ಯೋಧರಿಗೆ ಗೌರವರ್ಪಣೆ:
ರಾಷ್ಟ್ರ ಸೇವೆಯಲ್ಲಿ ಕರ್ತವ್ಯ ಸಲ್ಲಿಸಿ ನಿವೃತ್ತಿಗೊಂಡು ಕೃಷಿಯಲ್ಲಿ ತೊಡಗಿಸಿಕೊಂಡ ರಾಜು ಪೂಜಾರಿ ಹಲಾಯಿ, ದಯಾನಂದ ಶೆಟ್ಟಿ,ಮೋಹನ್ ಜಿ ಮೂಲ್ಯರವರನ್ನು ಈ ಸಂದರ್ಭ ಗೌರವಿಸಲಾಯಿತು. ಸಂಘದಲ್ಲಿ ಸದಸ್ಯರಾಗಿದ್ದು,ನಿಧನರಾದ ಸದಸ್ಯರಿಗೆ ಮೌನ ಪ್ರಾರ್ಥನೆಯ ಮೂಲಕ ಶೃದ್ದಾಂಜಲಿ ಸಲ್ಲಿಸಲಾಯಿತು.
ಉಪಾಧ್ಯಕ್ಷರಾದ ಸತೀಶ್ ಪೂಜಾರಿ ,ನಿರ್ದೇಶಕರಾದ ಪದ್ಮರಾಜ್ ಬಲ್ಲಾಳ್ ಮವಂತೂರು,ಸಂದೇಶ್ ಶೆಟ್ಟಿ ಪೊಡುಂಬ,ರಾಜೇಶ್ ಶೆಟ್ಟಿ ಕೊನೆರಬೆಟ್ಟು,ದಿನೇಶ್ ಪೂಜಾರಿ ಹುಲಿಮೇರು,ವೀರಪ್ಪ ಪರವ, ಜಾರಪ್ಪ ನಾಯ್ಕ,ಉಮೇಶ್ ಗೌಡ,ದೇವರಾಜ್ ಸಾಲ್ಯಾನ್, ಅರುಣಾ ಶೆಟ್ಟಿ, ಮಂದರಾತಿ ಎಸ್ ಶೆಟ್ಟಿ,ವೃತ್ತಿ ಪರ ನಿರ್ದೇಶಕರಾದ ಮಾಧವ ಶೆಟ್ಟಿಗಾರ್ ಉಪಸ್ಥಿತರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆರತಿ ಶೆಟ್ಟಿ ವರದಿ ವಾಚಿಸಿ ಲೆಕ್ಕಪತ್ರ ಮಂಡಿಸಿದರು. ನಿರ್ದೇಶಕರಾದ ಹರೀಶ್ ಆಚಾರ್ಯ ಸ್ವಾಗತಿಸಿ, ಮಂದಾರತಿ ಎಸ್ ಶೆಟ್ಟಿ ವಂದಿಸಿದರು.
ಸಂಘದ ಸಿಬ್ಬಂದಿ ಸುಭಾಸ್ ಬಂಗೇರ ಕಾರ್ಯಕ್ರಮ ನಿರೂಪಿಸಿದರು.