ಬಂಟ್ವಾಳವನ್ನು ದಿಗ್ಬಂಧಿಸಿದ ೧೯೭೪ರ ನೆರೆಗೆ ೫೦ರ ಹರೆಯ
ಬಂಟ್ವಾಳ: ಪ್ರಾತಃಕಾಲದ ನಾಲ್ಕು ಗಂಟೆಯ ಸಮಯ 1974 ರ ಜು.26 ದಿನಾಂಕ,ಶುಕ್ರವಾರ ದಿನ,ನೇತ್ರಾವತಿ ನದಿಯಲ್ಲಿ ಉಕ್ಕಿ ಹರಿದ ನೆರೆನೀರು ನಿಧಾನ ಗತಿಯಲ್ಲಿ ಏರುತ್ತಾ ಬಂಟ್ವಾಳ ಪೇಟೆಯನ್ನು ಸುತ್ತುವರಿಯುತ್ತಾ ಅಮುಕುತ್ತಾ,ಎಲ್ಲಿ ನೋಡಿದರೂ ನೀರೇ ನೀರು ಕಾಣಿಸಿತು. ಬಂಟ್ವಾಳ ನೀರಿನಿಂದಾವರಿಸಿದ ದ್ವೀಪದಂತಾಯಿತು.
1974 ಜು.25 ರಂದು ರಾತ್ರಿಯೇ ನೇತ್ರಾವತಿ ಬಂಟ್ವಾಳದ ಸುತ್ತಮುತ್ತಲಿನಲ್ಲಿ ನೀರು ಅವರಿಸಿತ್ತು.ಮಧ್ಯರಾತ್ರಿಯ ಬಳಿಕ ನೀರು ಏರಿಕೆಯಾಗದೆ,ಇಳಿಕೆಯಾಗದೆ ಅಲ್ಲೇ ನಿಪ್ಪು ( ಸ್ಥಗಿತ) ಆಗಿತ್ತು.

26 ರಂದು ಪ್ರಾತ: ಕಾಲ ನಾಲ್ಕು ಗಂಟೆಯ ಬಳಿಕ ನೀರು ಏರಿಕೆಯಾಗತೊಡಗಿತು.ನೀರು ಬೋರ್ಗರೆದು ಧಾವಿಸುತ್ತಿದ್ದ ಸ್ಥಳದ ಮನೆಮಂದಿಗಳು ಮನೆಖಾಲಿ ಮಾಡುವ ದೃಶ್ಯ,ತಗ್ಗು ಪ್ರದೇಶಗಳಲ್ಲಿದ್ದ ಮಣ್ಣಿನ ಗೋಡೆಗಳಿಂದ ರಚಿತವಾದ ಎಷ್ಟೋ ಮನೆಗಳು ಒಂದೊಂದಾಗಿ ಕುಸಿಯುತ್ತಾ ನೇತ್ರಾವತಿಯ ಒಡಲನ್ನು ಸೇರುತ್ತಿರುವುದು ಕೆಲವೊಂದು ಮನೆಗಳು ಕರುಳೇ ಕಿತ್ತು ಹೋದಂತೆ ಬುಡದಿಂದಲೇ ಮೆಲ್ಲನೆ ವಾಲಿ ಕಣ್ಣೆದುರಲ್ಲೇ ಧರಾಶಾಹಿದಾಗ ಅದರೊಳಗಿನ ಕನಸುಗಳೆಲ್ಲಾ ನೀರಲ್ಲಿ ನೀರಾಗಿ ತೇಲಿ ಹೋದವು.

ಎಲ್ಲೆಲ್ಲೂ ನೀರವ ಮೌನ, ವರುಣನ ಅಬ್ಬರಕ್ಕೆ ಗಿಡಮರ, ಬಳ್ಳಿ,ಹುಲ್ಲು,ಪೊದರುಗಳು ಬಾಗಿದವು ನೆಲ ಚುಂಬಿಸಿದವು, ಆಧಾರ ತಪ್ಪಿದುವು, ಹಕ್ಕಿಗಳು ಮರ ಬಿಟ್ಟವು, ಚಿರ ಪರಿಚಿತ ಜಲಚರಗಳು ತೇಲಿಹೋದವು ಮುಂದಕೆ. ಇನ್ನೇನಿನ್ನೇನು ಅನ್ನುವಾಗಲೇ ಎಲ್ಲವನ್ನು ಮುಳುಗಿಸಿದಳು ನೇತ್ರಾವತಿ.

ಮುಂಜಾನೆ ನಿದ್ದೆಯಿಂದ ಎಬ್ಬಿಸುವ ಹುಂಜಗಳು ಕೇಕೆ ಹಾಕಿದರೆ,ಕೀರಲಿಡುವ ನಾಯಿಗಳು, ಸದ್ದಡಗಿಸಿದ ಬೆಕ್ಕುಗಳು, ರೋದಿಸುತಿದ್ದರೆ, ಅಂಬಾ ಅನ್ನುವ ಜಾನುವಾರುಗಳು, ಮಕ್ಕಳು ಮರಿಮಕ್ಕಳು ಸ್ತ್ರೀ ಪುರುಷರೆನ್ನದೆ ಟೊಂಕ ಬಾಗಿ ರಕ್ಷಣೆಗಾಗಿ ಕೈಯೊಡ್ಡುವ ದೃಶ್ಯ ಅಂದು ಎಲ್ಲೆಲ್ಲೂ ಬಂಟ್ವಾಳದಲ್ಲಿ ಕಂಡುಬರುತ್ತಿತ್ತು
ದೂರವಾಣಿ ಮಾತನಾಡಲೇ ಇಲ್ಲ , ವಿದ್ಯುತ್ ಕಡಿತಗೊಂಡು ಇಡೀ ಕತ್ತಲಾಗಿತ್ತು. ಕೆಲವರು ತಮ್ಮ ದನಕರುಗಳು ಸಾಮಾನು ಸರಂಜಾಮುಗಳೊಂದಿಗೆ ಶ್ರೀ ತಿರುಮಲ ವೆಂಕಟರಮಣ ಹಾಗೂ ಇನ್ನು ಕೆಲವರು ಮಹಾಲಿಂಗೇಶ್ವರ ದೇವಳದಲ್ಲಿ ಆಶ್ರಯ ಪಡೆದರು. ಅದೇ ಕಾಲದಲ್ಲಿ ಹೆಚ್ಚಿನ ನಿರಾಶ್ರಿತರಿಗೆ ಪ್ರವಾಸಿ ಮಂದಿರ ಹಾಗೂ ಅಲ್ಲೇ ಪಕ್ಕದಲ್ಲಿದ್ದ ಸರಕಾರಿ ಬೋರ್ಡ್ ಶಾಲೆ ಆಶ್ರಯ ತಾಣವಾಗಿಸಿ ಗಂಜಿ ಕೇಂದ್ರವನ್ನು ತೆರೆಯಲಾಗಿತ್ತು.

