“ಬಸ್ ಗೆ ಸಮಸ್ಯೆ ಇಲ್ಲ,ಸಿಬ್ಬಂದಿಗಳ ಕೊರತೆಯಿದೆ..ಆಗಸ್ಟ್ ಅಂತ್ಯಕ್ಕೆ ಪರಿಹಾರ
ಬಂಟ್ವಾಳ:ಕೆಎಸ್ ಆರ್ ಟಿಸಿಯಲ್ಲಿ ಬಸ್ ಗಳಿಗೆ ಸಮಸ್ಯೆಯಿಲ್ಲ,ಆದರೆ ಸಿಬ್ಬಂದಿಗಳ ಕೊರತೆಯಿಂದಾಗಿ ಮಂಗಳೂರು- ಧರ್ಮಸ್ಥಳ ಸಹಿತ ವಿವಿಧ ಗ್ರಾಮೀಣ ಭಾಗದಲ್ಲಿ ಬಸ್ ಸಂಚಾರದಲ್ಲಿ ತೊಂದರೆಯಾಗಿದ್ದು,ಆಗಸ್ಟ್ ತಿಂಗಳಲ್ಲಿ ಎಲ್ಲವು ಸರಿಯಾಗಲಿದೆ ಎಂದು ಕೆಎಸ್ ಆರ್ ಟಿಸಿ ಅಧಿಕಾರಿಗಳು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಭರವಸೆ ಕೊಟ್ಟಿದ್ದಾರೆ.
ಕೆಎಸ್ ಆರ್ ಟಿಸಿ ಬಸ್ ನಿಲುಗಡೆ ಮತ್ತು ಬೇಡಿಕೆಯ ಹಿನ್ನಲೆಯಲ್ಲಿ ಮಂಗಳವಾರ ಬಿ.ಸಿ.ರೋಡಿನಲ್ಲಿರುವ ಶಾಸಕರ ಕಚೇರಿಯಲ್ಲಿ ಕೆಎಸ್ ಆರ್ ಟಿ ಸಿ ಅಧಿಕಾರಿಗಳ ಸಭೆ ನಡೆಸಿದ ಶಾಸಕ ರಾಜೇಶ್ ನಾಯ್ಕ್ ಅವರು ಬಂಟ್ವಾಳ ಕ್ಚೇತ್ರದ ವಿವಿದೆಢೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಉಂಟಾಗಿರುವ ಬಸ್ ಸಮಸ್ಯೆಯ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಂಡರು.
ಮಂಗಳೂರು – ಧರ್ಮಸ್ಥಳ ರೂಟ್ ನಲ್ಲಿ 46 ಬಸ್ ಗಳು ಸಂಚರಿಸುತ್ತಿದ್ದು,ನಾಲ್ಕು ಸೂಪರ್ ಫಾಸ್ಟ್ ಬಸ್ ಗಳು ಓಡಾಡುತ್ತಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಚಾಲಕ,ನಿರ್ವಾಹಕರು ಸೇರಿ 420 ಸಿಬ್ಬಂದಿಗಳ ಕೊರತೆಯಿದೆ ಹಾಗಾಗಿ ಬೆಳಿಗ್ಗೆ ಮತ್ತು ಸಂಜೆಯ ಪೀಕ್ ಅವರ್ ನಲ್ಲಿ ವಿದ್ಯಾರ್ಥಿಗಳ ಸಹಿತ ಪ್ರಯಾಣಿಕರಿಗೆ ಸಮಸ್ಯೆಯಾಗಿದೆ.ಜುಲೈ ಅಂತ್ಯಕ್ಕೆ ಸುಮಾರು 200 ಮಂದಿ ಸಿಬ್ಬಂದಿಗಳ ನೇಮಕವಾಗಲಿದ್ದು, ಆಗ ಹೆಚ್ಚುವರಿಯಾಗಿ ಈ ರೂಟ್ ನಲ್ಲಿ ಬಸ್ ಓಡಿಸಲಾಗುವುದು, ಈ ಹಿಂದೆ ರಾತ್ರಿ ಮಂಗಳೂರಿನಿಂದ ಮಡಂತ್ಯಾರ್ ವರೆಗೆ ಸಂಚರಿಸುತ್ತಿದ್ದ ಬಸ್ ನ್ನು ಧರ್ಮಸ್ಥಳ ರೂಟಿಗೆ ವಿಸ್ತರಿಸಲಾಗಿದೆ ಎಂದು ಕೆಎಸ್ ಆರ್ ಟಿಸಿ ಅಧಿಕಾರಿಗಳು ಶಾಸಕರಿಗೆ ವಿವರಣೆ ನೀಡಿದರು.
