ಶಿರೂರು : ಉಳವರೆಗೆ ಭೇಟಿ ನೀಡಿ ಸಂತಸ್ತ್ರರಿಗೆ ಧೈರ್ಯ ತುಂಬಿ ನೆರವಿನ ಹಸ್ತ ಚಾಚಿದ ಮಂಗಳೂರಿನ ಪತ್ರಕರ್ತರು
ರಣ ಭೀಕರ ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಹಾನಿಯಾಗಿತ್ತು. ಅಂಕೋಲಾದ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿದ ಪರಿಣಾಮವಾಗಿ ಗಂಗಾವಳಿ ನದಿ ತೀರದಲ್ಲಿರುವ ಉಳವರೆ ಗ್ರಾಮದ 27 ಕುಟುಂಬಗಳು ಮನೆ ಮಠ ಕಳೆದುಕೊಂಡಿದ್ದು ಬೀದಿಗೆ ಬಿದ್ದಿತ್ತು. ಅದಲ್ಲದೇ, ಗುಡ್ಡಕುಸಿತದಿಂದ ಆರು ಮನೆಗಳು ಸಂಪೂರ್ಣ ಹಾನಿಗೊಳಗಾಗಿತ್ತು.
ಈ ಹಿನ್ನಲೆಯಲ್ಲಿ ಅಂಕೋಲ ತಾಲೂಕಿನ ಉಳವರೆ ಗ್ರಾಮಕ್ಕೆ ಉಳ್ಳಾಲ ಪತ್ರಕರ್ತರ ಸಂಘ ಹಾಗೂ ಮಂಗಳೂರಿನ ಪತ್ರಕರ್ತರ ಚಾರಣ ಬಳಗದ ಸದಸ್ಯರು ಭೇಟಿ ಕೊಟ್ಟು ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಒದಗಿಸುವ ಮೂಲಕ ನೆರವಿನ ಹಸ್ತ ಚಾಚಿದ್ದಾರೆ. ಹೌದು, ಪತ್ರಕರ್ತರ ತಂಡವು ದಾನಿಗಳ ಹಾಗೂ ಮಿತ್ರರ ನೆರವಿನಿಂದ ಸಂಗ್ರಹಿಸಿದ ಆಹಾರ ಸಾಮಗ್ರಿಗಳು ಹಾಗೂ ಅಗತ್ಯ ವಸ್ತುಗಳೊಂದಿಗೆ ಮೊದಲಿಗೆ ಉಳವರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಮಕ್ಕಳೊಂದಿಗೆ ಸಂವಾದ ನಡೆಸಿದರು.
ಈ ವೇಳೆ ಉಪಸ್ಥಿತರಿದ್ದ ಉದ್ಯಮಿ ಇಬ್ರಾಹಿಂ ಕಲ್ಲೂರು ಮಾತಾಡಿ, “ಪತ್ರಕರ್ತರು ಸಾಮಾಜಿಕ ಬದ್ಧತೆಯಿಂದ ಕೆಲಸ ಮಾಡುತ್ತಿದ್ದು ಮೆಚ್ಚುವ ವಿಚಾರವಾಗಿದೆ. ಈ ಗ್ರಾಮದ ಗ್ರಾಮಸ್ಥರ ಜೊತೆ ನಾವೂ ಇದ್ದೇವೆ. ಬಡ ಜನರ ಜೊತೆ ಇದು ನಿಜಕ್ಕೂ ನಿಲ್ಲಬೇಕಾದ ಸಮಯವಾಗಿದೆ“ ಎಂದು ತಿಳಿಸಿದರು.ಉದ್ಯಮಿ ವಿಠಲ ನಾಯಕ್ ಮಾತನಾಡಿದ್ದು, ”ಪತ್ರಕರ್ತ ಮಿತ್ರರು ದುರಂತ ಸಂಭವಿಸಿದಾಗಲೂ ಉಳವರೆ ಗ್ರಾಮಕ್ಕೆ ಭೇಟಿ ನೀಡಿದ್ದಲ್ಲದೆ ವೃದ್ಧೆಯ ಶವಸಂಸ್ಕಾರಕ್ಕೆ ಹೆಗಲು ನೀಡುವ ಕೆಲಸ ಮಾಡಿದ್ದರು.