ಮಂಜೇಶ್ವರ ಗಣೇಶ ಮಲ್ಯರು ತಮ್ಮ ಗೋದಾಮಿನಲ್ಲಿದ್ದ ಅವಲಕ್ಕಿ ಮೂಟೆಗಳು ನೆರೆ ನೀರಿನಿಂದ ನಷ್ಟವಾಗದಂತೆ ಎಚ್ಚರ ವಹಿಸಿ ನಿರಾಶ್ರಿತರಿಗೆ ಅವೆಲ್ಲವನ್ನೂ ಹಂಚಿ ಅವರ ಹಸಿವನ್ನು ಇಂಗಿಸಿದರು. ಯುವಕರ ತಂಡವೊಂದು ವೃದ್ಧರು, ಅಶಕ್ತರು, ಮಕ್ಕಳು, ಗರ್ಭಿಣಿ ಸ್ತ್ರೀಯರಿಗೆ ರಕ್ಷಣೆಯನ್ನು ಒದಗಿಸುವಲ್ಲಿ ಶ್ರಮಿಸುತಿತ್ತು. ಭಂಡಸಾಲೆಯಲ್ಲಿ ಒಂದರ ಮೇಲೊಂದರಂತೆ ಪೇರಿಸಿಟ್ಟಿದ್ದ ನರಸಿಂಹ ಚರಡಪ್ಪ ಶ್ಯಾಭೋಗರ ಸಕ್ಕರೆಯ ಚೀಲ ಒಂದೊಂದೇ ಕರಗುತ್ತಾ ಕೊನೆಯಲ್ಲಿ ಬರೆಯ ಚೀಲ ಮಾತ್ರ ಉಳಿಯಿತು. ಭಾಮಿ, ಮಾಣೂರು ಮೊದಲಾದವರ ಅಕ್ಕಿ ಮುಡಿಗಳು ನೀರಿಗೆ ಬಾತುಹೋಗಿ ದವಸಧಾನ್ಯಗಳೊಂದಿಗೆ ಸೇರಿ ದುರ್ವಾಸನೆ ಬೀರುತ್ತತ್ತು. ಜಲಮಟ್ಟದಲ್ಲಿ 1923ರ ನೆರೆಗಿಂತ 74ರಲ್ಲಿ ಐದು ಅಡಿ ಕಡಿಮೆಯಿದ್ದರೂ ನೀರಿನ ರಭಸ ಅಧಿಕವಾಗಿಯೇ ಇತ್ತು.
ಭಾಮಿ ಜಂಕ್ಷನಿನ ಮೂರೂ ದಿಕ್ಕಿನಿಂದ ಬಂದು ಸೇರುತ್ತಿದ್ದ ನೀರು ಪರಸ್ಪರ ಮುಖಾಮುಖಿಯಾಗಿ ಸೇರುವಾಗಿನ ಸದ್ದು ಪೇಟೆಯೆಲ್ಲವನ್ನೂ ನಿಬ್ಬೆರಗಾಗಿಸುತ್ತಿತ್ತು.
ಆಗ ಜಿಲ್ಲಾಧಿಕಾರಿಯಾಗಿ ಜಿ.ಕೆ.ಅರೋರ, ಪೊಲೀಸ್ ಅಧಿಕಾರಿಯಾಗಿ ಆರ್.ಎಸ್ ಛೋಪ್ರಾ ಇದ್ದರು.ತಾವು ಅಪಾಯದಲ್ಲಿರುವುದನ್ನು ಮರೆತು ಸಾಮಾನ್ಯ ಸಣ್ಣ ದೋಣಿಯಲ್ಲಿ ಏರ್ಯ ಲಕ್ಷ್ಮೀನಾರಾಯಣ ಆಳ್ವರೊಂದಿಗೆ ಪಂಚಾಯತ್ ಕಛೇರಿಯ ಮೇಲಿನಿಂದ ಪ್ರವಾಸಿ ಮಂದಿರದತ್ತ ಧಾವಿಸಿ ಬಂದಿದ್ದರು.
ಈ ನೆರೆಯಿಂದಾಗಿ ಅಂದು ಸುಮಾರು ೫೦ ಲಕ್ಷ ನಷ್ಟ, ಹತ್ತು ಸಾವಿರ ಮನೆಗಳು ಧರಾಶಾಯಿ, ೫೦ ಸಾವಿರ ಮಂದಿ ಅನಾಥರಾಗಿದ್ದರು ಎಂಬುದು ಲೆಕ್ಕಾಚಾರ. ಮನೆ ಕಳೆದುಕೊಂಡವರಿಗೆ ಬಂಟ್ವಾಳದ ಗಿರಿಗುಡ್ಡೆ ಹಾಗೂ ಮಂಡಾಡಿಯಲ್ಲಿ ಸರಕಾರದಿಂದ ಪರಿಹಾರ ರೂಪವಾಗಿ ತಲಾ ೫ ಸೆಂಟ್ಸ್ ಜಾಗ ನೀಡಲಾಗಿತ್ತು. ಈ ಪ್ರದೇಶದಲ್ಲಿ ಆಗಿನ ನೆರೆ ಸಂತ್ರಸ್ಥರು ಈಗ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.ಅಂದಿನ ಪರಿಸ್ಥಿತಿಯನ್ನು ಕಣ್ಣಾರೆ ಕಂಡವರು ಈಗಲು ನೆನಪಿಸುತ್ತಿದ್ದಾರೆ.
