ಬಂಟ್ವಾಳ: ನೆರೆ ಇಳಿಮುಖ ವಾರದ ಬಳಿಕ ಪ್ರಥಮ ಬಿಸಿಲು ಕಂಡ ಕೃಷಿಕರಲ್ಲಿ ಸಂತಸ
ಬಂಟ್ವಾಳ:ಕಳೆದ ಒಂದು ವಾರದಿಂದ ನಿರಂತರ ಮಳೆಯಿಂದ ಶುಕ್ರವಾರ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಭಾರೀ ಏರಿಕೆಗೊಂಡು ಪ್ರವಾಹ ಭೀತಿಯಿಂದ ಕಂಗೆಟ್ಟಿದ್ದ ಇಲ್ಲಿನ ಕೃಷಿಕರಲ್ಲಿ ಶನಿವಾರ ನೆರೆ ಇಳಿಕೆ ಜೊತೆಗೆ ದಿನವಿಡೀ ಬಿಸಿಲು ಕಂಡು ಸಂತಸ ಮೂಡಿಸಿದೆ.
ಇಲ್ಲಿನ ನೇತ್ರಾವತಿ ನದಿಯಲ್ಲಿ ಶುಕ್ರವಾರ 8.4 ಮೀಟರ್ ಅಪಾಯದ ಮಟ್ಟ ತಲುಪಿ ಹಲವಾರು ಎಕರೆ ಅಡಿಕೆ ತೋಟಗಳು ಜಲಾವೃತಗೊಂಡಿದ್ದು, ಶನಿವಾರ ಮಳೆ ಇಲ್ಲದೆ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ 7.4 ಮೀಟರಿಗೆ ಇಳಿಮುಖಗೊಂಡಿದೆ. ಮಾತ್ರವಲ್ಲದೆ ಶನಿವಾರ ರಾತ್ರಿ ಆಗಸದಲ್ಲಿ ಚಂದಿರನೂ ಕಾಣಿಸಿಕೊಂಡಿದ್ದಾನೆ ಎಂದು ಕೃಷಿಕರು ಸಂತಸ ವ್ಯಕ್ತಪಡಿಸಿದ್ದಾರೆ.