ಮಂಗಳೂರು: ಬಟ್ಟೆಯಿಂದ ಕುತ್ತಿಗೆ ಬಿಗಿದು 13 ವರ್ಷದ ಬಾಲಕಿಯ ಕೊಲೆ
ಮಂಗಳೂರು: 13 ವರ್ಷ ವಯಸ್ಸಿನ ಬಾಲಕಿಯನ್ನು ಬೀಕರವಾಗಿ ಹತ್ಯೆ ಮಾಡಿರುವ ಘಟನೆ ಪಣಂಬೂರು ಠಾಣಾ ವ್ಯಾಪ್ತಿಯ ಜೋಕಟ್ಟೆ ಎಂಬಲ್ಲಿ ನಡೆದಿದೆ. ಇಲ್ಲಿನ ಬಾಡಿಗೆ ಮನೆಯೊಂದರಲ್ಲಿ ಬೆಳಗಾವಿ ಮೂಲದ ಹನುಮಂತ ಎಂಬವರು ವಾಸವಿದ್ದರು. 4 ದಿನಗಳ ಹಿಂದೆ ಅವರ ತಮ್ಮನ ಮಗಳಾದ 13 ವರ್ಷದ ಬಾಲಕಿ ಕೈ ನೋವಿನ ಚಿಕಿತ್ಸೆಗಾಗಿ ಇಲ್ಲಿಗೆ ಬಂದಿದ್ದಳು. ಮಂಗಳವಾರ ಹನುಮಂತ ಅವರ ಮನೆಯವರೆಲ್ಲಾ ಎಂದಿನಂತೆ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಯಾರೋ ಬಂದು ಬಟ್ಟೆಯಿಂದ ಕುತ್ತಿಗೆಯನ್ನು ಬಿಗಿದು ಈ ಬಾಲಕಿಯ ಹತ್ಯೆಗೈದಿದ್ದಾರೆ.
ಬಾಲಕಿಯ ತಾಯಿ ಮಗಳೊಂದಿಗೆ ಮಾತನಾಡಲೆಂದು ಹನುಮಂತ ಅವರ ಪಕ್ಕದ ಮನೆಯವರಿಗೆ ಫೋನ್ ಮಾಡಿದ್ದು, ಪಕ್ಕದ ಮನೆಯವರು ಫೋನ್ ಕೊಡಲು ಬಂದ ವೇಳೆ ಬಾಲಕಿಯನ್ನು ಯಾರೋ ಕೊಲೆಗೈದ ವಿಚಾರ ಗೊತ್ತಾಗಿದೆ. ಅವರು ಆ ಕೂಡಲೆ ತಾಯಿಗೆ ಫೋನಿನಲ್ಲಿ ವಿಷಯ ತಿಳಿಸಿದ್ದಾರೆ. ಕೂಡಲೆ ಮೃತ ಬಾಲಕಿಯ ತಾಯಿ ಹನುಮಂತ ಅವರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಹನುಮಂತ ಬಾಡಿಗೆ ಮನೆಗೆ ಬಂದು ನೋಡಿ ಬಳಿಕ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಮಂಗಳೂರು ಪೊಲೀಸ್ ಆಯುಕ್ತರಾದ ಅನುಪಮ್ ಅಗರ್‌ವಾಲ್, ಡಿಸಿಪಿ ದಿನೇಶ್ ಕುಮಾರ್, ಉತ್ತರ ಉಪವಿಭಾಗದ ಪ್ರಭಾರ ಎಸಿಪಿ ರವೀಶ್ ನಾಯ್ಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮನೆಯ ಯಜಮಾನ ನೀಡಿದ ದೂರಿನ ಅನ್ವಯ ಪಣಂಬೂರು ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 103 ರ ಅಡಿಯಲ್ಲಿ (ಕೊಲೆ) ಪ್ರಕರಣ ದಾಖಲಿಸಲಾಗಿದ್ದು, ಠಾಣಾಧಿಕಾರಿ ಸಲೀಂ ಅಬ್ಬಾಸ್ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ.