ಬೆಳ್ತಂಗಡಿ: ಪೊಲೀಸ್ ಭದ್ರತೆಯಲ್ಲಿ ಸಾರ್ವಜನಿಕ ರಸ್ತೆ ಒತ್ತುವರಿ ತೆರವು ಕಾರ್ಯಾಚರಣೆ
ಬೆಳ್ತಂಗಡಿ: ಪುದುವೆಟ್ಟು ಗ್ರಾಮದ ಮಡ್ಯದಲ್ಲಿ ಸೆ.2ರಂದು ಪೊಲೀಸ್ ಭದ್ರತೆಯಲ್ಲಿ ರಸ್ತೆ ಒತ್ತುವರಿ ತೆರವುಗೊಳಿಸಿ, ಇಲ್ಲಿನ ಗ್ರಾಮ ಪಂಚಾಯತ್ ರಸ್ತೆಯನ್ನು ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡುವ ಕಾರ್ಯ ಮಾಡಿದೆ.
ಕಳೆದ ಗ್ರಾಮ ಸಭೆಯ ಬಳಿಕ ಮಡ್ಯದಿಂದ ಹೊಳೆಯವರೆಗಿನ ಪಂಚಾಯತ್ ರಸ್ತೆಯನ್ನು ಸ್ಥಳೀಯ ನಿವಾಸಿಯೊಬ್ಬರು ಅತಿಕ್ರಮಣ ಮಾಡಿ, ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸಿದ್ದರು. ಬಳಿಕ ಗ್ರಾಮಸ್ಥರು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜತೆ ಸಭೆ ನಡೆಸಿ ರಸ್ತೆ ತೆರವುಗೊಳಿಸುವಂತೆ ಕೇಳಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಸೆಪ್ಟೆಂಬರ್ 2 ರಂದು ಇಲ್ಲಿನ ಗ್ರಾಮ ಪಂಚಾಯತ್ ಪೊಲೀಸರ ಭದ್ರತೆಯಲ್ಲಿ ರಸ್ತೆ ತೆರವುಗೊಳಿಸಿದೆ.
ರಸ್ತೆ ತೆರವುಗೊಳಿಸಲು ಮಡ್ಯದಿಂದ ಹೊಳೆಗೆ ಜೆಸಿಬಿ ತರಬೇಕಿತ್ತು. ಆದರೆ, ಚಕ್ರ ಇಲ್ಲದ ಜೀಪ್ ಮಾರ್ಗ ಮಧ್ಯೆ ನಿಂತಿದ್ದರಿಂದ ಈ ಕಾರ್ಯಾಚರಣೆಯಲ್ಲಿ ಕೊಂಚ ವಿಳಂಬವಾಯಿತು. ಕೆಲ ಹೊತ್ತುಗಳ ಕಾಲ ವಾದ-ವಿವಾದ ನಡೆದು ರಸ್ತೆಗೆ ಅಡ್ಡಲಾಗಿ ನಿರ್ಮಿಸಿದ್ದ ಅಕ್ರಮ ಚರಂಡಿಯನ್ನು ತೆರವುಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಯಿತು.
ಕಾರ್ಯಾಚರಣೆ ವೇಳೆ ಸ್ಥಳದಲ್ಲಿ ಧರ್ಮಸ್ಥಳ ಠಾಣೆಯ ಎಸ್‌ಐ ಕಿಶೋರ್ ಹಾಗೂ ಸಿಬ್ಬಂದಿ ಭದ್ರತೆ ಒದಗಿಸಿದರು. ಗ್ರಾ.ಪಂ.ಅಧ್ಯಕ್ಷೆ ಅನಿತಾ, ಉಪಾಧ್ಯಕ್ಷ ಪೂರ್ಣಾಕ್ಷ, ಮಾಜಿ ಅಧ್ಯಕ್ಷ ಯಶವಂತ ಗೌಡ, ಸದಸ್ಯರಾದ ಭಾಸ್ಕರ, ರಾಮೇಂದ್ರ, ವನಿತಾ, ಇಂದಿರಾ, ರೇಣುಕಾ, ಅಪ್ಪಿ ಸೇರಿದಂತೆ ಪಿಡಿಒ ರವಿ ಬಸಪ್ಪನಗೌಡ, ಡಿಸಿಎಫ್ ರವಿಚಂದ್ರನ್ ಇದ್ದರು.