ಕುಕ್ಕಿಪಾಡಿಯಿಂದ ಕಾಣೆಯಾದ ದರ್ಶನಪಾತ್ರಿ ಪಲ್ಗುಣಿಯಲ್ಲಿ ಶವವಾಗಿ ಪತ್ತೆ, ನದಿಗೆ ಹಾರಿ ಆತ್ಮಹತ್ಯೆ
ಕೈಕಂಬ: ಗುರುವಾರ ನುಸುಕಿನ ಜಾವ ಮನೆಯಿಂದ ಬಾಡಿಗೆಯ ನೆಪದಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದ ರಿಕ್ಷಾಚಾಲಕ, ಏಣ್ಮೂರು ಶ್ರೀ ನಾಗಬೃಹ್ಮ ದೈವಸ್ಥಾನದ ಬೈದರ್ಕಳ ಗರಡಿಯಲ್ಲಿ ಕೋಟಿಯ ದರ್ಶನಪಾತ್ರಿಯಾಗಿರುವ ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾಮದ ನೇಲ್ಯಕುಮೇರು ನಿವಾಸಿ ಬಾಬುಪೂಜಾರಿಯವರ ಪುತ್ರ ಗಿರೀಶ್ (೩೭) ಅವರು ಶವವಾಗಿ ಪಲ್ಘುಣಿ ನದಿಯಲ್ಲಿ ಅಡ್ಡೂರು ಅಳಕೆ ಎಂಬಲ್ಲಿ ಶುಕ್ರವಾರ ಸಂಜೆ ಪತ್ತೆಯಾಗಿದ್ದಾರೆ.

ಅಡ್ಡೂರು ಪರಿಸರದ ಕೆಳಗಿನಕೆರೆ ಎಂಬಲ್ಲಿ ಗಿರೀಶ್ ಅವರ ಮೃತದೇಹ ನೀರಿನಲ್ಲಿ ಪತ್ತೆಯಾಗಿದ್ದು,ಸ್ಥಳೀಯ ಅಕ್ಬರ್ ಮತ್ತವರ ಸಂಗಡಿಗರು ಸತತ ಪ್ರಯತ್ನಪಟ್ಟು ಶವವನ್ನು ನೀರಿನಿಂದ ಮೇಲಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಬಜಪೆ ಮತ್ತು ಪುಂಜಾಲಕಟ್ಟೆ ಪೊಲೀಸರು ಹಾಗೂ ಸ್ಥಳೀಯರ ಸಹಕಾರದೊಂದಿಗೆ ಈ ಸಂದರ್ಭ ಅವರ ಸಂಬAಧಿಕರು ಹಾಜರಿದ್ದು,ಮುಂದಿನ ಪ್ರಕ್ರಿಯೆ ನಡೆಸಿದರು. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಪಲ್ಘುಣಿ ನದಿಗೆ ಹಾರಿ ಆತ್ಮಹತ್ಯೆ :
ಮನೆಯಿಂದ ಖಾಕಿ ಶರ್ಟ ಲುಂಗಿ ಧರಿಸಿ ಆಟೋರಿಕ್ಷಾ ಚಲಾಯಿಸಿಕೊಂಡು ಬಂದಿದ್ದ ಗಿರೀಶ್ ಅಡ್ಡೂರು-ಪೊಳಲಿ ಸೇತುವೆಯ ಮೇಲೆ ಅಟೋರಿಕ್ಷಾ ನಿಲ್ಲಿಸಿ ಬಳಿಕ ಪಲ್ಘುಣಿ ನದಿಗೆ ದುಮುಕಿ ಆತ್ಮಹತ್ಯೆ ಮಾಡಿರುವ ಬಗ್ಗೆ ಪೊಲೀಸರು ತಮ್ಮ ಪ್ರಾಥಮಿಕ ತನಿಖೆಯಲ್ಲಿ ಕಂಡು ಕೊಂಡಿದ್ದಾರೆ.ಬುಧವಾರ ರಾತ್ರಿ ಗಸ್ತಿನಲ್ಲಿದ್ದ ಬಜಪೆ ಪೊಲೀಸರಿಗೆ ಗುರುವಾರ ನುಸುಕಿನ ಜಾವ ಅಡ್ಡೂರು-ಪೊಳಲಿ ಸೇತುವೆಯ ಮೇಲೆ ಅನಾಥ ಸ್ಥಿತಿಯಲ್ಲಿ ಆಟೋರಿಕ್ಷಾ ಪತ್ತೆಯಾಗಿದ್ದು,ಪೊಲೀಸರು ಇದನ್ನು ವಶಪಡಿಸಿದ್ದರು. ಅದರಲ್ಲಿ ದೊರೆತ ದಾಖಲಾತಿಯನ್ವಯ ಗಿರೀಶ್ ಅವರ ಮನೆಯವರಿಗೆ ಮಾಹಿತಿ ನೀಡಿದ್ದರು.

