ಮಂಗಳೂರಿಗರಿಗೆ ಶಾಕ್ ಕೊಟ್ಟ ಮಲ್ಲಿಗೆ ದರ! ಎಷ್ಟಿದೆ ಗೊತ್ತಾ ಮಲ್ಲಿಗೆ ಬೆಲೆ

ಮಂಗಳೂರಿಗರಿಗೆ ಮಲ್ಲಿಗೆ ಎಂದರೆ ಪಂಚಪ್ರಾಣ, ಆದರೆ ಈ ಮಲ್ಲಿಗೆ ಕುಡ್ಲ ಮಂದಿಗೆ ಶಾಕ್ ನೀಡಿದೆ. ವಿಶ್ವವಿಖ್ಯಾತ ಶಂಕರಪುರ ಮಲ್ಲಿಗೆಯ ಬೆಲೆ ಗಗನಕ್ಕೇರಿದ್ದು, ಅಟ್ಟಿಗೆ 2100 ರೂ.ಗೆ ಏರಿಕೆಯಾಗಿದೆ. ಈ ಮಲ್ಲಿಗೆ ಜುಲೈ 22 ರಂದು 280 ರೂ. ಇತ್ತು. ಆದರೆ ಇದೀಗ ಮಳೆಯಿಂದ ಮಲ್ಲಿಗೆ ದರ ಹೆಚ್ಚಿಗೆ ಆಗಿದೆ. ಇನ್ನು ದಕ್ಷಿಣ ಕನ್ನಡದಲ್ಲಿ ಆಟಿ ಮುಗಿದು, ಮದುವೆ ಸಮಾರಂಭಗಳು ಪ್ರಾರಂಭವಾಗುತ್ತದೆ. ಆಟಿ ತಿಂಗಳಿನಲ್ಲಿ ಮಂಗಳೂರಿನಲ್ಲಿ ಮಲ್ಲಿಗೆಯನ್ನು ಕೊಂಡುಕೊಳ್ಳುವವರ ಸಂಖ್ಯೆ ಕಡಿಮೆ, ಅದರೂ ಈ ಮಟ್ಟಿನಲ್ಲಿ ಬೆಲೆ ಏರಿಕೆಯಾಗಿದೆ.
ಜುಲೈನಲ್ಲಿ, ಹೆಚ್ಚಿನ ನೀರಿನ ಅಂಶ ಮತ್ತು ಸೀಮಿತ ಬಿಸಿಲಿನಿಂದಾಗಿ ಮಲ್ಲಿಗೆ ಬೆಳೆ ನಾಶವಾಯಿತು. ಇದರಿಂದ ಮಲ್ಲಿಗೆ ಸಸ್ಯಗಳ ಬೇರು ಕೊಳೆತು ಹೋಗಿದೆ. ದಿನವೊಂದಕ್ಕೆ 100 ಅಟ್ಟಿ ಮಲ್ಲಿಗೆ ಮಾರಾಟ ಮಾಡುತ್ತಿದ್ದು, ಈಗ ಮಳೆಗಾಲವಾದ್ದರಿಂದ ಒಂದು ಕಟ್ಟು ಕೂಡ ಸಿಗದೇ ಪರದಾಡುವಂತಾಗಿದೆ.
ಮಲ್ಲಿಗೆ ದರ ಹೆಚ್ಚಾಗಿರುವುದರಿಂದ ಮಾರುಕಟ್ಟೆಗೆ ಯಾರು ಕೂಡ ಬರುತ್ತಿಲ್ಲ. ಇದೀಗ ಭಟ್ಕಳ ಮಲ್ಲಿಗೆ ಮತ್ತು ಶಂಕರಪುರ ಮಲ್ಲಿಗೆ ಎರಡರ ದರವೂ ಒಂದೇ ರೀತಿ ಇದೆ. ಬಿಸಿಲಿನ ಅಭಾವದಿಂದ ಮಲ್ಲಿಗೆ ಬೆಳೆ ಇಳುವರಿ ಕುಂಠಿತವಾಗಿದ್ದು, ಇನ್ನು ಸಾಲು ಹಬ್ಬಗಳು ಇರುವುದರಿಂದ ಮಲ್ಲಿಗೆ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಿದೆ. ನಾಗರ ಪಂಚಮಿಗೆ ಮಲ್ಲಿಗೆ ಹೆಚ್ಚಿನ ಬೇಡಿಕೆ ಇಲ್ಲದಿದ್ದರೂ, ಈ ವರ್ಷ ಶುಕ್ರವಾರದಂದು ಬರುವ ಸಂಕ್ರಮಣ ಹಬ್ಬಕ್ಕೆ ಹೆಚ್ಚಿನ ಬೇಡಿಕೆ ಬರುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.