ಬೆಳ್ತಂಗಡಿ: ಎರಡು ಜೋಡಿ ಪ್ರೇತಾತ್ಮಗಳಿಗೆ ಮದುವೆ
ದಕ್ಷಿಣ ಕನ್ನಡದ ಆಚರಣೆ ಒಂದು ರೀತಿಯ ವಿಶೇಷವಾಗಿರುತ್ತದೆ. ಅದರಲ್ಲೂ ಈ ಆಟಿ ತಿಂಗಳಿನಲ್ಲಿ ನಡೆಯುವ ಕಾರ್ಯಕ್ರಮಗಳು ವಿಶೇಷವಾಗಿರುತ್ತದೆ. ಅಕಾಲಿಕವಾಗಿ ಅಥವಾ ಮದುವೆಯಾಗದೆ ಸತ್ತವರಿಗೆ ಆಟಿಯಲ್ಲಿ ಮದುವೆ ಮಾಡುವ ಕ್ರಮ ಈ ಕರಾವಳಿಯಲ್ಲಿದೆ. ಇದನ್ನು ಪ್ರೇತಾತ್ಮಗಳ ಮದುವೆ ಎಂದು ಹೇಳುತ್ತಾರೆ. ಹೌದು ಇದೀಗ ಇಂತಹ ಆಚರಣೆ ಬೆಳ್ತಂಗಡಿ ನಡೆದಿದೆ.
ಎರಡು ಜೋಡಿ ಪ್ರೇತಾತ್ಮಗಳಿಗೆ ಮದುವೆ ಮಾಡಲಾಗಿದೆ ತುಳುನಾಡಿನಲ್ಲಿ ಆಟಿ(ಆಷಾಢ) ಮಾಸದಲ್ಲಿ ಈ ಕಾರ್ಯಕ್ರಮ ನಡೆಯುತ್ತದೆ. ಬೆಳ್ತಂಗಡಿ ತಾಲೂಕಿನ ವೇಣೂರು ಬರ್ಕಜೆ ದುರ್ಗಾಪರಮೇಶ್ವರಿ ಮತ್ತು ನವಗುಳಿಗ ಕ್ಷೇತ್ರದಲ್ಲಿ ಈ ಮದುದೆ ನಡೆದಿದೆ.
ಈ ಪ್ರೇತಗಳ ಮದುವೆಗೆ ಎರಡು ಕಡೆ ಕುಟುಂಬಸ್ಥರು ಸಾಕ್ಷಿಯಾಗಿದ್ದರು. ಬೆಳ್ತಂಗಡಿ ತಾಲೂಕಿನ ಶಾರದಾ ಎಂಬ ವಧು ಹಾಗೂ ಬಂಟ್ವಾಳ ತಾಲೂಕಿನ ಕಲ್ಲಡ್ಕದ ಸದಾಶಿವ ಎಂಬ ವರನಿಗೂ ಈ ಮದುವೆಯಾಗಿದೆ. ಇನ್ನೊಂದು ಜಾರಗುಡ್ಡೆಯ ಯಾದವ ಹಾಗೂ ಬಂಟ್ವಾಳ ತಾಲೂಕಿನ ನಯನಾಡ್ನ ಯಶೋಧ ಎಂಬ ವಧುವಿನ ಕುಟುಂಬದ ನಡುವೆ ಈ ಮದುವೆ ನಡೆದಿದೆ.
ಮದುವೆಯಾಗದೆ ಅಕಾಲಿಕವಾಗಿ ಮೃತಪಟ್ಟಿದ್ದ ಹುಡುಗ ಹುಡುಗಿ ಇದೀಗ ಪ್ರಾಯ ಪ್ರಬುದ್ಧವಾಗುವ ಹೊತ್ತಿಗೆ ಈ ಮದುವೆ ಮಾಡಲಾಗಿದೆ. ಜಾತಿ, ಜಾತಕ ಹೊಂದಾಣಿಕೆ ಬಳಿಕ ಸೂಕ್ತ ವಧು ವರನೊಂದಿಗೆ ಈ ಮದುವೆಯಾಗುತ್ತದೆ. ಜೀವಂತವಾಗಿರುವ ಮಧು ಹಾಗೂ ವರನಿಗೆ ನಡೆಯುವ ರೀತಿಯಲ್ಲೇ ಈ ಮದುವೆ ನಡೆಯುತ್ತದೆ. ಬೆಳ್ಳಿಯ ತಗಡಿನ ಮೂಲಕ ವಧು ವರನ ಮೂರ್ತಿ ತಯಾರಿಸಿ ಮದುವೆ ಶಾಸ್ತ್ರ ಮಾಡಲಾಗುತ್ತದೆ. ಈ ಮೂಲಕ ಮೃತರ ಆತ್ಮಕ್ಕೆ ಶಾಮತಿಯಾಗಲಿ ಎಂದು ಈ ಕ್ರಮವನ್ನು ಮಾಡಲಾಗುತ್ತದೆ.