ಉಡುಪಿ : ಜಿಲ್ಲಾಡಳಿತದ ವಿರುದ್ಧ ಬೈಂದೂರು ಶಾಸಕರ ಅಹೋರಾತ್ರಿ ಧರಣಿ

ಶಾಸಕರ ಸಾಂವಿಧಾನಿಕ ಹಕ್ಕುಗಳಿಗೆ ಚ್ಯುತಿ ತರಲಾಗುತ್ತಿದೆ. ತಾನು ಕರೆಯುವ ಸಭೆಗಳಿಗೆ ಅಧಿಕಾರಿಗಳಿಗೆ ಹೋಗದಂತೆ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ ಎಂದು ಆರೋಪಿಸಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಬೈಂದೂರು ತಾಲ್ಲೂಕು ಆಡಳಿದ ಸೌಧದ ಮುಂಭಾಗದಲ್ಲಿಯೇ ಸೋಮವಾರ ರಾತ್ರಿಯಿಂದಲೇ ಧರಣಿ ನಡೆಸಿದ್ದಾರೆ.
ಶಾಸಕ ಗುರುರಾಜ್ ಗಂಟಿಹೊಳೆ ಅವರು ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕಾರ್ಯಕರ್ತ ಕಚೇರಿಯಲ್ಲಿ ನಿನ್ನೆ ಅಧಿಕಾರಿಗಳ ಸಭೆ ನಿಗದಿಗೊಳಿಸಿದ್ದರು. ಆದರೆ ಈ ಸಭೆಗೆ ಅಧಿಕಾರಿಗಳು ಹೋಗದಂತೆ ಜಿಲ್ಲಾಧಿಕಾರಿಗಳು ಕರೆ ಮಾಡಿ ತಿಳಿಸಿದ್ದರು. ಹೀಗಾಗಿ ಅಧಿಕಾರಿಗಳು ಸಭೆಗೆ ಹಾಜರಾಗಿರಲಿಲ್ಲ. ಇದರಿಂದ ಕೆರಳಿದ ಶಾಸಕರು ಜಿಲ್ಲಾಡಳಿತದ ವಿರುದ್ಧವೇ ಬೈಂದೂರು ತಾಲ್ಲೂಕು ಆಡಳಿದ ಸೌಧದ ಮುಂಭಾಗದಲ್ಲಿ ಕಾರ್ಯಕರ್ತರೊಂದಿಗೆ ಅಹೋರಾತ್ರಿ ಧರಣಿ ನಡೆಸಿದ್ದು, ಜಿಲ್ಲಾಧಿಕಾರಿಗಳು ಸ್ಪಷ್ಟನೆ ನೀಡಲಿ ಎಂದು ಒತ್ತಾಯಿಸಿದ್ದಾರೆ.