ನೂಯಿ ಧಾರಾಕಾರ ಗಾಳಿ ಮಳೆಗೆ ಮನೆ ಕುಸಿತ
ಕೈಕಂಬ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಗುರುವಾರ ಸಂಜೆ ಅಡ್ಡೂರು ಗ್ರಾಮದ ನೂಯಿಯ ಇಂದಿರಾ ನಗರದಲ್ಲಿ ಮನೆಯೊಂದು ಸಂಪೂರ್ಣ ಕುಸಿದು ಬಿದ್ದು ತೀವ್ರ ನಷ್ಟ ಉಂಟಾಗಿದೆ.
ಇಂದಿರಾನಗರದ ಧನಲಕ್ಷಿಧನಲಕ್ಷಿ ಎಂಬವರ ಸುಮಾರು ೩೦ ವರ್ಷಗಳಷ್ಟು ಹಳೆಯದಾದ ಮಣ್ಣಿನ(ಇಟ್ಟಿಗೆ) ಮನೆ ಕುಸಿದಿದೆ. ಸಂಜೆ ಹೊತ್ತು ಮನೆಯ ಹಿಂಬದಿಯಲ್ಲಿ ಗೋಡೆ ಬೀಳುತ್ತಿರುವುದು ಗಮನಕ್ಕೆ ಬಂದ ತಕ್ಷಣ ಧನಲಕ್ಷಿ ಅವರ ಮನೆಯಿಂದ ಹೊರಗೆ ಬಂದಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಮನೆಯ ಗೋಡೆ ಹಾಗೂ ಮೇಲ್ಛಾವಣಿ ಸಂಪೂರ್ಣ ಕುಸಿದಿದೆ. ಸದ್ಯ ಮನೆ ಕಳೆದುಕೊಂಡಿರುವ ಧನಲಕ್ಷಿ ಹಾಗೂ ಅವರ ಇಬ್ಬರು ಮಕ್ಕಳು ನೆರೆಮನೆಯಲ್ಲಿದ್ದಾರೆ.
“ಮನೆ ಕಳೆದುಕೊಂಡು ಕಂಗಾಲಾಗಿದ್ದೇನೆ. ಮಳೆಗಾಲ ಮುಗಿಯುವವರೆಗೆ ಬಾಡಿಗೆ ಮನೆಯಲ್ಲಿ ಇರಬೇಕಾಗುತ್ತದೆ. ಬಡ ಕುಟುಂಬಕ್ಕೆ ಸರ್ಕಾರದ ನೆರವು ಆಶಿಸಿದ್ದೇನೆ” ಎಂದು ಧನಲಕ್ಷಿ ಹೇಳಿದರು.
ಘಟನಾ ಸ್ಥಳಕ್ಕೆ ಗುರುಪುರ ಪಂಚಾಯತ್ ಪಿಡಿಒ ಪಂಕಜಾ ಶೆಟ್ಟಿ, ಗ್ರಾಮ ಆಡಳಿತಾಧಿಕಾರಿ ಶಿಲ್ಪಾ, ಪಂಚಾಯತ್‌ನ ನಿಕಟಪೂರ್ವ ಅಧ್ಯಕ್ಷ ಹಾಗೂ ವಾರ್ಡ್ನ ಹಾಲಿ ಸದಸ್ಯ ಯಶವಂತ ಶೆಟ್ಟಿ, ಸದಸ್ಯರಾದ ಹರೀಶ್, ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಂಚಾಯತ್‌ನಿಂದ ತಾತ್ಕಾಲಿಕ ಸಹಾಯವಾಗಿ ೫ ಸಾವಿರ ರೂ ನೀಡಬಹುದು ಎಂದು ಪಿಡಿಒ ಹೇಳಿದ್ದರೆ, ಸರ್ಕಾರದಿಂದ ಸಿಗುವ ಪರಿಹಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಕಂದಾಯ ಅಧಿಕಾರಿಗಳು ಭರವಸೆ ನೀಡಿದ್ದಾರೆ.