ಯುವಕರಲ್ಲಿ ಹೆಚ್ಚುತ್ತಿರುವ ಹಾರ್ಟ್ ಅಟ್ಯಾಕ್, ಅಧಿವೇಶನದಲ್ಲಿ ಕಳವಳ ವ್ಯಕ್ತಪಡಿಸಿದ ಡಾ.ಸಿ.ಎನ್.ಮಂಜುನಾಥ್
ಇತ್ತೀಚೆಗಿನ ದಿನಗಳಲ್ಲಿ ಹೃದಯಾಘಾತಕ್ಕೆ ಬಲಿಯಾಗುತ್ತಿರುವ ಯುವಕರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹೃದಯಾಘಾತಕ್ಕೆ ಒಳಗಾದವರಿಗೆ ಚಿಕಿತ್ಸೆ ನೀಡಲು ನೂರಕ್ಕೂ ಅಧಿಕ ಕಿ.ಮೀ ಸಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕಾದ ಪರಿಸ್ಥಿತಿಯೂ ಇದೆ. ಹೀಗಾಗಿ ಹೃದಯಾಘಾತಕ್ಕೆ ಒಳಗಾದವರಿಗೆ ತಾಲ್ಲೂಕು ಆಸ್ಪತ್ರೆಗಳಲ್ಲೇ ಚಿಕಿತ್ಸೆ ನೀಡುವ ಕರ್ನಾಟಕ ರಾಜ್ಯದ ಮಾದರಿಯನ್ನೇ ದೇಶದಾದ್ಯಂತ ಅಳವಡಿಸಿಕೊಳ್ಳಬೇಕು ಎಂದು ಸಂಸತ್‌ನ ಮೂರನೇ ಮೋದಿ ಸರ್ಕಾರದ ಮೊದಲ ಬಜೆಟ್ ಅಧಿವೇಶನದಲ್ಲಿ ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್.ಮಂಜುನಾಥ್ ಸಲಹೆ ನೀಡಿದ್ದಾರೆ.
‘ಹೃದಯಾಘಾತಕ್ಕೆ ಒಳಗಾದ ರೋಗಿಗಳಿಗೆ ರಾಜ್ಯದ 45 ತಾಲ್ಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಇದೀಗ ಇದರ ಸಂಖ್ಯೆಯನ್ನು 90 ಆಸ್ಪತ್ರೆಗಳಿಗೆ ವಿಸ್ತರಿಸಲಾಗುತ್ತಿದೆ. ತಾಲ್ಲೂಕು ಆಸ್ಪತ್ರೆಗಳಲ್ಲಿ ಒಂದು ಇಂಜೆಕ್ಷನ್ ನೀಡಿ, ಹೆಚ್ಚುವರಿ ಚಿಕಿತ್ಸೆ ನೀಡಲು 3ರಿಂದ 6 ಗಂಟೆ ಸಮಯವಕಾಶ ದೊರೆಯುತ್ತದೆ. ಆ ಸಮಯದಲ್ಲಿ ದೊಡ್ಡ ಆಸ್ಪತ್ರೆಗಳಿಗೆ ಕರೆದುಕೊಂಡು ಸ್ಟೆಂಟ್ ಅಳವಡಿಸಬಹುದಾಗಿದೆ ಎಂದು ಲೋಕಸಭೆಯಲ್ಲಿ ಆರೋಗ್ಯ ಸಚಿವಾಲಯದ ಅನುದಾನ ಬೇಡಿಕೆ ಕುರಿತ ಚರ್ಚೆಯ ವೇಳೆ ಈ ಬಗ್ಗೆ ತಿಳಿಸಿದ್ದಾರೆ.
ಈ ಹಿಂದೆ ಹೃದಯಾಘಾತಕ್ಕೆ ಒಳಗಾದ ಪೋಷಕರನ್ನು ಮಕ್ಕಳು ಆಸ್ಪತ್ರೆಗೆ ಕರೆದುಕೊಂಡು ಚಿಕಿತ್ಸೆ ನೀಡುತ್ತಿದ್ದ ಕಾಲವಿತ್ತು. ಆದರೆ ಇದೀಗ 25-40 ವರ್ಷದ ಮಕ್ಕಳನ್ನು ಪೋಷಕರೇ ಆಸ್ಪತ್ರೆಗೆ ಕರೆದುಕೊಂಡು ಬರುವಂತಹ ಸ್ಥಿತಿಯೂ ನಿರ್ಮಾಣವಾಗಿದೆ. ಸಣ್ಣ ವಯಸ್ಸಿನವರಲ್ಲಿ ಹೃದಯಾಘಾತವಾಗುವುದು ಗಣನೀಯವಾಗಿ ಏರಿಕೆಯಾಗಿದೆ. ಹಾರ್ಟ್ ಅಟ್ಯಾಕ್ ಶ್ರೀಮಂತರ ಕಾಯಿಲೆಯಾಗಿರದೇ ಬಡವರು, ಕೂಲಿ ಕಾರ್ಮಿಕರು ಹಾಗೂ ಗ್ರಾಮೀಣ ಪ್ರದೇಶದ ಜನರಲ್ಲಿ ಕಾಣಿಸಿಕೊಳ್ಳುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.