ಬಂಟ್ವಾಳ: ಬಂಟ್ವಾಳ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಸಮಾಲೋಚನಾ ಸಭೆ
ಬಂಟ್ವಾಳ:ಯುವ ಸಮುದಾಯ ಕೃಷಿ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಂಡಾಗ ಸಶಕ್ತ ಭಾರತ ನಿರ್ಮಾಣವಾಗಲು ಸಾಧ್ಯ ಎಂದು ದ.ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ನಿಯಮಿತದ ಅಧ್ಯಕ್ಷ ಸುಚರಿತ ಶೆಟ್ಟಿ ಹೇಳಿದರು.
ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಬುಧವಾರ (ಆ.7) ನಡೆದ ಬಂಟ್ವಾಳ ತಾಲೂಕು ಹಾಲು ಉತ್ಪದಕರ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕೃಷಿ ಮತ್ತು ಹೈನುಗಾರಿಕೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಕೃಷಿ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ದನಸಾಕಣಿಕೆ ಹೆಚ್ಚಾಗಬೇಕಿದೆ ಎಂದರು.
ಹೈನುಗಾರಿಕಾ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು, ವೈದ್ಯರು ಮತ್ತು ಅಧ್ಯಕ್ಷರುಗಳು ಅನೇಕ ಚರ್ಚೆಗಳನ್ನು ನಡೆಸಿ, ಸಾಧಕ –ಭಾದಕಗಳ ಬಗ್ಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಭೆಯಲ್ಲಿ ಕೆಲ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು.
ಸನ್ಮಾನ-ವಿದ್ಯಾರ್ಥಿ ವೇತನ:
ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಸಕ್ತ ಸಾಲಿನಲ್ಲಿ ಪಿಯುಸಿ ಮತ್ತು ಎಸ್.ಎಸ್. ಎಲ್.ಸಿ. ವಿಭಾಗದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಜೊತೆಗೆ ರಾಯಿ ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯರಾದ ಸುರೇಶ್ ಪೂಜಾರಿ ಇವರ ಪುತ್ರಿ ಎಸ್ ಮನೀಷ ಅವರನ್ನು ಸನ್ಮಾನಿಸಲಾಯಿತು.
ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ.ಜಯರಾಮ ರೈ, ನಿರ್ದೇಶಕರುಗಳಾದ ಪದ್ಮನಾಭ ಶೆಟ್ಟಿ ಅರ್ಕಜೆ, ಸುಭದ್ರಾ ರಾವ್, ಸವಿತಾ ಶೆಟ್ಟಿ, ಎಂ.ಡಿ.ವಿವೇಕ್ ,ವ್ಯವಸ್ಥಾಪಕರಾದ ಡಾ. ರವಿರಾಜ್ ಉಡುಪ, ಉಪವ್ಯವಸ್ಥಾಪಕ ಡಾ ಕೇಶವ ಹಾಗೂ ಒಕ್ಕೂಟದ ಎಲ್ಲಾ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನಿರ್ದೇಶಕ ಸುಧಾಕರ ರೈ ಸ್ವಾಗತಿಸಿ, ನಿರ್ದೇಶಕಿ ಸವಿತಾ ಶೆಟ್ಟಿ ವಂದಿಸಿದರು. ವಿಸ್ತರಣಾಧಿಕಾರಿ ಜಗದೀಶ್ ಕಾರ್ಯಕ್ರಮ ನಿರೂಪಿಸಿದರು.