ಎನ್‌ಎಚ್ ಕಾಮಗಾರಿ ಪ್ರದೇಶದಲ್ಲಿ ಅಪಘಾತಗಳ ಭೀತಿ
ಎಚ್ಚರಿಕಾ ಫಲಕ, ದಾರಿದೀಪ ಅಳವಡಿಕೆಗೆ ಆಗ್ರ
ಕೈಕಂಬ: ಮಂಗಳೂರು-ಮೂಡಬಿದ್ರೆ ರಾಷ್ಟ್ರೀಯ ಹೆದ್ದಾರಿ(ಎನ್‌ಎಚ್) ೧೬೯ರ ವಾಮಂಜೂರು, ಕೆತ್ತಿಕಲ್, ಪರಾರಿ, ಕುಡುಪು, ಕೈಕಂಬ ವಿಕಾಸನಗರ, ಗುರುಪುರ ಕೈಕಂಬ ಜಂಕ್ಷನ್ ಮತ್ತಿತರ ಪ್ರದೇಶಗಳ ತಿರುವುಗಳಲ್ಲಿ ಪ್ರಸಕ್ತ ಮಳೆಗಾಲದಲ್ಲೂ ಚತುಷ್ಪಥ ವಿಸ್ತರಣೆ ಕಾಮಗಾರಿ ಮುಂದುವರಿದಿದ್ದು, ಈ ಪ್ರದೇಶಗಳಲ್ಲಿ ವಾಹನ ಅಪಘಾತಗಳ ಸಂಖ್ಯೆ ಹೆಚ್ಚಲಾರಂಭಿಸಿದೆ.

ಹೆದ್ದಾರಿಯ ಕೆತ್ತಿಕಲ್ ತಿರುವಿನಲ್ಲಿ ರಸ್ತೆಗೆ ಗುಡ್ಡದ ಮಣ್ಣು ಜರಿದಿದೆ ಅಥವಾ ಕೊರೆಯಲಾಗಿದೆ. ಇಲ್ಲಿ ಸಾಕಷ್ಟು ಹತ್ತಿರದವರೆಗೂ ಎದುರು ದಿಕ್ಕಿನಿಂದ ಬರುವ ವಾಹನಗಳು ಕಾಣುವುದಿಲ್ಲ. ಹೆದ್ದಾರಿ ದೀಪಗಳು ಉರಿಯದ ಇಲ್ಲಿ ರಾತ್ರಿ ವೇಳೆ ವಾಹನ ಸಂಚಾರ ಅಪಾಯಕಾರಿಯಾಗಿದೆ ಎಂದು ವಾಹನ ಸವಾರರು ಭೀತಿ ವ್ಯಕ್ತಪಡಿಸಿದ್ದಾರೆ.

ಕೆತ್ತಿಕಲ್‌ಗೆ ಹತ್ತಿರದ ಚೆಕ್-ಪೋಸ್ಟ್ ಹಾಗೂ ಇತರ ಕೆಲವು ಆಯಕಟ್ಟಿನ ಪ್ರದೇಶಗಳಲ್ಲಿ ರಸ್ತೆಗೆ ಸೂಕ್ತ ಎಚ್ಚರಿಕಾ ಫಲಕಗಳು ಅಳವಡಿಸಿಲ್ಲ. ಹಾಗಾಗಿ ವಾಹನ ಸವಾರರು ಸಹಜವಾಗಿಯೇ ಗೊಂದಲಕ್ಕೀಡಾಗುತ್ತಿದ್ದಾರೆ. ಜೂ. ೧೯ರಂದು ಚೆಕ್-ಪೋಸ್ಟ್ ಬಳಿ ಬಸ್-ಬೈಕ್ ಅಪಘಾತದಲ್ಲಿ ವಾಮಂಜೂರಿನ ಅಮೃತನಗರದ ನಿವಾಸಿ ಉದಯ ಕುಮಾರ್ ಎಂಬವರು ದಾರುಣ ಸಾವನ್ನಪ್ಪಿದ್ದರೆ, ಕಾಮಗಾರಿ ಪ್ರದೇಶದಲ್ಲಿ ಕೆಲವು ದ್ವಿಚಕ್ರ ವಾಹನಗಳ ಸ್ಕಿಡ್ ಆಗಿ ವಾಹನಿಗರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಕಾಮಗಾರಿ ಮುಂದರಿದಿರುವ ವಾಮಂಜೂರು ಜಂಕ್ಷನ್ ಮತ್ತು