ಬಂಟ್ವಾಳ: ನಗರಾಭಿವೃದ್ಧಿ ಪ್ರಾಧಿಕಾರ ಪ್ರಥಮ ಸಭೆ ರಸ್ತೆ, ಚರಂಡಿ, ಕೆರೆ ಒತ್ತುವರಿ ತೆರವು : ಬೂಡಾ ಅಧ್ಯಕ್ಷ ಬೇಬಿ ಕುಂದರ್ ಎಚ್ಚರಿಕೆ
ಬಂಟ್ವಾಳ: ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ರೂ ೧ ಕೋಟಿ ವೆಚ್ಚದಲ್ಲಿ ಮೂರು ಕರೆ ಅಭಿವೃದ್ಧಿ ಸೇರಿದಂತೆ ಕಚೇರಿಯಲ್ಲಿ ಜನ ಸಾಮಾನ್ಯರಿಗೆ ಅನುಕೂಲವಾಗುವಂತೆ ಪಾರದರ್ಶಕ ಮತ್ತು ಪ್ರಾಮಾಣಿಕ ಆಡಳಿತಕ್ಕೆ ಒತ್ತು ನೀಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ಬೂಡಾ ಅಧ್ಯಕ್ಷ ಬೇಬಿ ಕುಂದರ್ ಹೇಳಿದ್ದಾರೆ.

ಬಿ.ಸಿ.ರೋಡು ನಗರಾಭಿವೃದ್ಧಿ ಕಚೇರಿಯಲ್ಲಿ ಗುರುವಾರ ನಡೆದ ಪ್ರಥಮ ಸಭೆಯಲ್ಲಿ ಪಾಲೊಂಡ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ‘ಪುರಸಭಾ ವ್ಯಾಪ್ತಿಯಲ್ಲಿ ಕೆಲವೊಂದು ಬಹುಮಹಡಿ ಕಟ್ಟಡಗಳು ರಸ್ತೆ, ಚರಂಡಿ ಮತ್ತು ಕೆರೆ ಒತ್ತುವರಿ ಮಾಡಿರುವುದು ಕಂಡು ಬಮದಿದ್ದು, ಶೀಘ್ರವೇ ಅವರಿಗೆ ನೋಟೀಸು ನೀಡಿ ದಂಡ ವಸೂಲಿ ಅಥವಾ ಒತ್ತುವರಿ ತೆರವುಗೊಳಿಸಲು ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಗುರುವಾರ ನಡೆದ ಪ್ರಥಮ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಪುರಸಭಾ ವ್ಯಾಪ್ತಿಯ ಅರ್ಬಿಗುಡ್ಡೆ ಎಂಬಲ್ಲಿ ೨.೫೦ ಎಕರೆ ಜಮೀನು, ನರಹರಿ ಪರ್ವತ ಬಳಿ ೪೭ ಸೆಂಟ್ಸ್ ಮತ್ತು ಬೋಳಂಗಡಿ ಎಂಬಲ್ಲಿ ೧೮ ಸೆಂಟ್ಸ್ ಜಮೀನಿನಲ್ಲಿ ಪಾಳು ಬಿದ್ದಿರುವ ಕೆರೆ ರೂ ೧ ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗುವುದು ಎಂದರು.
ಇನ್ನೊಂದೆಡೆ ಪುರಸಭಾ ವ್ಯಾಪ್ತಿಯ ಬಂಟ್ವಾಳ, ಕೈಕುಂಜೆ ಮತ್ತಿತರ ಕಡೆಗಳಲ್ಲಿ ೬ ನಿವೇಶನಗಳು ಖಾಲಿ ಬಿದ್ದಿದ್ದು, ಇದಕ್ಕೆ ನಾಮಫಲಕ ಅಳವಡಿಸಿ ‘ನಾಗರಿಕ ಸೌಲಭ್ಯ ನಿವೇಶನ’ವನ್ನಾಗಿ ಪರಿವರ್ತನೆಗೊಳಿಸಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಆದಾಯ ತರುವ ಉದ್ದೇಶವೂ ಇದೆ ಎಂದರು.
ಇಲ್ಲಿನ ಬಿ.ಸಿ.ರೋಡು ಹಳೆ ಉಪ ನೋಂದಣಾಧಿಕಾರಿ ಕಚೇರಿ ಬಳಿ ಪಾಳು ಬಿದ್ದಿರುವ ಸರ್ಕಾರಿ ಜಮೀನಿನಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಅವರ ಕನಸಿನಂತೆ ಸುಸಜ್ಜಿತ ‘ಖಾಸಗಿ ಬಸ್ ನಿಲ್ದಾಣ’ ನಿರ್ಮಿಸುವ ಬಗ್ಗೆಯೂ ಚಿಂತನೆ ಹಾಕಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಬೂಡಾ ಕಾರ್ಯದರ್ಶಿ ಅಭಿಲಾಷ್, ಸದಸ್ಯರಾದ ಮನೋಹರ ನೇರಂಬೋಳ್, ಹರೀಶ ಅಜ್ಜಿಬೆಟ್ಟು, ರಝಾಕ್ ಗೂಡಿನಬಳಿ ಇದ್ದರು.