ಬಂಟ್ವಾಳ: ಮಳೆಗೆ ಮುಂದುವರಿದ ಹಾನಿ,ಮನೆಗೋಡೆ,ಗುಡ್ಡೆ ಕುಸಿತ
ಬಂಟ್ವಾಳ: ಭಾರೀ ಗಾಳೆ,ಮಳೆಗೆ ಬಂಟ್ವಾಳದಾದ್ಯಂತ ಹಾನಿ ಮತ್ತೆ ಮುಂದುವರಿದಿದೆ. ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ಕೆಳಗಿನ ವಗ್ಗ ಅಬ್ದುಲ್ ರಶೀದ್ ಅವರ ಮನೆಯ ಗೋಡೆ ಕುಸಿದಿದೆ. ಹಿಂದಿನ ದಿನವಷ್ಟೇ ಮನೆ ಮಂದಿ ಸ್ಥಳಾಂತರಗೊಳಿಸಲಾಗಿತ್ತು.
ಚೆನ್ನೈತೋಡಿ ಗ್ರಾಮದ ಮೇಗಿನ ಮನೆ ಎಂಬಲ್ಲಿ ಮೋನಮ್ಮರವರ ಕಚ್ಚಾ ಮನೆಗೆ ತೀವ್ರ ಹಾನಿಯಾಗಿದೆ. ಮನೆಯವರನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ.

ಪುದುಗ್ರಾಮದ ಕಲ್ಲತಡಮೆ ಎಂಬಲ್ಲಿ ಸತೀಶ್ ಕಲ್ಲತಡಮೆ ಅವರ ಮನೆಯ ಹಂಚು ಹಾರಿದಲ್ಲದೆ ಗೋಡೆಗೂ ತೀವ್ರ ಹಾನಿಯಾಗಿದೆ.
ಮಾಣಿಲ ಗ್ರಾಮದ ಪಿಲಿಂಗುರಿ ಎಂಬಲ್ಲಿ ಜಯಶ್ರೀ ನಾಯ್ಕ ಎಂಬವರ ಕೊಟ್ಟಿಗೆಗೆ ಮರ ಬಿದ್ದು ಹಾನಿ.

ವಿಟ್ಲ ಮುಡ್ನೂರು ಗ್ರಾಮದ ಕುಂಡಡ್ಕ ಶೆಡ್ಡು ನಿವಾಸಿ ಶ್ಯಾಮಲಾ ಅವರ ಮನೆ ಸಮೀಪ ಗುಡ್ಡ ಕುಸಿದಿದೆ. ಕನ್ಯಾನ ಗ್ರಾಮದ ಬೊಟ್ಯದಮೂಲೆ ಎಂಬಲ್ಲಿ ಮೈಮುನ ಎಂಬುವವರ ವಾಸ್ತವ್ಯದ ಮನೆಗೆ ಗುಡ್ಡ ಕುಸಿದು ಭಾಗಶಃ ಹಾನಿಯಾಗಿರುತ್ತದೆ. ಮಾಣಿ ಗ್ರಾಮದ ಮಾಣಿಕೋಡಿ ನಿವಾಸಿ ವನಜ ಎಂಬುವವರ ಮನೆಗೆ ಪಕ್ಕದಲ್ಲಿನ ಗುಡ್ಡ ಕುಸಿದು ಭಾಗಶಃ ಹಾನಿಯಾಗಿರುತ್ತದೆ.ಕಂದಾಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನಷ್ಟದ ಬಗ್ಗೆ ಅಂದಾಜಿಸಿ ತಾಲೂಕಾಡಳಿತಕ್ಕೆ ನೀಡಿದ್ದಾರೆ.

ಗುರುವಾರ ರಾತ್ರಿಯಿಡಿ ಶುಕ್ರವಾರ ಬೆಳಗ್ಗಿನವರೆಗೂ ಎಡೆಬಿಡದೆ ಮಳೆಯ ಜೊತೆಗೆ ಗಾಳಿಯು ಬೀಸಿದ್ದು ನೇತ್ರಾವತಿ ನದಿಯಲ್ಲಿ ಬೆಳಗ್ಗಿನ ಹೊತ್ತು 7.9 ಮೀ.ನಲ್ಲಿ ನೀರು ಹರಿಯುತಿತ್ತು.ಸದ್ಯ ನೇತ್ರಾವತಿಯಲ್ಲಿ ನೀರಿನ ಅರ್ಭಟವು ಮುಂದುವರಿದಿದೆ.