ಎಂಎಲ್ ಸಿ ಐವಾನ್ ವಿರುದ್ದ ಬಂಟ್ವಾಳ ಠಾಣೆಯಲ್ಲಿ ದೂರು ದಾಖಲು
ಬಂಟ್ವಾಳ:ಸೋಮವಾರ ಮಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷ ನಡೆಸಿದ ಪ್ರತಿಭಟನೆಯ ವೇಳೆ ರಾಜ್ಯಪಾಲರನ್ನು ವಾಪಾಸ್ ಕರೆಸಿಕೊಳ್ಳದಿದ್ದರೆ ಬಾಂಗ್ಲಾದೇಶದ ಪ್ರದೇಶದ ಪ್ರಧಾನಿಗೆ ಆದಂತೆ ರಾಜ್ಯಪಾಲರ ಕಚೇರಿಗೂ ಆಗಲಿದೆ ಎಂದು ಪ್ರಚೋದನಕಾರಿ ಭಾಷಣಗೈದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಯುವಮೋರ್ಚಾ ದೂರು ದಾಖಲಿಸಿದೆ.

ಮೂಡಾ ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿಗಳ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ನಡೆಸಲು ಅನುಮತಿ ನೀಡಿರುವುದನ್ನು ವಿರೋಧಿಸಿ ಸೋಮವಾರ ಮಂಗಳೂರು ಪಾಲಿಕೆಯ ಮುಂಭಾಗ ಕಾಂಗ್ರೆಸ್ ನಡೆಸುತ್ತಿದ್ದ ಪ್ರತಿಭಟನೆಯ ವೇಳೆ ವಿ.ಪ. ಸದಸ್ಯ ಐವನ್ ಡಿಸೋಜ ಅವರು ರಾಜ್ಯಪಾಲರ ವಿರುದ್ಧ ಪ್ರಚೋದನಕಾರಿ ಹಾಗೂ ದಂಗೆ ಎಬ್ಬಿಸುವ ರೀತಿಯ ಹೇಳಿಕೆಗಳನ್ನು ನೀಡಿದ್ದು ,ಅವರ ವಿರುದ್ಧ ಕೇಸು ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪುರಸಭಾ ಸದಸ್ಯ ಹರಿಪ್ರಸಾದ್ ಭಂಡಾರಿಬೆಟ್ಟು ಅವರು ದೂರು ನೀಡಿದ್ದಾರೆ.
ಒಂದು ವೇಳೆ ರಾಜ್ಯಪಾಲರನ್ನು ರಾಷ್ಟ್ರಪತಿಗಳು ವಾಪಸ್ ಕರೆಸಿಕೊಳ್ಳದಿದ್ದರೆ ಬಾಂಗ್ಲಾದೇಶ ಪ್ರಧಾನಮಂತ್ರಿಗಳಿಗೆ ಬಂದ ಪರಿಸ್ಥಿತಿ ರಾಜ್ಯಪಾಲರ ಕಚೇರಿಗೂ ಬರಲಿದೆ, ನಮ್ಮ ಮುಂದಿನ ಹೋರಾಟ ಚಲೋ ಗವರ್ನರ್ ಆಫೀಸ್ ಎಂದು ಐವಾನ್ ಹೇಳಿಕೆ ನೀಡಿದ ಹೇಳಿಕೆಯ ಬೆನ್ನಲ್ಲೇ ಕಾಂಗ್ರೆಸ್ ಕಾರ್ಯಕರ್ತರು ಬಸ್ಸಿಗೆ ಕಲ್ಲೆಸೆದ ಘಟನೆಯೂ ನಡೆದು ಹಿಂಸಾಚಾರಕ್ಕು ತಿರುಗಿತ್ತು.ಹಾಗಾಗಿ ಅವರ ವಿರುದ್ದ ಪ್ರಕರಣ ದಾಖಲಿಸಿ,ಬಂಧಿಸುವಂತೆ ಒತ್ತಾಯಿಸಲಾಗಿದೆ.
ಈ ಸಂದರ್ಭ ಬಿಜೆಪಿ ಬಂಟ್ವಾಳ ಮಂಡಲ
ಯುವಮೋರ್ಚಾ ಅಧ್ಯಕ್ಷ ದಿನೇಶ್ ದಂಬೆದಾರು,ಜಿಲ್ಲಾ ಕಾರ್ಯದರ್ಶಿ
ಸುರೇಶ್ ಕೋಟ್ಯಾನ್, ಪ್ರಮುಖರಾದ ಯಶೋಧರ್ ಕರ್ಬೇಟ್ಟು. ಕಾರ್ತಿಕ್ ಬಳ್ಳಾಲ್, ಹರೀಶ್ ಶೆಟ್ಟಿ, ಮನೋಜ್ ಶೆಟ್ಟಿ, ಹರಿಪ್ರಸಾದ್ ಭಂಡಾರಿಬೆಟ್ಟು, ಸಂಪತ್ ಕುಮಾರ್ ಕಡೇಶ್ವಾಲ್ಯ ಪುರುಷೋತ್ತಮ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.