ಹೆದ್ದಾರಿ ತಿರುವುಗಳಲ್ಲಿ ಸೂಕ್ತ ಎಚ್ಚರಿಕಾ ಫಲಕಗಳ ಅಳವಡಿಕೆ ಸಹಿತ ಗುತ್ತಿಗೆ ಕಂಪೆನಿ ವತಿಯಿಂದ ಟ್ರಾಫಿಕ್ ನಿಯಂತ್ರಣ ಮಾಡುವ ಅಗತ್ಯವಿದೆ. ಈ ನಿಯಮ ಗುರುಪುರ ಕೈಕಂಬ ಜಂಕ್ಷನ್‌ಗೂ ಅನ್ವಯವಾಗಬೇಕು. ಉರಿಯುವ ದಾರಿದೀಪಗಳ ಕೊರತೆ ನೀಗಿಸಬೇಕು. ರಸ್ತೆ ಪಕ್ಕದಲ್ಲಿರುವ ಹಾಕಲಾಗಿರುವ ಮಣ್ಣಿನ ರಾಶಿ ತೆರವುಗೊಳಿಸಬೇಕು ಎಂಬುದು ಸಾರ್ವಜನಿಕರ ಕಳಕಳಿಯಾಗಿದೆ.
ಕೆತ್ತಿಕಲ್‌ಗೆ ರಕ್ಷಣಾ ಗೋಡೆ ಬೇಡವೇ ?
ಕೆತ್ತಿಕಲ್ ಗುಡ್ಡ ಪ್ರದೇಶದಲ್ಲಿ ಸಾಮಾನ್ಯ ಮಳೆಗೆ ಮಣ್ಣು ಕುಸಿಯಲಾರಂಭಿಸಿದೆ. ಗುಡ್ಡದ ಮೇಲ್ಭಾಗದಲ್ಲಿರುವ ನಿರ್ಮಾಣಗೊಳ್ಳುತ್ತಿರುವ ಕೋಟ್ಯಂತರ ರೂ. ಅನುದಾನದ ವೆಟ್‌ವೆಲ್ ಕುಸಿಯುವ ಭೀತಿ ಉಂಟಾಗಿದೆ. ಭಾರೀ ಮಳೆಯಾಗುವ ಮುಂಚೆ ಇಲ್ಲಿ ರಕ್ಷಣಾ ಗೋಡೆ ನಿರ್ಮಿಸಬೇಕು. ಜೊತೆಗೆ, ಕೆಲವು ದಿನಗಳವರೆಗೆ ಗುಡ್ಡದ ಮಣ್ಣು ಕೊರೆಯುವ ಕಾರ್ಯ ಸ್ಥಗಿತಗೊಳಿಸಿ, ಹೆದ್ದಾರಿ ಪಕ್ಕದಲ್ಲಿ ಚರಂಡಿ ನಿರ್ಮಿಸಲು ಆದ್ಯತೆ ನೀಡಬೇಕು ಎಂದು ಇತ್ತೀಚೆಗೆ ವಾಮಂಜೂರು-ಕೆತ್ತಿಕಲ್ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸ್ಥಳೀಯರು ಮನವಿ ಮಾಡಿಕೊಂಡಿದ್ದಾರೆ.
“ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುತ್ತಿರುವ ಇಲ್ಲಿ ವಾಹನಿಗರು ತಾಳ್ಮೆಯಿಂದ ಮುಂದುವರಿಯುವ ಅಗತ್ಯವಿದೆ. ಕಲ್ಲಡ್ಕ-ಮಾಣಿ ಹೆದ್ದಾರಿ ಕಾಮಗಾರಿಗೆ ಹೋಲಿಸಿದರೆ ಇಲ್ಲಿ ಈವರೆಗೆ ಹೇಳಿಕೊಳ್ಳುವ ಅಸಮರ್ಪಕತೆ ಕಂಡು ಬಂದಿಲ್ಲ. ದೊಡ್ಡ ಪ್ರಾಜೆಕ್ಟ್ನಲ್ಲಿ ಸಣ್ಣಪುಟ್ಟ ನ್ಯೂನತೆಗಳು ಕಂಡು ಬರುವುದು ಸಹಜ” ಎಂದು ಸ್ಥಳೀಯರೊಬ್ಬರು ಹೇಳಿದರು.