ಕಲ್ಲಡ್ಕ ಶಾಲೆಯಲ್ಲಿ ನ್ಯಾಯವಾದಿಗಳೊಂದಿಗೆ ರಕ್ಷಾಬಂಧನ ಆಚರಣೆ
ಬಂಟ್ವಾಳ: ವಿವಿಧ ತಾಲೂಕಿನ ನ್ಯಾಯವಾದಿಗಳ ಜೊತೆ ರಕ್ಷಾಬಂಧನ ಕಾರ್ಯಕ್ರಮವು ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿಸೋಮವಾರ ನಡೆಯಿತು.

ಸಾಹಿತ್ಯ, ಕ್ರೀಡೆ, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಕೊಂಡಿರುವ, ಜಾಹೀರಾತು, ಸಿನಿಮಾ ಹಾಗೂ ಧಾರವಾಹಿಗಳಲ್ಲಿ ಅಭಿನಯಿಸಿರುವ ಬಿ.ಸಿ.ರೋಡಿನ ನ್ಯಾಯವಾದಿ ರವೀಂದ್ರ ಕುಕ್ಕಾಜೆ ಮಾತನಾಡಿ, “ಶಿಸ್ತು, ಸಂಯಮ ಹಾಗೂ ಶ್ರದ್ಧೆಗೆ ಹೆಸರುವಾಸಿಯಾಗಿರುವ ಕಲ್ಲಡ್ಕ ಶ್ರೀರಾಮ ವಿದ್ಯಾ ಸಂಸ್ಥೆಯಲ್ಲಿ ರಕ್ಷಾಬಂಧನ ಆಚರಿಸುತ್ತಿರುವುದಕ್ಕೆ ಸಂತಸವಾಗಿದೆ. ಸಹೋದರ ಸಹೋದರಿಯ ಭಾತೃತ್ವವನ್ನು ತೋರಿಸುವ ಈ ಆಚರಣೆಯು ಎಲ್ಲಾ ಹಬ್ಬಗಳಿಗಿಂತಲೂ ವಿಶೇಷವಾದುದು. ಕೇವಲ ತಂಗಿ ಅಣ್ಣನಿಗೆ ಮಾತ್ರವಲ್ಲದೆ ಸಹೋದರ ಸಮನಾಗಿರುವ ಎಲ್ಲರಿಗೂ ರಕ್ಷಾಧಾರಣೆ ಮಾಡಲಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನ್ಯಾಯವಾದಿಗಳಿಗೆ ಸಂಸ್ಥೆಯ ಸಂಸ್ಥಾಪಕರಾದ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಶಾಲು ಹೊದಿಸಿ ಗೌರವಿಸಿದರು. ಹಾಗೂ ಅಧ್ಯಾಪಕವೃಂದದವರು ಆರತಿ ಬೆಳಗಿ, ಬಾಗಿನ ನೀಡಿ ಗೌರವಿಸಿದರು. ನಂತರ ವಿದ್ಯಾರ್ಥಿಗಳು ವೇದಿಕೆಯಲ್ಲಿದ್ದ ಅತಿಥಿ ಗಣ್ಯರಿಗೆ ರಕ್ಷಾಧಾರಣೆ ಮಾಡಿದರು. ವಿದ್ಯಾರ್ಥಿನಿ ಮಾನಸ ಪ್ರೇರಣಾ ಗೀತೆ ಹಾಡಿದರು.

ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತರು, ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆಯ ಸಂಸ್ಥಾಪಕಿ ನ್ಯಾಯವಾದಿ ಶೈಲಜಾ ರಾಜೇಶ್ ಮಾತನಾಡಿ, “ರಕ್ಷಾಬಂಧನವು ಅಣ್ಣ ತಂಗಿಯರ ಬಾಂಧವ್ಯವನ್ನು ಪ್ರತಿಯೊಬ್ಬರೂ ಭಾವನಾತ್ಮಕವಾಗಿ ಸ್ಮರಿಸುವ ದಿನವಾಗಿದೆ. ಒಡಹುಟ್ಟಿದವರು ಮಾತ್ರ ಅಣ್ಣ ತಂಗಿಯಲ್ಲ, ಸಹೋದರ ಭಾವನೆ ಹೊಂದಿರುವ ಪ್ರತಿಯೊಬ್ಬರು ಅಣ್ಣ ತಂಗಿಯರೇ ಆಗಿರುತ್ತಾರೆ. ನಿಷ್ಕಲ್ಮಶವಾದ ಸಹೋದರ ಭಾವನೆಯನ್ನು ಹೊಂದಿರುವ ಪ್ರತಿಯೊಬ್ಬರು ರಕ್ಷಾಧಾರಣೆಯನ್ನು ಮಾಡುತ್ತಾರೆ. ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡುವಲ್ಲಿ ಶಿಕ್ಷಕರ ಹಾಗೂ ಹೆತ್ತವರ ಪಾತ್ರ ಪ್ರಮುಖವಾದುದು. ಇಲ್ಲಿಯ ವಿದ್ಯಾರ್ಥಿಗಳಲ್ಲಿ ಶಿಸ್ತಿನ ಜೊತೆ ಸಂಸ್ಕಾರದ ಗುಣವು ಇದೆ ಎಂದು ಅಭಿಪ್ರಾಯಪಟ್ಟರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ರಕ್ಷಾಧಾರಣೆ ನಡೆಯಿತು.

ವೇದಿಕೆಯಲ್ಲಿ ಸರ್ಕಾರಿ ಪರ ನ್ಯಾಯವಾದಿಗಳಾದ ಸತೀಶ್ ಭಟ್ ಶಿವಗಿರಿ, ನ್ಯಾಯವಾದಿಗಳಾದ ಸುದರ್ಶನ್ ಭಟ್ ಕಾಸರಗೋಡು, ಮನೋಹರ್ ಭಟ್ ಬೆದ್ರಾಡಿ, ನ್ಯಾಯವಾದಿಗಳಾದ ಸುಚಿತ್ರಾ ಕೆ, ಅಕ್ಷತಾ ಜೆ.ಆರ್., ವಿನೋದ್ ವಿಷ್ಣುನಗರ, ಉಷಾಕುಮಾರಿ, ಗೋವಿಂದರಾಜ್ ಪೆರುವಾಜೆ, ದೀಪಕ್ ಪೆರಾಜೆ, ಭಾರತಿ ರಮೇಶ್, ಶ್ರೀರಾಮ ವಿದ್ಯಾಕೆಂದ್ರದ ಸಹಸಂಚಾಲಕರಾದ ರಮೇಶ್ ಎನ್, ಆಡಳಿತ ಮಂಡಳಿಯ ಸದಸ್ಯರಾದ ಮಲ್ಲಿಕಾ ಶೆಟ್ಟಿ ಹಾಗೂ ಸಹ ಮುಖ್ಯೋಪಾಧ್ಯಾಯರಾದ ಸುಮಂತ್ ಆಳ್ವ ಎಂ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಸುಶ್ಮಿತಾ ಭಟ್ ಸ್ವಾಗತಿಸಿದರು, ಹಿತಾ ವಂದಿಸಿದರು. ಕುಶಿ ವಿ.ಆರ್ ಕಾರ್ಯಕ್ರಮ ನಿರೂಪಿಸಿದರು.