ಇದೀಗ ಗ್ರಾಮಸ್ಥರಿಗೆ ಅಗತ್ಯ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ ಅವರಿಗೆ ಅಭಿನಂದನೆಗಳು“ ಎಂದರು.ಉಳ್ಳಾಲ ಪತ್ರರ್ಕತರ ಸಂಘದ ಅಧ್ಯಕ್ಷ ವಸಂತ್ ಎನ್.ಕೊಣಾಜೆ ಮಕ್ಕಳನ್ನುದ್ದೇಶಿಸಿ ಮಾತನಾಡಿ, “ಭೂಕುಸಿತ ಘಟನೆ ನಿಮ್ಮ ಮನಸ್ಸಲ್ಲಿ ಅತೀವ ದುಃಖ ತಂದಿರಬಹುದು. ದುಃಖವನ್ನು ಮರೆತು ಮುಂದೆ ಉತ್ತಮ ಪ್ರಜೆಗಳಾಗಿ” ಎಂದು ಧೈರ್ಯ ತುಂಬಿದರು.ಆ ಬಳಿಕ ಮಾತನಾಡಿದ ಪತ್ರಕರ್ತ ಶಶಿ ಬೆಳ್ಳಾಯರು, “ನಾವು ದುರಂತ ಸಂಭವಿಸಿದ ಸಂದರ್ಭವೂ ಇಲ್ಲಿಗೆ ಬಂದಿದ್ದೆವು. ಇದೀಗ ನಿಮಗೆ ಕಿಂಚಿತ್ ನೆರವು ನೀಡುವ ಉದ್ದೇಶದಿಂದ ಬಂದಿದ್ದೇವೆ.
ಕಷ್ಟದ ಸಂದರ್ಭ ಒಬ್ಬರಿಗಿಬ್ಬರು ನೆರವಾಗುವುದು ಮನುಷ್ಯತ್ವ. ನಿಮ್ಮ ಜೀವನದಲ್ಲೂ ಇದನ್ನು ಅಳವಡಿಸಿಕೊಳ್ಳಿ“ ಎಂದು ತಿಳಿಸಿದರು. ತದನಂತರದಲ್ಲಿ ಮೋಹನ್ ಕುತ್ತಾರ್ ಪುನೀತ್ ರಾಜ್ ಕುಮಾರ್ ಅವರ ಬೊಂಬೆ ಹೇಳುತೈತೆ ಹಾಡು ಹಾಡಿ ಮಕ್ಕಳೊಂದಿಗೆ ರಂಜಿಸುವಲ್ಲಿ ಯಶಸ್ವಿಯಾದರು ಈ ವೇಳೆ ಶಾಲಾ ಶಿಕ್ಷಕಿ ಸಂಧ್ಯಾ ವಿ. ನಾಯ್ಕ್ ಮಾತನಾಡಿ “ಅಷ್ಟು ದೂರದ ಮಂಗಳೂರಿನಿಂದ ಉಳವರೆ ಗ್ರಾಮಕ್ಕೆ ಬಂದು ಗ್ರಾಮಸ್ಥರ ಜೊತೆ ನಿಲ್ಲುವುದು ನಿಜಕ್ಕೂ ಪ್ರಶಂಸನೀಯ ಕಾರ್ಯ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಆ ಬಳಿಕ ಶಾಲಾ ಮಕ್ಕಳಿಗೆ ಪುಸ್ತಕ, ಬಟ್ಟೆ ವಿತರಿಸಲಾಯಿತು.
ಕೊನೆಗೆ ಉಳವರೆ ಗ್ರಾಮಕ್ಕೆ ಭೇಟಿ ನೀಡಿದ್ದು, ಗುಡ್ಡ ಕುಸಿದ ಪರಿಣಾಮ ಮನೆ ಮಠ ಕಳೆದುಕೊಂಡ ಸಂತಸ್ತ್ರರಿಗೆ ಅಗತ್ಯ ವಸ್ತುಗಳ ಕಿಟ್ ವಿತರಸುವ ಮೂಲಕ ಧೈರ್ಯ ತುಂಬಿದರು ಈ ಸಂದರ್ಭ ಸಂಘದ ಉಪಾಧ್ಯಕ್ಷ ಆರಿಫ್ ಯುಆರ್, ಶಿವಶಂಕರ್ ಎಂ., ಎಚ್‌ಟಿ ಶಿವಕುಮಾರ್, ಗಿರೀಶ್ ಮಳಲಿ, ಅಶ್ವಿನ್ ಕುತ್ತಾರ್ ಮತ್ತಿತ್ತರು ಉಪಸ್ಥಿತರಿದ್ದರು.