ಬಂಟ್ವಾಳ ಕಾಳಜಿ ಕೇಂದ್ರ,ನೆರೆಪೀಡಿತ ಪ್ರದೇಶಗಳಿಗೆ ಡಿ.ಸಿ.ಭೇಟಿ
ಬಂಟ್ವಾಳ:ಮಂಗಳವಾರ ನೇತ್ರಾವತಿ ನದಿಯ ನೆರೆಯಿಂದ ಜಲಾವೃತಗೊಂಡ ಪ್ರದೇಶ ಹಾಗೂ ಬಂಟ್ವಾಳದಲ್ಲಿ ತೆರೆಯಲಾದ ಕಾಳಜಿ ಕೇಂದ್ರಕ್ಕೆ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಭೇಟಿ ನೀಡಿ ಪರಿಶೀಲಿಸಿದರು.ಬಂಟ್ವಾಳ ಎಸ್.ವಿ.ಎಸ್.ಕನ್ನಡ ಮಾಧ್ಯಮ ಶಾಲೆಯಲ್ಲಿ ತೆರೆಯಲಾದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಯವರು ಕೇಂದ್ರದಲ್ಲಿ ವಾಸ್ತವ್ಯವಿರುವ ಸಂತ್ರಸ್ತರಿಗೆ ನೀಡಿರುವ ಸೌಲಭ್ಯಗಳ ಬಗ್ಗೆ ತಹಶಿಲ್ದಾರ್ ಅರ್ಚನಾ ಭಟ್ ಅವರಿಂದ ಮಾಹಿತಿ ಪಡೆದುಕೊಂಡರಲ್ಲದೆ ಸಂತ್ರಸ್ತರೊಂದಿಗೆ ಸಮಾಲೋಚನೆ ನಡೆಸಿ, ಮುಳುಗಡೆಯಾದ ಮನೆಗಳ ಸ್ಥಿತಿಗತಿಯ ಕುರಿತು ವಿವರ ಪಡೆದುಕೊಂಡರು.
ಬಳಿಕ ಕೆಳಗಿನಪೇಟೆ ಆಗ್ನಿಶಾಮಕಠಾಣೆಯ ಹಿಂಭಾಗದಲ್ಲಿ ಜಲಾವೃತಗೊಂಡಮನೆಗೆ ಭೇಟಿ ನೀಡಿದರು.ಈ ಸಂದರ್ಭದಲ್ಲಿ ಸ್ಥಳೀಯರು ಅಹವಾಲು ಸಲ್ಲಿಸಿದರು,ಇಲ್ಲಿರುವ ತೋಡಿನಿಂದ ಉಂಟಾಗುವ ಸಮಸ್ಯೆ ಬಗ್ಗೆಯ ಜಿಲ್ಲಾಧಿಕಾರಿಯವರ ಗಮನಕ್ಕೆ ತಂದರಲ್ಲದೆ ಐದು ವರ್ಷದ ಬಳಿಕ.ತಕ್ಷಣ ಪುರಸಭೆಯ ಮುಖ್ಯಾಧಿಕಾರಿಯವರಿ ಚರಂಡಿ ಶುಚಿಗೊಳಿಸುವುದು ಹಾಗೂ ಹೂಳೆತ್ತಲು ಸೂಚಿಸಿದರು.
ತದನಂತರ ಜಕ್ರಿಬೆಟ್ಟು ನೂತನ ಸೇತುವೆ ಮತ್ತು ಅಣೆಕಟ್ಟು ಸ್ಥಳಕ್ಕೆ ಭೇಟಿ ನೀಡಿ ನೇತ್ರಾವತಿ ನದಿ ನೀರಿನ ಹರಿವು ಹಾಗೂ ಮಟ್ಟವನ್ನು ವೀಕ್ಷಿಸಿದರು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ ಅವರು, ನೆರೆಯಿಂದ ತಗ್ಗು ಪ್ರದೇಶಗಳು ಜಲಾವೃತಗೊಂಡ ಹಿನ್ನೆಲೆಯಲ್ಲಿ ಅನೇಕ ಮನೆಗಳಿಗೆ ನೀರು ನುಗ್ಗಿದೆ. ಅಂತಹ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಲ್ಲದೆ ಕಾಳಜಿ ಕೇಂದ್ರದಲ್ಲಿರುವ ಸಂತ್ರಸ್ತರನ್ನು ಭೇಟಿಯಾಗಿ ಅವರ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದಿದ್ದೇನೆ ಎಂದರು.
ಪಾಕೃತಿಕ ವಿಕೋಪದಡಿಯಲ್ಲಿ ಸಂತ್ರಸ್ಥರಿಗೆ ತಲಾ 10 ಸಾವಿರ ರೂಪಾಯಿಯನ್ನು ನೀಡಲಾಗುವುದು,ನೆರೆ ಬಂದುಹೋದ ಬಳಿಕ ಮನೆಯಲ್ಲಿರುವ ಕೆಸರನ್ನು ಪುರಸಭೆಯಿಂದಲೇ ಶುಚಿಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದ್ದು,ಪೌರಕಾರ್ಮಿಕರು ಈಗಾಗಲೇ ನೆರೆ ಕಡಿಮೆಯಾದ ಮನೆಗಳ ಕೆಸರನ್ನು ಶುಚಿಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಪುರಸಭಾ ಸದಸ್ಯ ಮೊನೀಶ್ ಆಲಿ ಬಂಟ್ವಾಳ ನಗರ ಠಾಣಾ ಬಳಿ ಕಂಪೌಂಡ್ ಗೋಡೆ ಕುಸಿತಗೊಂಡಿರುವ ಬಗ್ಗೆ ಜಿಲ್ಲಾಧಿಕಾರಿಯವರ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ಸಹಾಯಕ ಕಮೀಷನರ್ ಹರ್ಷವರ್ದನ್ ಪಿ.ಜೆ, ಪ್ರೋಬೆಷನರಿ ಐ.ಎ.ಎಸ್ ಅಧಿಕಾರಿ ಶ್ರವಣ್, ತಹಶೀಲ್ದಾರ್ ಡಿ. ಅರ್ಚನಾ ಭಟ್, ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ, ಆರೋಗ್ಯಾಧಿಕಾರಿ ಆಶೋಕ್ ರೈ, ಪುರಸಭಾ ಆರೋಗ್ಯ ಅಧಿಕಾರಿ ರತ್ನ ಪ್ರಸಾದ್, ಕಂದಾಯ ನಿರೀಕ್ಷಕ ಜನಾರ್ದನ, ವಿಜಯ್, ಸಿಬ್ಬಂದಿ ಗಳಾದ ಸದಾಶಿವ ಮೊದಲಾದವರಿದ್ದರು.