90 ಮಂದಿ ಕಲಾವಿದರ ಮೇಳೈಕೆಯಲ್ಲಿ ನಡೆಯಲಿದೆ ಪೊಳಲಿ ಯಕ್ಷೋತ್ಸವ; ಡಾ. ಎಂ. ಪ್ರಭಾಕರ ಜೋಷಿಗೆ ಪ್ರಶಸ್ತಿ

ಜನಪ್ರಿಯ ಪೊಳಲಿ ಯಕ್ಷೋತ್ಸವ ಕಾರ್ಯಕ್ರಮ ಈ ಬಾರಿ ಅಕ್ಟೋಬರ್ 5 ರ ಶನಿವಾರದಂದು ಜರಗಲಿದೆ. ಈ ಬಾರಿಯ ಪೊಳಲಿ ಯಕ್ಷೋತ್ಸವ ಪ್ರಶಸ್ತಿಯನ್ನು ಹಿರಿಯ ವಿದ್ವಾಂಸ, ಖ್ಯಾತ ಅರ್ಥದಾರಿ ಡಾ. ಎಂ. ಪ್ರಭಾಕರ ಜೋಷಿ ಅವರಿಗೆ ಘೋಷಿಸಲಾಗಿದೆ. ಡಾ. ಜೋಷಿ ಯವರು ತಿಟ್ಟುಬೇಧವಿಲ್ಲದೇ ಕರಾವಳಿಯ ಯಕ್ಷಗಾನ ಕಲೆಗೆ ನೀಡಿದ ಅಪಾರ ಕೊಡುಗೆಗೆ ಈ ಗೌರವದ ಪ್ರಶಸ್ತಿ ಸಲ್ಲುತ್ತದೆ.
ಈ ಬಾರಿಯ ಯಕ್ಷೋತ್ಸವದಲ್ಲಿ ಸಂಜೆ 5ರಿಂದ ತುಳು ಯಕ್ಷರಂಗದಲ್ಲಿ ಕ್ರಾಂತಿ ಬರೆದ “ಕಚ್ಚೂರ ಮಾಲ್ದಿ” ಪ್ರಸಂಗ ಪ್ರದರ್ಶನವಾಗಲಿದೆ. ರಾತ್ರಿ 10 ರಿಂದ ಭಾರತರತ್ನ ಪ್ರಸಂಗ ನಡೆಯಲಿದ್ದು, ತೆಂಕುತಿಟ್ಟಿನ ಪ್ರಸಿದ್ಧ 22 ಮಂದಿ ಹಿಮ್ಮೇಳ ಕಲಾವಿದರು, ಪ್ರತಿಭಾನ್ವಿತ ಹಿರಿ ಮತ್ತು ಕಿರಿಯ 67 ವೇಷಧಾರಿಗಳು ಸೇರಿದಂತೆ ಒಟ್ಟು 90 ಮಂದಿ ಕಲಾವಿದರ ಪ್ರತಿಭಾದರ್ಶನದಲ್ಲಿ ಪೊಳಲಿ ಯಕ್ಷೋತ್ಸವ ನಡೆಯಲಿದೆ.
ವರ್ಷಂಪ್ರತಿ ನಡೆಯುವ ಪೊಳಲಿ ಯಕ್ಷೋತ್ಸವದಲ್ಲಿ ಯಕ್ಷಗಾನಕ್ಕೆ ಕೊಡುಗೆ ನೀಡಿದ ಸಾಧಕರಿಗೆ ಸನ್ಮಾನಿಸುವ ಸಂಪ್ರದಾಯವಿದೆ. ಈ ಬಾರಿಯ ಪೊಳಲಿ ಯಕ್ಷೋತ್ಸವ ಪ್ರಶಸ್ತಿಯನ್ನು ಹಿರಿಯ ವಿದ್ವಾಂಸ, ಖ್ಯಾತ ಅರ್ಥದಾರಿ ಡಾ. ಎಂ. ಪ್ರಭಾಕರ ಜೋಷಿ ಅವರಿಗೆ ಘೋಷಿಸಲಾಗಿದೆ. ಇದೇ ಸಂದರ್ಭ ಶ್ರೀ ದುರ್ಗಾ ಮಕ್ಕಳ ಮೇಳ ಕಟೀಲು ಮತ್ತು ವಿನಾಯಕ ಯಕ್ಷಕಲಾ ಫೌಂಢೇಷನ್ ಕೆರೆಕಾಡು ಇವರಿಗೂ ಗೌರವಾರ್ಪಣೆ ನಡೆಯಲಿದೆ. ಹಾಗೂ ಇತ್ತೀಚಿಗೆ ಅಗಲಿದ ಸುಬ್ರಹ್ಮಣ್ಯ ಧಾರೇಶ್ವರ, ಪೆರುವಾಯಿ ನಾರಾಯಣ ಶೆಟ್ಟಿ, ಕುಂಬ್ಳೆ ಶ್ರೀಧರ ರಾವ್, ಗಂಗಾಧರ ಜೋಗಿ ಪುತ್ತೂರು ಅವರ ಸಂಸ್ಮರಣೆ ಜರಗಲಿದೆ.