ಬಿ.ಸಿ.ರೋಡು: ಖೋಟಾನೋಟು ಚಲಾವಣೆ ಜಾಲ ಬಯಲಿಗೆ, ಇಬ್ಬರ ಬಂಧನ, ಒರ್ವ ಪರಾರಿ
ಬಂಟ್ವಾಳ: ಖೋಟನೋಟು ಚಲಾಯಿಸಲು ಯತ್ನಿಸುತ್ತಿದ್ದ ಜಾಲವೊಂದನ್ನು ಬೇಧಿಸಿದ ಬಂಟ್ವಾಳ ನಗರ ಪೊಲೀಸರ ತಂಡ ಕಾಸರಗೋಡು ಮೂಲದ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.
ಸಾರ್ವಜನಿಕರು ನೀಡಿದ ಮಾಹಿತಿಯನ್ನಾಧರಿಸಿ ಕಾರ್ಯಚರಣೆ ನಡೆಸಿದ ಬಂಟ್ವಾಳ ನಗರ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ಆನಂತಪದ್ಮನಾಭ ನೇತೃತ್ವದ ಪೋಲೀಸರ ತಂಡ ಬಿ.ಸಿ.ರೋಡಿನಲ್ಲಿ ಕಾಸರಗೋಡು ಮೂಲದ ಇಬ್ಬರನ್ನು ಬಂಧಿಸಿದ್ದು, ಈ ಸಂದರ್ಭ ಇನ್ನೋರ್ವ ಆರೋಪಿ ತಲೆ ಮರೆಸಿದ್ದಾನೆ.
ಕಾಸರಗೋಡು ತಾಲೂಕಿನ ಕೂಡ್ಲು ಗ್ರಾಮ ಜುಮ್ಮಾ ಮಸೀದಿ ಬಳಿ, ಚೂರಿ, ವಿಶಾಲ್ ಮಂಜಿಲ್ ನಿವಾಸಿ ಮೊಹಮ್ಮದ್ (61) ಹಾಗೂ ಕಾಸರಗೋಡು ತಾ.ನ ಕೂಡ್ಲು ಗ್ರಾಮದ ಚೂರಿ ಕಮರುನ್ನೀಶಾ (41) ಬಂಧಿತ ಆರೋಪಿಗಳಾಗಿದ್ದು, ಕಮರುನ್ನೀಶಾಳ ಪತಿ ಶರೀಫ್ ಸದ್ಯ ತಲೆಮರೆಸಿರುವ ಆರೋಪಿಯಾಗಿದ್ದಾನೆ.
ಬಂಧಿತ ಆರೋಪಿಗಳಿಂದ 500 ರೂ. ಮುಖಬೆಲೆಯ 46 ಖೋಟಾ ನೋಟುಗಳು, 5300 ರೂ.ನಗದು, ಕೃತ್ಯಕ್ಕೆ ಬಳಸಿದ ಕಾರು ಹಾಗೂ 3 ಮೊಬೈಲನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ಆರೋಪಿಗಳು ಕಾರಿನಲ್ಲಿ ದ.ಕ. ಜಿಲ್ಲೆಗಾಗಮಿಸಿ ಗೂಡಂಗಡಿಗಳಲ್ಲಿ ವ್ಯವಹಾರ ನಡೆಸಿ ತಮ್ಮಲಿದ್ದ ಖೋಟಾನೋಟನ್ನು ಚಲಾಯಿಸಿದ್ದಾರೆ. ಶುಕ್ರವಾರ ಮಧ್ಯಾಹ್ನ ಬಂಟ್ವಾಳ, ತುಂಬೆಗೆ ಬಂದು ಇಲ್ಲಿನ ಸಣ್ಣಪುಟ್ಟ ಅಂಗಡಿಯಲ್ಲಿ ವ್ಯವಹಾರ ನಡೆಸಿ ರಾತ್ರಿ ಸುಮಾರು 10 ಅಂದಾಜಿಗೆ ಬಿ.ಸಿ.ರೋಡಿಗೆ ಬಂದಿದ್ದಾರೆ ಇಲ್ಲಿನ ಕೆಲ ಅಂಗಡಿಗಳಲ್ಲಿ ಸಾಮಾಗ್ರಿಗಳನ್ನು ಖರೀದಿಸಿ ಖೋಟನೋಟನ್ನು ಚಲಾಯಿಸಿದ್ದು, ಈ ಸಂದರ್ಭ ಸಂಶಯಗೊಂಡ ಅಂಗಡಿ ಮಾಲಕರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.
ಪೊಲೀಸರ ತಂಡ ಅನುಮಾನಾಸ್ಪದ ಕೇರಳ ರಾಜ್ಯ ನೋಂದಣಿಕಾರನ್ನು ಪರಿಶೀಲಿಸಿದಾಗ ಮೂವರ ಪೈಕಿ ಒರ್ವಾತ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಇನ್ನಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಖೋಟನೋಟು ಚಲಾವಣೆಯ ದಂಧೆ ಬಯಲಿಗೆ ಬಂದಿದೆ.
ಪತಿ, ಪತ್ನಿ ಹಾಗೂ ಸಂಬಂಧಿಕ ಸೇರಿ ಮೂವರು ಖೋಟಾ ನೋಟು ಚಲಾವಣೆಯ ದಂಧೆಯಲ್ಲಿ ತೊಡಗಿಸಿಕೊಂಡಿದ್ದು, ಆರೋಪಿಗಳು ಪೇಟೆಯಲ್ಲಿರುವ ವಿವಿಧ ಅಂಗಡಿಗಳಿಗೆ ತೆರಳಿ 100 ರೂ. ಒಳಗಿನ ಪ್ಯಾನ್ಸಿ ಐಟಂಗಳನ್ನು ಖರೀದಿಸಿ 500 ರೂ. ನೋಟನ್ನು ನೀಡಿ ಚಿಲ್ಲರೆ ವಾಪಾಸು ಪಡೆಯುತ್ತಾರೆ. ಖರೀದಿಸಿದ ವಸ್ತುಗಳನ್ನು ಕಾಸರಗೋಡುವಿನಲ್ಲಿರುವ ತಮ್ಮ ಅಂಗಡಿಯಲ್ಲಿ ಮಾರಾಟಕ್ಕೆ ಉಪಯೋಗಿಸುತ್ತಾರೆಂಬ ವಿಚಾರ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪ್ರಕರಣ ದಾಖಲಿಸಿ ಮುಂದಿನ ತನಿಖೆ ನಡೆಸುತ್ತಿರುವ ಬಂಟ್ವಾಳ ನಗರ ಪೊಲೀಸರು ತಲೆಮರೆಸಿರುವ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿದಿದೆ.