ಕರ್ನಾಟಕದಲ್ಲಿ ದುಬಾರಿಯಾಯ್ತು ಪೆಟ್ರೋಲ್, ಡೀಸೆಲ್; ಮಾರಾಟ ತೆರಿಗೆ ಹೆಚ್ಚಿಸಿದ ಸರ್ಕಾರ
ಬೆಂಗಳೂರು: ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡು ಕೆಲವೇ ದಿನಗಳಲ್ಲಿ ರಾಜ್ಯ ಸರ್ಕಾರ ಜನರಿಗೆ ಶಾಕ್ ನೀಡಿದೆ. ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಚಿಲ್ಲರೆ ಮಾರಾಟ ತೆರಿಗೆ ಹೆಚ್ಚಳ ಮಾಡಲಾಗಿದ್ದು, ಇಂಧನ ದರ ರಾಜ್ಯದಲ್ಲಿಬಹಳ ದುಬಾರಿಯಾಗಲಿದೆ.

ಬೆಂಗಳೂರು ಜೂನ್ ೧೫ರಿಂದಲೇ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಚಿಲ್ಲರೆ ಮಾರಾಟ ತೆರಿಗೆ ದರವನ್ನು ಹೆಚ್ಚಳ ಮಾಡುವ ನಿರ್ಧಾರವನ್ನು ಕರ್ನಾಟಕ ಸರ್ಕಾರ ಶನಿವಾರ ಪ್ರಕಟಿಸಿದೆ. ತೆರಿಗೆ ದರ ಹೆಚ್ಚಳದ ಕಾರಣ ರಾಜ್ಯದಲ್ಲಿ ಪೆಟ್ರೋಲ್ ಬೆಲೆ ೩ ರೂ. ಹಾಗೂ ಡಿಸೇಲ್ ಬೆಲೆ ೩.೫೦ ರೂಪಾಯಿ ಹೆಚ್ಚಳವಾಗುವ ಸಾಧ್ಯತೆ ಇದೆ. ಇದರೊಂದಿಗೆ, ಸುದೀರ್ಘ ಸಮಯದ ನಂತರ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದುಬಾರಿಯಾಗುತ್ತಿದೆ.
ಮೊದಲು ಪೆಟ್ರೋಲ್ ಮೇಲಿನ ಚಿಲ್ಲರೆ ಮಾರಾಟ ತೆರಿಗೆ ಶೇ ೨೫.೯೨ ರಷ್ಟಿತ್ತು. ಈಗ ಶೇ ೩.೯ರಷ್ಟು ಹೆಚ್ಚಳ ಮಾಡಲಾಗಿದೆ, ಶೇ ೨೯.೮೪ ಕ್ಕೆ ಏರಿಕೆಯಾಗಿದೆ. ಡಿಸೇಲ್ ಮೇಲಿನ ಚಿಲ್ಲರೆ ಮಾರಾಟ ತೆರಿಗೆ ಈ ಹಿಂದೆ ಶೇ ೧೪.೩೪ ರಷ್ಟಿತ್ತು. ಈಗ ಶೇ ೪.೧ ರಷ್ಟು ಹೆಚ್ಚಳ ಮಾಡಲಾಗಿದೆ, ಶೇ ೧೮.೪೪ ಕ್ಕೆ ಏರಿಕೆಯಾಗಿದೆ. ಪರಿಣಾಮವಾಗಿ ರಾಜ್ಯದಲ್ಲಿ ಪೆಟ್ರೋಲ್ ದರ ೩ ರೂಪಾಯಿ ಹಾಗೂ ಡಿಸೇಲ್ ದರ ೩.೫೦ ರೂಪಾಯಿ ಹೆಚ್ಚವಾಗುವ ಸಾಧ್ಯತೆ ಇದೆ.