ಖಾಸಗಿ ಬಸ್ಸಿನವರ ಒತ್ತಡಕ್ಕೆ ಮಣಿದ ಆರ್ ಟಿ ಓ
ಮಂಗಳೂರು -ಮಳಲಿ -ಪೊ ಳಲಿ ಸರ್ಕಾರಿ ಬಸ್ಸು ಬಂದ್
ಕೈಕಂಬ : ಮಂಗಳೂರು-ಮಳಲಿ-ಪೊಳಲಿ ರೂಟ್‌ಗೆ ೪ ತಿಂಗಳವರೆಗೆ ತಾತ್ಕಾಲಿಕ ನೆಲೆಯಲ್ಲಿ ಆರಂಭಿಸಲಾದ ನರ್ಮ್(ಕೆಎಸ್ಸಾರ್ಟಿಸಿ) ಬಸ್, ಈ ರೂಟ್‌ನಲ್ಲಿ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದರೂ, ಖಾಸಗಿ ಬಸ್ ಮಾಲಕರ ಒತ್ತಡಕ್ಕೆ ಮಣಿದ ಮಂಗಳೂರು ಆರ್‌ಟಿಓ ಜು. ೧೭ರಿಂದ ಈ ಬಸ್ ಸ್ಥಗಿತಗೊಳಿಸಲು ನಿರ್ಧರಿಸಿದೆ ಎಂದು ಸಾರ್ವಜನಿಕ ವಲಯದಿಂದ ಗಂಭೀರ ಆರೋಪ ಕೇಳಿ ಬಂದಿದೆ.

ಮ0ಗಳೂರು-ಮಳಲಿಗೆ ಸರ್ಕಾರಿ ಅಥವಾ ಖಾಸಗಿ ಬಸ್ ಆರಂಭಿಸುವ0ತೆ ಸಾರ್ವಜನಿಕರು ಸಂಬAಧಪಟ್ಟ ಇಲಾಖೆಗಳು ಮತ್ತು ಜನಪ್ರತಿನಿಧಿಗಳಿಗೆ ಕಳೆದ ೧೦ ವರ್ಷದಿಂದ ಬೇಡಿಕೆ ಇಟ್ಟಿದ್ದರು. ಈ ಮಧ್ಯೆ ಮಾ. ೧೫ರಂದು ಕೆಎಸ್ಸಾರ್ಟಿಸಿಯಿಂದ ಮಂಗಳೂರು-ಗುರುಪುರ ಕೈಕಂಬ-ಅರ್ಬಿ ನಾಡಾಜೆ-ಜೋಡುತಡಮೆ-ಮಳಲಿ-ಕಾಜಿಲ-ಪೊಳಲಿಗೆ ಬಸ್ ಸೇವೆ ಆರಂಭಗೊAಡಾಗ ಗ್ರಾಮೀಣ ಭಾಗದ ಪ್ರಯಾಣಿಕರು ಅತೀವ ಸಂತಸ ವ್ಯಕ್ತಪಡಿಸಿದ್ದರು. ನಾಲ್ಕು ತಿಂಗಳವರೆಗೆ(ಜು. ೧೩) ತಾತ್ಕಾಲಿಕ ನೆಲೆಯಲ್ಲಿ ಓಡಾಟ ನಡೆಸುತ್ತಿದ್ದ ಬಸ್‌ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ದುರದೃಷ್ಟವಶಾತ್ ಜು. ೧೭ರಿಂದ ಬಸ್ ಸ್ಥಗಿತಗೊಂಡಿದ್ದು, ತೀವ್ರ ಬೇಸರ ವ್ಯಕ್ತಪಡಿಸಿರುವ ಪ್ರಯಾಣಿಕರು ಆರ್‌ಟಿಒ ಅಧಿಕಾರಿಗಳಿಗೆ ಹಿಡಿಶಾಪ ಹಾಕಲಾರಂಭಿಸಿದ್ದಾರೆ.