141 ಬಸ್ ಗಳ ಸಂಚಾರ:
ಬಿ.ಸಿ.ರೋಡಿನಿಂದ ಮಂಗಳೂರಿಗೆ
141 ಕೆ ಎಸ್ ಆರ್ ಟಿಸಿ ಬಸ್ ಗಳು ಸಂಚರಿಸುತ್ತದ್ದು,ಆದರೂ ಬಸ್ ಗಳು ಸಾಕಾಗುತ್ತಿಲ್ಲ ,ಹೆಚ್ಚುವರಿ ಬಸ್ ಗಳ ಬೇಡಿಕೆಯನ್ನು ಪರಿಶೀಲಿಸುವುದಾಗಿ ಅಧಿಕಾರಿಗಳು ತಿಳಿಸಿದರು.
ಆಗಸ್ಟ್ ತಿಂಗಳಲ್ಲಿ ಕಾಲೇಜುಗಳು ಕೂಡ ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿದ್ದು,ಆಗ ಮತ್ತಷ್ಟು ಸಮಸ್ಯೆಯಾಗುವುದನ್ನು ಪರಿಹರಿಸುವ ನಿಟ್ಟಿನಲ್ಲಿ ಈಗಿಂದಿಗಲೇ ಅದಕ್ಕೆ ಎಲ್ಲಾರೀತಿಯ ಪೂರ್ವ ತಯಾರಿಯನ್ನು ನಡೆಸಲಾಗುತ್ತಿದೆ.ಇನ್ನಷ್ಟು ಬಸ್ ಗಳು ಬರುವ ನಿರೀಕ್ಷೆ ಇದ್ದು,ಜುಲೈ ಅಂತ್ಯದಲ್ಲಿ ಸಿಬ್ಬಂದಿಗಳ ನೇಮಕವು ಆಗಲಿದೆ ಎಂದು ಕೆ ಎಸ್ ಆರ್ ಟಿಸಿ ಅಧಿಕಾರಿಗಳು ಶಾಸಕರಿಗೆ ಮನವರಿಕೆ ಮಾಡಿದರು.ಸಿಬಂದಿಗಳ ನೇಮಕದ ಬಳಿಕ ಹೆಚ್ಚುವರಿ ಬಸ್ ಗಳನ್ನು ಅವಶ್ಯಕತೆ ಇದ್ದಲ್ಲಿ ಹಾಕುವ ಕುರಿತು ಈ ಸಂದರ್ಭ ಸೂಚನೆ ನೀಡಲಾಯಿತು.
ಬರಿಮಾರಿಗೆ ಬಸ್ ಆರಂಭ:
ಕಳೆದ 40 ವರ್ಷಗಳಿಂದ ಶಂಭೂರು ಮತ್ತು ಬರಿಮಾರಿಗೆ ರಾತ್ರಿ ವೇಳೆ ಬಂದು ನಿಲುಗಡೆಯಾಗಿ ಮರುದಿನ ಬೆಳಿಗ್ಗೆ ಇಲ್ಲಿಂದಲೇ ಸಂಚರಿಸುತ್ತಿದ್ದರಿಂದ ವಿದ್ಯಾರ್ಥಿಗಳು,ಸಾರ್ವಜನಿಕರಿಗೆ ಅನುಕೂಲವಾಗಿತ್ತಿತ್ತು,ಕೋವಿಡ್ ಬಳಿಕಈ ಎರಡು ಬಸ್ ಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ತಾ.ಪಂ.ನ ಮಾಜಿ ಉಪಾಧ್ಯಕ್ಷ ಆನಂದ ಶಂಭೂರು ಅವರು ಶಾಸಕರ ಹಾಗೂ ಅಧಿಕಾರಿಗಳ ಗಮನ ಸೆಳೆದರು.
