ಉಡುಪಿ: ಮಾರಣಬಲೆ ತರಲು ಹೋಗಿದ್ದ ಮೀನುಗಾರ ಸಮುದ್ರದಲ್ಲಿ ಮುಳುಗಿ ಸಾವು

ಮಾರಣ ಬಲೆ ಬಿಡಲು ಹೋದ ಮೀನುಗಾರ ಸಮುದ್ರ ಪಾಲಾದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಪಾರಂಪಳ್ಳಿಯ ಸಮುದ್ರ ತೀರದಲ್ಲಿ ನಡೆದಿದೆ. ಮೃತಪಟ್ಟವರು ಬಾಸ್ಕರ ಪೂಜಾರಿ ( 55) ಎಂದು ಗುರುತಿಸಲಾಗಿದೆ.
ಮೀನುಗಾರ ಭಾಸ್ಕರ್ ಅವರು ಪಾರಂಪಳ್ಳಿ ಮರಿನಾ ಮನೆಯ ಗೆಸ್ಟ್ ಹೌಸ್ ಬಳಿ ಮಾರಣಬಲೆ ಬಿಟ್ಟಿದ್ದರು. ಈ ಬಲೆಯನ್ನು ಮೇಲಕ್ಕೆತ್ತಲು ಸಮುದ್ರಕ್ಕೆ ಇಳಿದಾಗ ಅಲೆಗಳಿಗೆ ಸಿಲುಕಿ ಸಮುದ್ರ ಪಾಲಾಗಿದ್ದಾರೆ.
ತಕ್ಷಣಕ್ಕೆ ಕರಾವಳಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ನೆರವಿಗೆ ಆಗಮಿಸಿ, ಮೀನುಗಾರನನ್ನು ರಕ್ಷಿಸಿ ಆ ಕೂಡಲೇ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೀನುಗಾರ ಭಾಸ್ಕರ ಪೂಜಾರಿ ಸಾವನ್ನಪ್ಪಿದ್ದಾರೆ. ಈ ಘಟನೆಗೆ ಸಂಬಂಧ ಪಟ್ಟಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.