ವಾಮಂಜೂರು: ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಮತ್ತು ರಾಜ್ಯ ಸರ್ಕಾರದ ಮೀನುಗಾರಿಕೆ ಇಲಾಖೆ ಜಂಟಿ ಆಶ್ರಯದಲ್ಲಿ ಜಿಲ್ಲೆಯ ಸಾರ್ವಜನಿಕ ಕೆರೆಗಳ ಪುನರುಜ್ಜೀವ ನಿರ್ವಾಹಕ, ಹವ್ಯಾಸಿ ಮೀನು ಉದ್ಯಮಿ ಡಾ. ಎಂ ಸೈಯ್ಯದ್ ನಝೀರ್ ಅವರ ಮುಂದಾಳತ್ವದಲ್ಲಿ ಪಿಲಿಕುಳ ಲೇಕ್ ಗಾರ್ಡನ್‌ನಲ್ಲಿ ಆಯೋಜಿಸಲಾದ `ಪಿಲಿಕುಳ ಮತ್ಸ್ಯೋತ್ಸವ’ವನ್ನು ಮೂಲ್ಕಿ-ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಜು. ೨೧ರಂದು ಉದ್ಘಾಟಿಸಿದರು.

ಪಿಲಿಕುಳ ಲೇಕ್ ಗಾರ್ಡನ್‌ನಲ್ಲಿ ಆಯೋಜಿಸಲಾದ ಮತ್ಸ್ಯೋತ್ಸವ ಸರಳ ಸಮಾರಂಭದಲ್ಲಿ ಶಾಸಕರು ಮಾತನಾಡಿ, ಸುಮಾರು ವರ್ಷಗಳಿಂದ ಇಲ್ಲಿನ ಕೆರೆಯಲ್ಲಿ ಸಾಕಿದ ಮೀನು ಹಿಡಿದು ಸ್ಥಳೀಯ ಹಾಗೂ ದೂರದ ಊರುಗಳ ಮೀನು ಪ್ರಿಯರಿಗೆ ಮಾರಾಟ ಮಾಡಲಾಗುತ್ತಿದೆ. ಮತ್ಸ್ಯೋತ್ಸದಲ್ಲಿ ಗ್ರಾಹಕರಿಗೆ ರೋಹ್, ಕಾಟ್ಲ್, ತೆಲಪಿಯ, ಕಾಮನ್ ಕಾರ್ಪ್(ಗೌರಿ ಮೀನು) ಮತ್ತಿತರ ತಾಜಾ ಮೀನುಗಳು ಲಭ್ಯವಿವೆ. ಹಿಂದಿನ ಜಿಲ್ಲಾಧಿಕಾರಿ ಭರತ್‌ಲಾಲ್ ಮೀನಾ ಅವರ ಕನಸಿನ ಕೂಸಾಗಿರುವ ಪಿಲಿಕುಳ ಪ್ರವಾಸಿ ಕೇಂದ್ರದಲ್ಲಿ ಪ್ರತಿವರ್ಷ ಸಾರ್ವಜನಿಕ ಮಟ್ಟದಲ್ಲಿ ನಡೆಯುವ ಒಂದು ಉತ್ತಮ ಕಾರ್ಯಕ್ರಮ ಇದಾಗಿದೆ ಎಂದರು.

ಸಮಾರAಭದಲ್ಲಿ ದ.ಕ ಜಿಲ್ಲಾ ಅಪರ ಜಿಲ್ಲಾಧಿಕಾರಿ(ಎಡಿಸಿ) ಸಂತೋಷ್, ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಪ್ರವೀಣ್ ನಾಯಕ್, ಪಿಲಿಕುಳ ವಿಜ್ಞಾನ ಕೇಂದ್ರ ನಿರ್ದೇಶಕ ಡಾ. ಕೆ. ವಿ. ರಾವ್, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ನಿಯಮಿತದ(ಕೆಎಫ್‌ಡಿಸಿಎಲ್) ಪ್ರಧಾನ ವ್ಯವಸ್ಥಾಪಕ ಮಹೇಶ್ ಕುಮಾರ್, ದ.ಕ ಜಿಲ್ಲಾ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ದಿಲೀಪ್, ಮೂಡುಶೆಡ್ಡೆ ಗ್ರಾಮ ಪಂಚಾಯತ್ ಅಧ್ಯಕ್ಷ ಅನಿಲ್ ಕುಮಾರ್, ಜಿಲ್ಲೆಯ ಸಾರ್ವಜನಿಕ ಕೆರೆಗಳ ಪುನರುಜ್ಜೀವ ನಿರ್ವಾಹಕ, ಹವ್ಯಾಸಿ ಮೀನು ಉದ್ಯಮಿ ಡಾ. ಎಂ. ಸೈಯ್ಯದ್ ನಝೀರ್ ಮತ್ತಿತರರು ಉಪಸ್ಥಿತರಿದ್ದರು. ಪಿಲಿಕುಳ ಪ್ರಾಧಿಕಾರದ ಅಧಿಕಾರಿ ರಾಮಕೃಷ್ಣ ಮರಾಠೆ ಸ್ವಾಗತಿಸಿದರು. ಪ್ರಾಧಿಕಾರದ ಸಸ್ಯಶಾಸ್ತç ವಿಭಾಗದ ಪ್ರಧಾನ ವಿಜ್ಞಾನಿ ಡಾ. ಸೂರ್ಯಪ್ರಕಾಶ್ ಶೆಣೈ ವಂದಿಸಿದರು.

ಮುಗಿಬಿದ್ದ ಗ್ರಾಹಕರು :

ಪಿಲಿಕುಳ ಲೇಕ್ ಗಾರ್ಡನ್‌ಲ್ಲಿ ಕಳೆದ ರಾತ್ರಿಯೇ ಬೀಡು ಬಿಟ್ಟಿದ್ದ ಡಾ. ನಝೀರ್ ಮತ್ತು ಅವರ ತಂಡದ ಸದಸ್ಯರು ತೆಪ್ಪಗಳ ಮೂಲಕ ಕೆರೆಗೆ ಹರಡಲಾದ ಬಲೆಗಳಿಂದ ನಿರಂತರ ಕಾಟ್ಲ, ರೋಹ್, ತೆಲಪಿಯ, ಕಾಮನ್ ಕಾರ್ಪ್ ಹಾಗೂ ಇತರ ಜಾತಿಯ ಮೀನು ಹಿಡಿದು ದಡದಲ್ಲಿ ರಾಶಿ ಹಾಕಿದ್ದು, ಬೆಳಿಗ್ಗಿನಿಂದಲೇ ಮಾರಾಟ ಜೋರಾಗಿತ್ತು. ತಾಜಾ ಮೀನು ಖರೀದಿಸಲು ಸ್ಥಳೀಯ ಹಾಗೂ ದೂರದ ಪ್ರದೇಶಗಳ ಮಂದಿ ತಂಡೋಪತAಡವಾಗಿ ಆಗಮಿಸಿದ್ದು, ಮೀನು ಖರೀದಿಗೆ ಜನ ಮುಗಿಬಿದ್ದಿದ್ದರು. ಅಲ್ಲೇ ಪಕ್ಕದಲ್ಲಿ ಮೀನುಗಾರಿಕಾ ಇಲಾಖೆಯು ಮೀನು ಪ್ರಿಯ ಪ್ರವಾಸಿಗರಿಗೆ ಮೀನಿನ ಖಾದ್ಯಗಳ ವ್ಯವಸ್ಥೆ ಮಾಡಿತ್ತು.

“ಕಳೆದ ೧೪ ವರ್ಷದಿಂದ ಪಿಲಿಕುಳ ಸಹಿತ ಜಿಲ್ಲೆಯ ಕೆಲವು ಕೆರೆಗಳಲ್ಲಿ ಮೀನಿನ ಮರಿ ಹಾಕಿ ಮೀನುಗಾರಿಕೆ ನಡೆಸುತ್ತಿದ್ದೇವೆ. ಕೆರೆಗಳ ಅಭಿವೃದ್ಧಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ಮೀನು ಹಿಡಿಯುವುದು ಹವ್ಯಾಸವಾಗಿದೆ. ಮೀನು ಮಾರಾಟ ಕೇಂದ್ರದ ಪಕ್ಕದಲ್ಲಿ ಗ್ರಾಹಕರಿಗೆ ಮೀನು ತುಂಡರಿಸಿ ಕೊಡುವ ವ್ಯವಸ್ಥೆಯೊಂದಿಗೆ ಈ ಬಾರಿ ಎಲ್ಲ ಜಾತಿಯ ಕೇಜಿ ಮೀನಿಗೆ ೧೬೦ ರೂ. ಫಿಕ್ಸ್ ಮಾಡಲಾಗಿದೆ.

ಕಳೆದ ಬಾರಿ ಒಂದು ಟನ್ ೪೦೦ ಕಿಲೋ ಮೀನು ಹಿಡಿಯಲಾಗಿತ್ತು. ಈ ಬಾರಿ ಅಷ್ಟೇ ಪ್ರಮಾಣದ ಮೀನು ಸಿಗುವ ಸಾಧ್ಯತೆ ಕಡಿಮೆ ಇದೆ. ಮಳೆಗಾಲದಲ್ಲಿ ಕೆರೆಯಲ್ಲಿ ಉಂಟಾದ ಬಿರುಕಿನಿಂದ ಕೆರೆಯ ಒಂದಷ್ಟು ಮೀನು ಹೊರಗೆ ಹೋಗಿದೆ. ಕೆರೆ ಮೀನಿಗೆ ಬೇಡಿಕೆ ಹೆಚ್ಚಿದೆ” ಎಂದು ಮಂಗಳೂರಿನಲ್ಲಿ ಹರಳಿನ ವ್ಯಾಪಾರಿಯಾಗಿರುವ ಡಾ. ಎಂ. ಸೈಯ್ಯದ್ ನಝೀರ್ ಹೇಳಿದರು.

“ನಿಗಮದ ವತಿಯಿಂದ ಈ ಬಾರಿ ೨೦,೦೦೦ ಮೀನು ಮರಿ ಬಿಡಲಾಗಿದೆ. ಇಲ್ಲಿನ ಗ್ರಾಹಕರಿಗೆ ಮಾರಾಟ ಮಾಡಿ ಉಳಿಕೆಯಾದ ಮೀನನ್ನು ಬೆಂಗಳೂರು ಕಬ್ಬನ್ ಪಾರ್ಕ್, ಕೋಲಾರ, ತುಮಕೂರಿಗೆ ರಫ್ತು ಮಾಡುತ್ತೇವೆ. ಜೊತೆಗೆ ಇಲಾಖೆಯೊಂದಿಗೆ ಸಹಕರಿಸುತ್ತಿರುವ ೨೮ ಏಜೆನ್ಸಿಗಳು ಮೀನು ಮಾರಾಟ ಮಾಡುತ್ತವೆ. ಈ ಬಾರಿ ಸುಮಾರು ೭-೮ ಕಿಲೋ ತೂಕದ ಮೀನುಗಳು ಸಿಕ್ಕಿವೆ. ಪ್ರತಿವರ್ಷ ಹಬ್ಬದೋಪಾದಿಯಲ್ಲಿ ಪಿಲಿಕುಳ ಮತ್ಸ್ಯೋತ್ಸವ ನಡೆಯುತ್ತಿದೆ. ಇದು ಸಂತೋಷದ ಸಂಗತಿ” ಎಂದು ಕೆಎಫ್‌ಡಿಸಿಎಲ್‌ನ ಪ್ರಧಾನ ವ್ಯವಸ್ಥಾಪಕ ಮಹೇಶ್ ತಿಳಿಸಿದರು.

ದನಂಜಯ ಗುರುಪುರ

By suddi9

Leave a Reply

Your email address will not be published. Required fields are marked *