ತಕ್ಷಣ ಶಾಸಕ ರಾಜೇಶ್ ನಾಯ್ಕ್ ಅವರು ಕೆಎಸ್ ಆರ್ ಟಿಸಿ ಡಿ.ಸಿ.ಅವರಿಗೆ ಕರೆ ಮಾಡಿ ಮಾಹಿತಿ ನೀಡಿದರು.ಈ ಕೋರಿಕೆಯನ್ನು ಪರಿಶೀಲಿಸಿದ ಅಧಿಕಾರಿಯವರು ಮಂಗಳವಾರವೇ ರಾತ್ರಿ ಬರಿಮಾರಿಗೆ ಬಸ್ ಅಗಮಿಸಲಿದೆ ಎಂದು ತಿಳಿಸಿದರು.
ಅತೀ ಶೀಘ್ರವೇ ಶಂಭೂರಿಗೂ ಈ ಹಿಂದಿನಂತೆ ಬಸ್ ವ್ಯವಸ್ಥೆ ಕಲ್ಪಿಸುವ ಭರವಸೆಯನ್ನು ಅಧಿಕಾರಿಯವರು ನೀಡಿದರು.
ಶಂಭೂರು,ನೀರಪಾದೆ,ದಾಸಕೋಡಿ ಹಾಗೂ ಬೋಳಂತೂರು,ಸಾಲೆತ್ತೂರು ನಡುವೆ ಬಸ್ ಸಂಚಾರದ ಬೇಡಿಕೆಯನ್ನು ಈ ಸಂದರ್ಭ ಸ್ಥಳೀಯ ಪ್ರಮುಖರು ಇರಿಸಿದರು.ಶಾಲಾ ಮಕ್ಕಳಿಗೆ ಅನುಕೂಲವಾಗುವಂತೆ ಶಂಭೂರು,ನೀರಪಾದೆಯಲ್ಲಿ ಈಗಾಗಲೇ ಸಂಚರಿಸುವ ವೇಳಾಪಟ್ಟಿಯನ್ನು ಬದಲಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದರು.
ಮಡಿಕೇರಿ,ಮೈಸೂರು ಮತ್ತಿತರ ಕಡೆಗೆ ತೆರಳುವ ವೇಗದೂತ ಬಸ್ ಗಳು ಮಾಣಿಯಲ್ಲಿ ನಿಲುಗಡೆಯಾಗುತ್ತದೆ. ಅದೇರೀತಿ ಕಲ್ಲಡ್ಕದಲ್ಲಿ ಈ ಬಸ್ ಗಳನ್ನು ನಿಲುಗಡೆಗೊಳಿಸಿದರೆ ಅನುಕೂಲವಾಗಲಿದೆ ಎಂಬ ಬೇಡಿಕೆಗೆ ಅಧಿಕಾರಿಗಳು ಸಮ್ಮತಿಸಿದರು.
ಸರಪಾಡಿಗೆ ಬಸ್ ಶೀಘ್ರ ಪುನರಾರಂಭ:
ಸರಪಾಡಿಯಲ್ಲಿ ಈ ಹಿಂದೆ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಬೇಡಿಕೆಂತೆ ಹಾಲಿ ಸಾರಿಗೆ ಸಚಿವರ ಅನುಮೋದನೆ ಪಡೆದು ಬಿ.ಸಿ.ರೋಡಿನಿಂದ ಸರಪಾಡಿಗೆ ಸಂಚರಿಸಬೇಕಾಗಿದ್ದ ಕೆಎಸ್ ಆರ್ ಟಿಸಿ ಬಸ್ ನ್ನು ಸ್ಥಗಿತಗೊಳಿಸಿರವುದಕ್ಕೆ ಶಾಸಕ ರಾಜೇಶ್ ನಾಯ್ಕ್ ಅವರು ಅಸಮಾಧಾನ ವ್ಯಕ್ತಪಡಿಸಿದರು.ಈ ಬಗ್ಗೆ ಸಾರಿಗೆ ಸಚಿವರ ಗಮನಕ್ಕೆ ತರಲೇ ಎಂದು ಪ್ರಶ್ನಿಸಿದರು.