೨೦೨೪ ಜು. ೨೬ಕ್ಕೆ ೧೯೭೪ರ ನೆರೆಗೆ ೫೦ ವರ್ಷ ತುಂಬಿ ಬರುತ್ತದೆ. ೫೦ ವರ್ಷಕ್ಕೊಂದು ಸಲ ನೇತ್ರಾವತಿಯಲ್ಲಿ ನೆರೆ ಬರುತ್ತದೆ ಅನ್ನುವ ಚಾಲ್ತಿಯ ಮಾತಿಗೆ ಸಾಕ್ಷಿ ಎನ್ನುವಂತೆ ಎರಡು ವಾರ ಮೊದಲೇ ಭರದಿಂದ ಮಳೆ ಸುರಿದು ಅಪಾಯದ ಕರೆಗಂಟೆಯನ್ನು ನೇತ್ರಾವತಿ ಬಾರಿಸಿದ್ದಳು. ಆಶ್ಚರ್ಯವೆಂದರೆ ೮ರಿಂದ ೮.೫ಮೀ. ಮಳೆ ಬಂತೆಂದರೆ ಬಂಟ್ವಾಳ ಮುಳುಗಿತೆಂದೇ ಭಾವಿಸಿದ್ದ ಜನರಿಗೆ ಈಗ ೯ ಮೀ. ಮಳೆ ಸುರಿದರೂ ಬಂಟ್ವಾಳಕ್ಕೆ ನೇತ್ರಾವತಿ ನಾಲಿಗೆ ಚಾಚಿದ್ದೇ ಹೊರತು ಆಪೋಶನಕ್ಕೆ ಅವಸರಿಸಲಿಲ್ಲ, ಮರಳು ದಂಧೆಯಿಂದಾಗಿ ನದೀ ಪಾತ್ರ ಹಿರಿದಾಗಿದೆ. ಇದರ ಜೊತೆಗೆ ಈ ಹಿಂದೆಲ್ಲಾ ನೀರಿಗೊಂದು ದಾರಿಯಿರುತ್ತಿತ್ತು, ಅದು ಪೇಟೆ ಮಧ್ಯದಿಂದಲೋ ಹೊರಗಿನಿಂದಲೋ ತನ್ನ ಗಮ್ಯ ಸ್ಥಾನವನ್ನು ಸೇರುತ್ತಿತ್ತು, ಆದರೆ ಈಗ ನೀರಿನ ಸ್ವಾಭಾವಿಕ ದಾರಿಯೆಲ್ಲವನ್ನೂ ಮುಚ್ಚಿರುವುದರಿಂದ ಎಲ್ಲೆಲ್ಲೂ ನೀರು ಸೇರಿಕೊಂಡು ದಿಗ್ಬಂಧನ ಮಾಡುತ್ತಿದೆ. ಬಂಟ್ವಾಳ ರವಿದಾಸ್ ಪೈ ಅವರ ಭಂಡಸಾಲೆಯ ಗೋಡೆಯಲ್ಲಿ ೧೯೭೪ ರ ನೆರೆಯ ಮಟ್ಟವನ್ನು ಗುರುತಿಸಿರುವುದನ್ನು ಕಾಣಬಹುದಾಗಿದೆ.ಕಾಕತಾಳೀಯ ಎನ್ನುವಂತೆ, ೧೯೭೪ ರ ಜು.೨೬ ಶುಕ್ರವಾರ ಆಗಿದ್ದು ಈ ಸಲವೂ ಜು.೨೬ ಶುಕ್ರವಾರವೇ ಆಗಿದೆ ಅನ್ನುವುದು ಬಲು ಸೋಜಿಗದ ವಿಚಾರ.
ಚಿತ್ರ ಕೃಪೆ: ದಿ. ನರೇಂದ್ರ ಆಚಾರ್ಯ (ಸಂಗ್ರಹ: ಡಾ| ನಿರಂಜನ ಆಚಾರ್ಯ)