ಗಿರೀಶ್ ಪೂಂಜಾಲ್‌ಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾಮದ ನಿವಾಸಿಯಾಗಿದ್ದು, ಇವರ ನಾಪತ್ತೆಯಾಗಿರುವ ಅವರ ಪತ್ನಿಯ ದೂರಿನಂತೆ ಪುಂಜಾಲಕಟ್ಟೆ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದರೆ, ಮೃತದೇಹ ಬಜಪೆ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಪ್ರಕರಣವನ್ನು ಬಜಪೆ ಪೊಲೀಸರು ಪುಂಜಾಲಕಟ್ಟೆ ಪೊಲೀಸರಿಗೆ ವರ್ಗಾಯಿಸುವ ಸಾಧ್ಯತೆ ಇದೆ.
ಏಣ್ಮೂರು ಶ್ರೀ ನಾಗಬೃಹ್ಮ ದೈವಸ್ಥಾನದ ಬೈದರ್ಕಳ ಗರಡಿಯಲ್ಲಿ ಕೋಟಿಯ ದರ್ಶನಪಾತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿದ್ದರು. ಪತ್ನಿ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ.ಗಿರೀಶ್ ಅವರ ಆತ್ಮಹತ್ಯೆ ಸ್ಪಷ್ಟ ಕಾರಣ ತಿಳಿದುಬಂದಿದೆ.ನಾನಾ ಉಹಾಪೋಹಗಳು ಸ್ಥಳೀಯವಾಗಿ ಹಬ್ಬಿದೆ.
ಗಿರೀಶ್ ಅವರ ಪತ್ನಿ ತಾರಾ ಅವರ ತಂಗಿ ಮೀರಾ ಅವರ ಪತಿ ಹರೀಶ್ ಅಣ್ಣ ತಮ್ಮಂದಿರಾಗಿದ್ದು, ಮೀರಾ ಮತ್ತು ಹರೀಶ್ ಗೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದ್ದು ,ಈ ಬಗ್ಗೆ ಬಂಟ್ವಾಳ ಸಾಂತ್ವನ ಕೇಂದ್ರದಲ್ಲಿ ಹೇಳಿಕೆಯನ್ನು ನೀಡಲಾಗಿತ್ತು.
ಬುಧವಾರ ರಾತ್ರಿ ೧೦.೦೦ ಗಂಟೆಗೆ ಗಿರೀಶ್ ಊಟ ಮಾಡಿ ಮಲಗಿದ್ದು, ಗುರುವಾರ ಬೆಳಗ್ಗಿನ ಜಾವ ತಾರ ಅವರ ಅತ್ತಿಗೆಯ ಮೊಬೈಲಿಗೆ ಪೊಳಲಿ ಸೇತುವೆಯಲ್ಲಿ ಗಿರೀಶ್ ಆಟೋರಿಕ್ಷಾ ಪತ್ತೆಯಾದ ಬಗ್ಗೆ ಕರೆ ಬಂದಿತ್ತು.ತಕ್ಷಣ ಮನೆಯಲ್ಲಿ ನೋಡಿದಾಗ ಗಿರೀಶ್ ಮಲಗಿದ್ದ ಸ್ಥಳದಲ್ಲಿರಲಿಲ್ಲ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿತ್ತು.ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.