ಚುನಾವಣಾ ನೀತಿ ಸಂಹಿತೆಯ ಹಿನ್ನಲೆಯಲ್ಲಿ ಬಸ್ ಸಂಚಾರ ಆರಂಬಿಸಲು ಸಾಧ್ಯವಾಗಲಿಲ್ಲ ಎಂದು ಬಿ.ಸಿ.ರೋಡು ಡಿಪೋ ಮೆನೇಜರ್ ಶ್ರೀಶ್ ಭಟ್ ಅವರು ಸಮಜಾಯಿಷಿ ನೀಡಿದರು.ಈ ಬಸ್ ಸಂಚಾರ ಯಾರು ತಡೆಹಿಡಿದಿದ್ದಾರೆ ಎಂಬುದು ಅರಿವಿದೆ ಎಂದು ಶಾಸಕರು ತಿಳಿಸಿದರು.ಪತ್ರ ನೀಡಿದರೆ ಕೂಡಲೇ ಬಸ್ ಪುನರಾರಂಭಿಸುವುದಾಗಿ ಶ್ರೀಶ್ ಭಟ್ ಭರವಸೆ ನೀಡಿದರು.
ಬಹುದಿನದ ಬೇಡಿಕೆಯಲ್ಲೊಂದಾದ
ಅನಂತಾಡಿಯಿಂದ ಪುತ್ತೂರುಗೆ ಬಸ್ ಸಂಚಾರವನ್ನು ಮಂಗಳವಾರ ಬೆಳಿಗ್ಗೆಯಿಂದ ಆರಂಭಿಸಿದ ಹಿನ್ನಲೆಯಲ್ಲಿ ಸ್ಥಳೀಯ ಪ್ರಮುಖರು ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.
ಖಾಸಗಿ ವಾಹನಗಳು ಕೆಎಸ್ಸಾರ್ಟಿಸಿ ಬಸ್ ಗೆ ಸ್ಪರ್ಧೆ ಎನ್ನುವಂತೆ ಅದೇ ಹೊತ್ತಿನಲ್ಲಿ ಆಗಮಿಸುವುದು, ಖಾಲಿ ಬಸ್ ಗಳಿದ್ದರೂ ಬಸ್ ಗೆ ಹತ್ತದೇ ಇರುವುದೇ ಮೊದಲಾದ ವಿಚಾರದ ಕುರಿತು ಚರ್ಚಿಸಲಾಯಿತು. ಬಸ್ ಪಾಸ್ ವ್ಯವಸ್ಥೆಯ ಕುರಿತು ಕೆಲವೊಂದು ಗೊಂದಲಗಳನ್ನು ಪರಿಹರಿಸಲಾಯಿತು.
ಇಂತಹ ಸಣ್ಣ ಪುಟ್ಟ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರತಿ ಎರಡು ತಿಂಗಳಿಗೊಮ್ಮೆ ಸಭೆ ನಡೆಸಲು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.
ಪುತ್ತೂರು ವಿಭಾಗೀಯ ಸಂಚಾರಿ ಅಧಿಕಾರಿ
ಮುರಳೀಧರ್ ಆಚಾರ್ಯ,ಮಂಗಳೂರು ವಿಭಾಗೀಯ ಸಂಚಾರಿ ಅಧಿಕಾರಿ
ಕಮಲ್ ಕುಮಾರ್ ,ಮಂಗಳೂರು ಮೂರನೇ ಡಿಪೋ ಮೆನೇಜರ್ ಮಂಜುನಾಥ್ ಅವರು ಉಪಸ್ಥಿತರಿದ್ದು ಪೂರಕ ಮಾಹಿತಿ ನೀಡಿದರು.
ಪ್ರಮುಖರಾದ ಬಿ.ದೇವದಾಸಶೆಟ್ಟಿ, ಚೆನ್ನಪ್ಪ ಆರ್ .ಕೋಟ್ಯಾನ್,ವಜ್ರನಾಭ ಕಲ್ಲಡ್ಕ,ದಿನೇಶ್ ಅಮ್ಟೂರು,ಜಯರಾಮ ರೈ ,ಆನಂದ ಎ.ಶಂಭೂರು,ಸದಾನಂದಗೌಡ ನಾವೂರ, ಶಿವರಾಜ್,ಗಣೇಶ್ ಪೂಜಾರಿ,ಪುರುಷೋತ್ತಮ ಶೆಟ್ಟಿ ಮೊದಲಾದವರಿದ್ದರು.