ಪೊಳಲಿಗೆ ಬಾರದ ಯಂತ್ರ: ಹೋರಾಟದ ಕುರಿತು ಸೆ.9 ರಂದು ಸಮಾಲೋಚನಾ ಸಭೆ
ಪೊಳಲಿ: ಪೊಳಲಿ(ಅಡ್ಡೂರು ) ಪಲ್ಗುಣಿ ಸೇತುವೆಯಲ್ಲಿ ಘನವಾಹನಗಳ ಸಂಚಾರವನ್ನು ನಿರ್ಬಂಧಿಸಿರುವ ಹಿನ್ನಲೆಯಲ್ಲಿ ತೊಂದರೆಗೊಳಗಾದ ಪೊಳಲಿ ಸುತ್ತಮುತ್ತಲಿನ ಗ್ರಾಮಸ್ಥರು ಸೆ.9 ರಂದು (ಸೋಮವಾರ) ಬೆಳಿಗ್ಗೆ 10 ಗಂಟೆಗೆ ಪೊಳಲಿ ಸರ್ವ ಮಂಗಳ ಸಭಾಭವನದಲ್ಲಿ ಸಭೆ ಸೇರಿ ಸಮಾಲೋಚನೆ ನಡೆಸಿ ಮುಂದಿನ ಹೋರಾಟದ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ.

ಬಂಟ್ವಾಳ ತಾಲೂಕಿನ ಕರಿಯಂಗಳ, ಬಡಗಬೆಳ್ಳೂರು , ಅಮ್ಮುಂಜೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನಾಗರಿಕರು,ವಿವಿಧ ಸಂಘಸಂಸ್ಥೆಯ ಪ್ರತಿನಿಧಿಗಳು ಹಾಗೂ ವಿವಿಧ ಪಕ್ಷದ ಜನಪ್ರತಿನಿಧಿಗಳು ಈ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಆಗಸ್ಟ್ 16 ರಂದು ಜಿಲ್ಲಾಡಳಿತ ದುರಸ್ಥಿಯ ನೆಪದಲ್ಲಿ ಪೊಳಲಿ ಪಲ್ಗುಣಿ ಸೇತುವೆಯಲ್ಲಿ ಘನವಾಹನ ಸಂಚಾರ ವನ್ನು ಏಕಾಏಕಿ ನಿಷೇಧಿಸಿದ ಪರಿಣಾಮ ಪ್ರತಿನಿತ್ಯ ಕೆಲಸಗಳಿಗೆ ತೆರಳುವ ಕಾರ್ಮಿಕರ ಇತರೆ ನೌಕರರು, ಶಾಲಾ ಮಕ್ಕಳು ಹಾಗೂ ಶ್ರೀಕ್ಷೇತ್ರ ಪೊಳಲಿಗೆ ಬರುವಂತ ಭಕ್ತಾದಿಗಳಿಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸ್ಥಳೀಯ ನಾಗರಿಕರ ಆಕ್ರೋಶಕ್ಕೆ ಮಣಿದು ಆ. 23 ರಂದು ಜಿಲ್ಲಾಧಿಕಾರಿಗಳು ಸೇತುವೆಯ ಪರಿಶೀಲನೆಗಾಗಮಿಸಿದ ವೇಳೆ ಬಸ್ಸು ಮತ್ತು ಶಾಲಾ ವಾಹನಗಳಿಗೆ ಅವಕಾಶವನ್ನು ಕಲ್ಪಿಸುವಂತೆ ಆಗ್ರಹಿಸಿದ್ದರು. ಈ ಸಂದರ್ಭ ಜಿಲ್ಲಾಧಿಕಾರಿಯವರು ಸೇತುವೆಯ ಧಾರಣ ಸಾಮರ್ಥ್ಯವನ್ನು ಪರಿಶೀಲಿಸುವ ಯಂತ್ರವು ಬಂದು ಪರಿಶೀಲಿಸಿದ ಬಳಿಕ ನೀಡುವ ವರಧಿಯನ್ನಾಧರಿಸಿ ನಿರ್ಧಾರವನ್ನು ಕೈಗೊಳ್ಳುವುದಾಗಿ ನಮಗೆ ಭರವಸೆಯನ್ನು ನೀಡಿದ್ದರು. ಆದರೆ ಇದುವರೆಗೆ ಯಂತ್ರ ಬಾರದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಈ ನಿಟ್ಟಿನಲ್ಲಿ ಮುಂದಿನ ಹೋರಾಟ ಕೈಗೊಳ್ಳಲು ನಿರ್ಧರಿಸಿರುವ ಸ್ಥಳೀಯರು ಸೆ.9 ರಂದು ಸರ್ವಮಂಗಳಾ ಸಭಾಂಗಣದಲ್ಲಿ ಸಮಾಲೋಚನಾ ಸಭೆ ನಡೆಸಲು ಮುಂದಾಗಿದ್ದಾರೆ.