ತಲಪಾಡಿ : ಬಿಯರ್ ಬಾಟಲಿಯಿಂದ ಹೊಡೆದು ಯುವಕನ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳು

ಆಶೀರ್ವಾದ್ ಹೋಟೆಲ್ ಬಳಿ ಇಬ್ಬರು ಯುವಕರು ಬಿಯರ್ ಬಾಟಲ್ ಹಾಗೂ ಮಚ್ಚಿನಿಂದ ಯುವಕನೊಬ್ಬನನ್ನು ಕೊಲೆ ಮಾಡಲು ಯತ್ನಿಸಿದ ಆಘಾತಕಾರಿ ಘಟನೆಯೊಂದು ಆಗಸ್ಟ್ 5ರಂದು ಸಂಜೆ ನಡೆದಿದೆ.
ತಲಪಾಡಿ ನಿವಾಸಿ ದತ್ತೇಶ್ (35) ಹಲ್ಲೆಗೊಳಗಾದವರು ಎನ್ನಲಾಗಿದೆ. ದತ್ತೇಶ್ ಆಶೀರ್ವಾದ್ ಹೊಟೇಲ್ ಸಮೀಪ ನಿಂತಿದ್ದ ಸಂದರ್ಭದಲ್ಲಿ ತಲಪಾಡಿ ದೇವಿನಗರ ನಿವಾಸಿ ಶೈಲೇಶ್ ಮತ್ತು ತಚ್ಚಣಿಯ ರಮಿತ್ ಎಂಬವರು ಕಾರಿನಲ್ಲಿ ಬಂದಿದ್ದಾರೆ. ರಸ್ತೆ ಬದಿಯಲ್ಲಿದ್ದ ದತ್ತೇಶ್ ಹತ್ತಿರವೇ ಕಾರನ್ನು ತಂದು ನಿಲ್ಲಿಸಿ, ರಮಿತ್ ಕೈಯ್ಯಲ್ಲಿದ್ದ ಬಿಯರ್ ಬಾಟಲಿಯಲ್ಲಿ ದತ್ತೇಶ್ ತಲೆಗೆ ಹೊಡೆದಿದ್ದಾನೆ.
ಇತ್ತ ಶೈಲೇಶ್ ತನ್ನ ಕೈಯ್ಯಲ್ಲಿದ್ದ ಕತ್ತಿಯಿಂದ ದತ್ತೇಶ್ ಕುತ್ತಿಗೆ ಭಾಗಕ್ಕೆ ತಿವಿದಿದ್ದಾನೆ. ಆ ಬಳಿಕ ಇಬ್ಬರು ಆರೋಪಿಗಳು ‘ನಿನ್ನ ಅಹಂಕಾರವನ್ನು ಕೊನೆಗೊಳಿಸದೇ ಬಿಡುವುದಿಲ್ಲ ಬೆದರಿಕೆ ಹಾಕಿ ಸ್ಥಳದಿಂದಲೇ ಪರಾರಿಯಾಗಿದ್ದು ತಲೆಮರೆಸಿಕೊಂಡಿದ್ದಾರೆ. ಹಲ್ಲೆಗೊಳಗಾದ ದತ್ತೇಶ್ ಕುಸಿದು ಬಿದ್ದಿದ್ದು, ಸ್ಥಳದಿದ್ದ ಇಬ್ಬರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆದರೆ ಆರೋಪಿ ಶೈಲೇಶ್ ವಿರುದ್ಧ ಬರ್ಕೆ ಹಾಗೂ ಬಂದರು ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳಿದ್ದು, ಗ್ಯಾಂಗ್ ಚಟುವಟಿಕೆಗಳಲ್ಲಿ ಹೆಸರುವಾಸಿಯಾಗಿದ್ದಾನೆ. ತಲಪಾಡಿ ದೇವಿನಗರದಲ್ಲಿ ಮನೆ ಮಾಡಿಕೊಂಡಿದ್ದಾನೆ. ರಿಕ್ಷಾ ಬಾಡಿಗೆ ವಿಚಾರಕ್ಕೆ ಸಂಬಂಧ ಪಟ್ಟಂತೆ ರಿಕ್ಷಾ ಚಾಲಕ ದತ್ತೇಶ್ ಹಾಗೂ ಆರೋಪಿ ರಮಿತ್ ಮಾವನ ನಡುವೆ ಜಗಳವಾಗಿತ್ತು. ಇದೇ ಘಟನೆಗೆ ಸಂಬಂಧಿಸಿದಂತೆ ರಮಿತ್ ಗೆಳೆಯನಾಗಿರುವ ಶೈಲೇಶ್ ಇಬ್ಬರು ಜೊತೆಗೆ ಸೇರಿ ಈ ಹಲ್ಲೆಯನ್ನು ನಡೆಸಿದ್ದಾರೆ. ಈ ಘಟನೆಗೆ ಸಂಬಂಧಪಟ್ಟಂತೆ ಉಳ್ಳಾಲ ಪೊಲೀಸರು ತನಿಖೆ ಕೈಗೊಂಡಿದ್ದಾರೆ.