ನರ್ಮ್ ಬಸ್ ಸೇವೆಗೆ ಗ್ರಾಮೀಣ ಭಾಗದ ಜನರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿರುವ ಹಿನ್ನೆಲೆಯಲ್ಲಿ ಜು. ೧೩ರೊಳಗೆ ಪರವಾನಿಗೆ ಪುನರ್‌ನವೀಕರಿಸಲು ಆರ್‌ಟಿಐಗೆ ಅವಕಾಶವಿತ್ತು. ಈ ಹಂತದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಸಹಿತ ಸ್ಥಳೀಯ ಕಾಂಗ್ರೆಸ್ ಮುಖಂಡರ ನಿಯೋಗ ಬೆಂಗಳೂರಿನಲ್ಲಿ ವಿಧಾನಸಭಾ ಸಭಾಪತಿ ಯು. ಟಿ. ಖಾದರ್ ಅವರನ್ನು ಭೇಟಿಯಾಗಿ ಮಂಗಳೂರು-ಮಳಲಿ-ಪೊಳಲಿ ಸರ್ಕಾರಿ ಬಸ್ ಖಾಯಂಗೊಳಿಸಬೇಕು ಎಂದು ಒತ್ತಾಯಿಸಿ ಮನವಿ ನೀಡಿತ್ತು. ಮನವಿಗೆ ಸ್ಪಂದಿಸಿದ ಖಾದರ್, ಗ್ರಾಮೀಣ ಭಾಗದ ಈ ಬಸ್ ಸೇವೆ ಮುಂದುವರಿಸುವAತೆ ಮಂಗಳೂರು ಆರ್‌ಟಿಒಗೆ ಸೂಚಿನೆ ನೀಡಿದ್ದರು.
ಈ ಮಧ್ಯೆ ಪೊಳಲಿ ಭಾಗದ ಕೆಲವು ಖಾಸಗಿ ಬಸ್ ಮಾಲಕರ ಒತ್ತಡದ ಪ್ರಯುಕ್ತ ಆ ಬಸ್‌ಗಳ ಚಾಲಕರು ಮತ್ತು ನಿರ್ವಾಹಕರು ಮಳಲಿಯ ಸರ್ಕಾರಿ ಬಸ್ ಸೇವೆ ನಿಲ್ಲಿಸಲು ನಿರಂತರ ಪ್ರಯತ್ನ ಮುಂದುವರಿಸಿದ್ದರು. ಬಸ್ ಟೈಮಿಂಗ್ ಪ್ರಶ್ನಿಸಿ ವಿನಾ ಕಾರಣ ತೊಂದರೆ ಕೊಡುತ್ತಿದ್ದ ಖಾಸಗಿ ಬಸ್‌ನವರು, ಕೆಲವು ಸಂದರ್ಭದಲ್ಲಿ ಸಂಘರ್ಷಕ್ಕೂ ಮುಂದಾಗಿ ಜೀವ ಬೆದರಿಕೆಯೊಡ್ಡಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಖಾಸಗಿ-ಸರ್ಕಾರಿ ಸಂಘರ್ಷ :
ಜು. ೧೬ರಂದು ಮಳಲಿಯಿಂದ ಮಂಗಳೂರಿಗೆ ಸಾಗುತ್ತಿದ್ದ ಸರ್ಕಾರಿ ಬಸ್‌ಗೆ ನಂತೂರಿನಲ್ಲಿ ಅಡ್ಡಹಾಕಿದ ಪೊಳಲಿ ಭಾಗದ ಖಾಸಗಿ ಬಸ್ಸೊಂದರ ಚಾಲಕ ಮತ್ತು ನಿರ್ವಾಹಕರು ನಮಗೆ(ನರ್ಮ್ ಬಸ್ ನಿರ್ವಾಹಕ, ಚಾಲಕ) ಬೈದು, ನಿಮ್ಮನ್ನು ಸ್ಟೇಟ್ ಬ್ಯಾಂಕ್‌ನಲ್ಲಿ ನೋಡಿಕೊಳ್ಳುತ್ತೇವೆ ಎಂದು ಜೀವ ಬೆದರಿಕೆಯೊಡ್ಡಿದರು. ಈ ಬಗ್ಗೆ ನಾವು ತಕ್ಷಣ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಖಾಸಗಿ ಬಸ್‌ನ ಸಿಬ್ಬಂದಿ ಕರೆಸಿ ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಎಸ್ಸಾರ್ಟಿಸಿ ಹಿರಿಯ ಅಧಿಕಾರಿಯ ಸೂಚನೆ ಮೇರೆಗೆ ಇಂದಿನಿAದ(ಜು. ೧೭ರಿಂದ) ಈ ಬಸ್ ಸೇವೆ ಸ್ಥಗಿತಗೊಳಿಸಿದ್ದೇವೆ” ಎಂದು ಮಂಗಳೂರು-ಮಳಲಿ ಸರ್ಕಾರಿ ಬಸ್ ನಿರ್ವಾಹಕ ಪ್ರದೀಪ್ ಪತ್ರಿಕೆಗೆ ತಿಳಿಸಿದರು.

“ಇತ್ತೀಚೆಗೆ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದ ಕೆಎಸ್ಸಾರ್ಟಿಸಿ ಆಯುಕ್ತ ರಾಜೇಶ್ ಶೆಟ್ಟಿ ಅವರು ಮಂಗಳೂರು-ಮಳಲಿ-ಪೊಳಲಿ ಬಸ್ ಸೇವೆ ಸ್ಕೀಮ್ ರೂಟ್ ಎಂಬುದಾಗಿ ಶಿಫಾರಸು ಮಾಡಿದ್ದರು. ಹಾಗಾಗಿ ಇದು ಸ್ಥಗಿತಗೊಳ್ಳುವ ಸಾಧ್ಯತೆಯೇ ಇಲ್ಲ ಎಂದು ನಂಬಿದ್ದೆವು. ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದ್ದ ಈ ಬಸ್ ಸೇವೆ ವಿಸ್ತರಿಸದ ಆರ್‌ಟಿಓ ಅಧಿಕಾರಿಯವರು ಬಸ್ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ. ಅವರ ಈ ನಿರ್ಧಾರದ ಹಿಂದೆ ಖಾಸಗಿ ಬಸ್‌ನವರ ಒತ್ತಡ ಇದೆ. ಬಸ್ ಇಲ್ಲದೆ ಈ ಭಾಗದ ನೂರಾರು ಪ್ರಯಾಣಿಕರು ಸಮಸ್ಯೆ ಎದುರಿಸುವಂತಾಗಿದೆ. ಬಸ್ ಸೇವೆ ಆರಂಭಿಸದೆ ಹೋದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು” ಎಂದು ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಸುನಿಲ್ ಜಿ. ಎಚ್ಚರಿಸಿದ್ದಾರೆ.

“ಬಸ್ ಅವಧಿ ವಿಸ್ತರಿಸಲು ಜು. ೧೩ ಕೊನೆಯ ದಿನವಾಗಿತ್ತು. ಜು. ೫ರಂದು ಗ್ರಾಮಸ್ಥರು ಆರ್‌ಟಿಒಗೆ ಮನವಿ ಸಲ್ಲಿಸಿದ್ದರು. ಆರ್‌ಟಿಒ ಖಾಸಗಿ ಬಸ್‌ನವರ ಒತ್ತಡಕ್ಕೆ ಮಣಿದು ನಮ್ಮ ಮನವಿ ನಿರ್ಲಕ್ಷಿö್ಯಸಿದೆ. ಸರ್ಕಾರಿ ಬಸ್ ಸೇವೆ ಬಂದ್ ಮಾಡಲು ಖಾಸಗಿಯವರಿಂದ ಹಲವು ಪ್ರಯತ್ನ ನಡೆದಿದೆ. ಸುಮಾರು ೧೦ ವರ್ಷಗಳ ಹಿಂದಿನಿAದಲೂ ಮಂಗಳೂರು-ಮಳಲಿ-ನಾಡಾಜೆಗೆ ಬಸ್ ಆರಂಭಿಸುವAತೆ ಸಾರ್ವಜನಿಕರು ಖಾಸಗಿಯವರಿಗೂ ಬೇಡಿಕೆ ಇಟ್ಟಿದ್ದರು. ಇದೀಗ ಸೇವೆಯಲ್ಲಿದ್ದ ಸರ್ಕಾರಿ ಬಸ್‌ಗೆ ಖಾಸಗಿಯವರು ಅಡ್ಡಗಾಲಿಟ್ಟು ಸಾರ್ವಜನಿಕರಿಗೆ ಅನ್ಯಾಯ ಮಾಡಿದ್ದಾರೆ” ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಬೂಬ ಪೂಜಾರಿ ಮಳಲಿ ಬೇಸರ ವ್ಯಕ್ತಪಡಿಸಿದ್ದಾರೆ.

“ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಂದ ಹೆಚ್ಚು ಸದುಪಯೋಗವಾಗುತ್ತಿದ್ದ ಸರ್ಕಾರಿ ಬಸ್ ಪುನರ್ ಆರಂಭಿಸಬೇಕು. ದಿನಗೂಲಿಗಳ ಬದುಕಿನಲ್ಲಿ ಸರ್ಕಾರಿ ಅಧಿಕಾರಿಗಳು ಚೆಲ್ಲಾಟವಾಡಬಾರದು. ಇಂತಹ ಅನ್ಯಾಯಕ್ಕೆ ಜನಪ್ರತಿನಿಧಿಗಳು ಅವಕಾಶ ನೀಡಬಾರದು” ಎಂದು ಗಂಜಿಮಠದ ನಿವಾಸಿ ಜನಾರ್ದನ ಕುಲಾಲ್ ಒತ್ತಾಯಿಸಿದ್ದಾರೆ.
ಬರಹ:ದನಂಜಯ ಗುರುಪುರ