ಮಂಗಳೂರು : ಯಕ್ಷಗಾನ ಕಲಾವಿದ ರಕ್ಷಿತ್ ಶೆಟ್ಟಿ ಪಡ್ರೆ ಯಕ್ಷ ಶಿಕ್ಷಣ ಕಾರ್ಯಕ್ಕೆ ದಶಮಾನೋತ್ಸವದ ಸಂಭ್ರಮ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಚಿರಪರಿಚಿತವಾಗಿರುವ ಯಕ್ಷಗಾನ ಕಲಾವಿದರು ಹಾಗೂ ಯಕ್ಷಗುರುಗಳಾದ ಶ್ರೀ ರಕ್ಷಿತ್ ಶೆಟ್ಟಿ ಪಡ್ರೆ ಅವರ ಯಕ್ಷ ಶಿಕ್ಷಣ ಕಾರ್ಯಕ್ಕೆ ಹತ್ತು ವರುಷಗಳು ಪೂರೈಸಿದ್ದು, ಈ ದಶಮಾನೋತ್ಸವ ಸಂಭ್ರಮದ ಅಂಗವಾಗಿ ವಿವಿಧೆಡೆಯ ಇವರ ಶಿಷ್ಯ ವೃಂದವನ್ನು ಒಗ್ಗೂಡಿಸಿ 300ಕ್ಕೂ ಅಧಿಕ ಶಿಷ್ಯವೃಂದದವರಿಂದ ಸಂಯೋಜಿಸಲಾದ ಹತ್ತು ಹಲವು ವಿವಿಧ ಯಕ್ಷಗಾನ ಪ್ರದರ್ಶನಗಳೊಂದಿಗೆ ಯಕ್ಷ ಸಿದ್ಧಿ ಸಂಭ್ರಮ, ಸಿದ್ಧಿ ದಶಯಾನ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಆಗಸ್ಟ್ 10, ಶನಿವಾರ ಹಾಗೂ ಆ.11 ರವಿವಾರ ಬೆಳಗ್ಗೆಯಿಂದ ರಾತ್ರಿಯವರೆಗೆ ಮಂಗಳೂರು, ಉರ್ವಸ್ಟೋರ್, ಡಾ.ಬಿ.ಆರ್.ಅಂಬೇಡ್ಕರ್ ಸಭಾ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ.ಆ.10ರಂದು ಬೆಳಗ್ಗೆ 9ರಿಂದ ಚೌಕಿ ಪೂಜೆ, ಪೂರ್ವ ರಂಗ, 10 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ, ವಿದ್ಯಾರ್ಥಿಗಳಿಂದ ದೇವಸೇನಾನಿ, ಮಹಿಳೆಯರಿಂದ ಪಾವನ ಪಕ್ಷಿ, ಯಕ್ಷಗಾನ ರೂಪಕ ದಾಶರಥಿ ದರ್ಶನ, ಧರ್ಮ ದಂಡನೆ ಯಕ್ಷಗಾನ ನಡೆಯಲಿದೆ.
ಸಂಜೆ 5 ಗಂಟೆಗೆ ಸಭಾಕಾರ್ಯಕ್ರಮ ಹಾಗೂ ಸಂಜೆ 6.30ರಿಂದ ಯಕ್ಷ ನವರಸ ವೈಭವ, ಎಂಟು ಗಂಟೆಗೆ ವಿನೂತನ ಪ್ರಯೋಗ ಹಿಮ್ಮಿಂಚು ಯಕ್ಷಗಾನ ಪ್ರಸಂಗಗಳು ಯಕ್ಷಾಭಿಮಾನಿಗಳನ್ನು ರಂಜಿಸಲಿದೆ.ಆ.11ರಂದು ಬೆಳಗ್ಗೆ ಗಂಟೆ 9.30ರಿಂದ ಯಕ್ಷಗಾನ ಲೀಲಾಮಾನುಷ ವಿಗ್ರಹ, ಗಂಟೆ 12ರಿಂದ ನೃತ್ಯ ವಚನ ಚಿತ್ರ ಕಥನ, ದಶಾವತಾರ ಮತ್ತು ಪಾದ ಪ್ರತೀಕ್ಷಾ ಯಕ್ಷಗಾನ ಪ್ರದರ್ಶನ, ಸಂಜೆ ಸಮಾರೋಪ ನಡೆಯಲಿದೆ.
ಈ ಸಂದರ್ಭದಲ್ಲಿ ಯಕ್ಷ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಯಕ್ಷ ಸಿದ್ಧಿ ಪ್ರಶಸ್ತಿ, ಸಾಧಕರಿಗೆ ಸನ್ಮಾನ ನಡೆಯಲಿದೆ. ಬಳಿಕ ಗಂಟೆ 6 ರಿಂದ ಯಕ್ಷಗಾನ ವೈವಿಧ್ಯ ನೀನೋ-ನಾನೋ, ಆ ಬಳಿಕ ತೆಂಕು ಬಡಗು ತಿಟ್ಟಿನ ನಾಗಶ್ರೀ ಯಕ್ಷಗಾನ ಪ್ರಸಂಗವು ಯಕ್ಷಾಭಿಮಾನಿಗಳನ್ನು ರಂಜಿಸಲಿದೆ.