ಮಣ್ಣಡಿ ಮುಚ್ಚಿ ಹೋಗಿರುವ ಕಾಲುದಾರಿಯನ್ನು ನಿರ್ಮಿಸಿ ಕೊಡುವಂತೆ ಸುಜೀರು, ದೈಯ್ಯಡ್ಕ, ಮಲ್ಲಿ ಗ್ರಾಮಸ್ಥರಿಂದ ಪಂಚಾಯತ್ ಗೆ ಮನವಿ
ಬಂಟ್ವಾಳ: ಪುದು ಗ್ರಾಮದ ಸುಜೀರು ದೈವಸ್ಥಾನದ ಬಳಿಯಿಂದ ರಾಷ್ಟ್ರೀಯ ಹೆದ್ದಾರಿ ಹತ್ತನೆ ಮೈಲು ಸಂಪರ್ಕಿಸುವ ಕಾಲು ದಾರಿ ಹಲವು ಸಮಯಗಳಿಂದ ಮುಚ್ಚಿಹೋಗಿದ್ದು ಕಾಲುದಾರಿಯನ್ನು ನಿರ್ಮಿಸಿಕೊಡುವಂತೆ ಸ್ಥಳೀಯ ಗ್ರಾಮಸ್ಥರು ಪುದು ಗ್ರಾಮ ಪಂಚಾಯತಿ ಕಚೇರಿಯಲ್ಲಿ ಪಿಡಿಓ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಈ ಭಾಗದ ಜನರಿಗೆ ಹಲವಾರು ವರ್ಷದಿಂದ ಸಂಪರ್ಕ ಕೊಂಡಿಯಾಗಿದ್ದ ಕಾಲು ದಾರಿಯಲ್ಲಿ ಕೆಸರು ಮಣ್ಣು ತುಂಬಿ ಅದರಲ್ಲಿ ಹುಲ್ಲು ಬೆಳೆದು ಜನರು ನಡೆದಾಡಲು ಸಾಧ್ಯವಿಲ್ಲದಂತಾಗಿದೆ. ಈ ಪ್ರದೇಶದಲ್ಲಿ ಸರಿ ಸುಮಾರು 300 ಮನೆಗಳು ಇದ್ದು ಜನರು ದಿನ ನಿತ್ಯದ ಕೆಲಸಕ್ಕೆ ನಗರಕ್ಕೆ ಹೋಗಲು, ಮಕ್ಕಳು ಶಾಲೆಗೆ ಹೋಗಲು ಈ ಕಾಲುದಾರಿಯನ್ನೇ ಅವಲಂಬಿಸಿದ್ದಾರೆ.
ಕಳೆದ 7 ವರ್ಷದಿಂದ ಈ ಕಾಲುದಾರಿಯ ಪಕ್ಕದಲ್ಲಿ ಉದ್ಯಮಿಯೊಬ್ಬರು ಖಾಸಗಿ ಜಾಗ ಖರೀದಿಸಿ ಮಣ್ಣು ತುಂಬಿದ್ದು ಮಳೆಗೆ ಮಣ್ಣೆಲ್ಲಾ ಈ ಕಾಲು ದಾರಿಗೆ ಬಿದ್ದು ಕಾಲು ದಾರಿ ಮುಚ್ಚಿ ಹೋಗಿದೆ. ಇದರಿಂದಾಗಿ ಕಾಲುದಾರಿಯ ಪಕ್ಕದ ಖಾಸಗಿ ರಸ್ತೆಯಲ್ಲಿ ನಡೆದಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇದೀಗ ಆ ರಸ್ತೆಯೂ ಕೆಸರು ಹಾಗೂ ಕೊಳಚೆ ನೀರು ತುಂಬಿಕೊಂಡು ರಸ್ತೆಗೆ ಕಾಲಿಡಲು ಅಸಹ್ಯ ಹುಟ್ಟಿಸುತ್ತದೆ. ಈ ದಾರಿಯನ್ನೇ ಅವಲಂಬಿಸಿ ನಿತ್ಯ ನಡೆದಾಡುವ ಈ ಭಾಗದ ಜನರ ಭವಣೆ ಹೇಳತೀರದು.
ಈ ಬಗ್ಗೆ ವರ್ಷದ ಹಿಂದೆ ಪಂಚಾಯತಿಗೆ ಮನವಿ ಕೊಟ್ಟರೂ ಯಾವುದೇ ಪ್ರಯೋಜನವಾಗಲಿಲ್ಲ, ಗ್ರಾಮ ಸಭೆಯಲ್ಲಿ ಪ್ರಸ್ತಾಪಿಸಿದಾಗ ಆ ಸಂದರ್ಭದಲ್ಲಿ ಅಧಿಕಾರಿಗಳು ಸ್ಥಳ ಪರಿಶೀಲಿಸಿದ್ದರೂ ಬಳಿಕ ಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ, ಜಾಗ ಖರೋದಿಸಿ ಮಣ್ಣು ಹಾಕಿರುವ ಉದ್ಯಮಿಗೆ ಪಂಚಾಯತಿ ನೋಟಿಸು ನೀಡಿದರೂ ಕ್ಯಾರೇ ಎಂದಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಸ್ಥಳ ಪರಿಶೀಲನೆ:
ಮನವಿ ಸಲ್ಲಿಸಿದ ಬಳಿಕ ಗ್ರಾಮಸ್ಥರ ವಿನಂತಿ ಮೇರೆಗೆ ಪಿಡಿಓ ಹರೀಶ್ ಕೆ.ಎ ಸ್ಥಳ ಪರಿಶೀಲನೆ ನಡೆಸಿದರು. ಕಾಲು ದಾರಿ ನಿರ್ಮಾಣಕ್ಕೆ ಗ್ರಾಮಸ್ಥರು ಒಂದು ವಾರದ ಗಡುವು ನೀಡಿದ್ದು ಈ ವೇಳೆ ಸ್ಥಳಕ್ಕೆ ಆಗಮಿಸಿದ ಜಿ.ಪಂ. ಕಿರಿಯ ಎಂಜಿನಿಯರ್ ರವಿ ಅವರೊಂದಿಗೆ ಚರ್ಚಿಸಿ ನಾಳೆಯಿಂದಲೇ ಕೆಲಸ ಆರಂಭಿಸುವ ಭರವಸೆ ನೀಡಿದರು.
ಈ ಸಂದರ್ಭ ಪುದು ಪಂಚಾಯತಿ ಸದಸ್ಯರಾದ ವಿಷು ಕುಮಾರ್, ಮನೋಜ್ ಆಚಾರ್ಯ ನಾಣ್ಯ, ಪದ್ಮನಾಭ ಶೆಟ್ಟಿ ಪುಂಚಮೆ, ಮಾಜಿ ಸದಸ್ಯರಾದ ಗಣೇಶ್ ದತ್ತನಗರ, ಜಾನಕಿ ಸುಜೀರು, ಅಶ್ರಫ್ ಫರಂಗಿಪೇಟೆ ಅಶ್ರಫ್ ಮಾರಿಪಳ್ಳ, ಲತೀಫ್ ಸುಜೀರು,ಪ್ರತಾಪ್ ಆಳ್ವ ಪ್ರವೀಣ್ ಶೆಟ್ಟಿ, ಮುಖೇಶ್, ಪ್ರವೀಣ್ ಪಾಡಿ, ಹರೀಶ್, ಜಗದೀಶ್, ಪ್ರದೀಪ್ ನಿಖಿಲ್ ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.