ತುಟ್ಟಿಭತ್ತೆ ಪಾವತಿಸಲು ಆಗ್ರಹಿಸಿ ಬೀಡಿ ಕಾರ್ಮಿಕರ ಪ್ರತಿಭಟನೆ
ಬಂಟ್ವಾಳ; ಬೀಡಿ ಕಾರ್ಮಿಕರಿಗೆ 2024-25 ನೇ ಸಾಲಿನ ತುಟ್ಟಿಭತ್ತೆ ರೂ.22.72 ಕೂಡಲೇ ಪಾವತಿಸುವಂತೆ ಆಗ್ರಹಿಸಿ ಪಾಣೆಮಂಗಳೂರಿನ ಸದರ್ನ್ ಇಂಡಿಯಾ ಬೀಡಿ ಕಂಪೆನಿ ಎದುರು ಎಸ್.ಕೆ.ಬೀಡಿ ವರ್ಕರ್ಸ್ ಫೆಡರೇಶನ್ ಹಾಗೂ ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್ ಜಂಟಿ ಆಶ್ರಯದಲ್ಲಿ ಬೀಡಿ ಕಾರ್ಮಿಕರ ಪ್ರತಿಭಟನೆ ನಡೆಸಲಾಯಿತು. ಎಪ್ರಿಲ್ 1 ರಿಂದ ಬೀಡಿ ಮಾಲಕರು ಪಾವತಿಸಬೇಕಾಗಿದ್ದ ತುಟ್ಟಿಭತ್ತೆಯನ್ನು ಮೂರು ತಿಂಗಳಿಂದ ಪಾವತಿಸದೇ ವಿಳಂಬಿಸುತ್ತಿರುವ ಮಾಲಕರ ನೀತಿಗೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಹಕ ಬೆಲೆ ಸೂಚ್ಯಾಂಕದ ಆಧಾರದಲ್ಲಿ ಕರ್ನಾಟಕ ರಾಜ್ಯ ಸರಕಾರದ ಗಜೆಟೆಡ್ ನೋಟಿಫಿಕೇಶನ್ ಪ್ರಕಾರ ಸಾವಿರ ಬೀಡಿಗೆ ರೂ.22.72 ಎಪ್ರಿಲ್ 1 ರಿಂದಲೇ ಮಾಲಕರು ಬೀಡಿ ಕಾರ್ಮಿಕರಿಗೆ ನೀಡುವಂತೆ ಆದೇಶ ಹೊರಡಿಸಲಾಗಿದ್ದರೂ ಮಾಲಕರು ಮೂರು ತಿಂಗಳು ಕಳೆದರೂ ಈ ಮೊತ್ತವನ್ನು ಪಾವತಿಸಿರುವುದಿಲ್ಲ. ಈ ಮಧ್ಯೆ ಸಹಾಯಕ ಕಾರ್ಮಿಕ ಆಯುಕ್ತರನ್ನು ಭೇಟಿಯಾಗಿ ಮನವಿ ಮಾಡಲಾಗಿದೆ. ಇದರ ಪರಿಣಾಮ ಆಯುಕ್ತರು ಜೂ. 21ರಂದು ಜಿಲ್ಲೆಯ ಎಲ್ಲಾ ಬೀಡಿ ಮಾಲಕರು ಮತ್ತು ಕಾರ್ಮಿಕ ಸಂಘಟನೆಗಳ ಸಭೆ ಕರೆದಿದ್ದಾರೆ. ಅಂದು ಮಾತುಕತೆ ವಿಫಲವಾದರೆ ತುಟ್ಟಿ ಭತ್ತೆ ಜ್ಯಾರಿಯಾಗುವ ತನಕ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿ ಮುಂದೆ ಬೀಡಿ ಕಾರ್ಮಿಕರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಎಸ್ ಕೆ ಬೀಡಿ ವರ್ಕರ್ಸ್ ಫೆಡರೇಶನ್ ಅಧ್ಯಕ್ಷ ವಿ.ಸೀತರಾಂ ಬೇರಿಂಜ, ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್ ಅಧ್ಯಕ್ಷ ವಸಂತ ಆಚಾರಿ ಮಾತನಾಡಿದರು.ಎಐಟಿಯುಸಿ ಜಿಲ್ಲಾ ಸಮಿತಿ ಸದಸ್ಯ ವಿ.ಕುಕ್ಯಾನ್, ಬೀಡಿ ಫೆಡರೇಶನ್ ನ ಜಿಲ್ಲಾ ಕೋಶಾಧಿಕಾರಿ ಬಿ.ಶೇಖರ್, ಫೆಡರೇಶನ್ ನ ಸಹಕಾರ್ಯದರ್ಶಿ ಎಂ.ಕರುಣಾಕರ, ಶಮಿತಾ, ಮಮತಾ, ಕೇಶವತಿ, ಹರ್ಷಿತ್, ಮೋಹಿನಿ, ರೇವತಿ ಎಸ್, ಪೂವಪ್ಪ ಗಟ್ಟಿ, ರಾಜೀವ ಪೂಜಾರಿ, ಎಂ. ಬಿ.ಭಾಸ್ಕರ, ಹಾಗೂ ಸಿಐಟಿಯು ನ ಚಂದ್ರ ಪೂಜಾರಿ, ಲೋಲಾಕ್ಷಿ ಬಂಟ್ವಾಳ ಉಪಸ್ಥಿತರಿದ್ದರು.
ಫೆಡರೇಶನ್ ನ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಪ್ರಾಸ್ತಾವಿಕವಾಗಿ ಸ್ವಾಗತಿಸಿದರು. ಸಿಐಟಿಯುನ ಚಂದ್ರ ಪೂಜಾರಿ ವಂದಿಸಿದರು.