ಇರ್ವತ್ತೂರುಪದವು ಶ್ರೀ ಶಾರದಾ ಸೇವಾ ಟ್ರಸ್ಟ್ ನಿಂದ ಆಂಬ್ಯುಲೆನ್ಸ್ ಲೋಕಾರ್ಪಣ, ವಿವಿಧ ಶಿಬಿರ
ಬಂಟ್ವಾಳ: ಇರ್ವತ್ತೂರುಪದವು ಶ್ರೀ ಶಾರದಾ ಸೇವಾ ಟ್ರಸ್ಟ್ ವತಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಆರಂಭಿಸಲಾದ ಆಂಬ್ಯುಲೆನ್ಸ್‌ನ ಲೋಕಾರ್ಪಣೆ ಕಾರ್ಯಕ್ರಮ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆ ಮತ್ತು ಮಂಗಳೂರು ಎ.ಬಿ.ಶೆಟ್ಟಿ ಸ್ಮಾರಕ ದಂತ ವಿಜ್ಞಾನ ಸಂಸ್ಥೆ ಇವರಿಂದ ರಕ್ತದಾನ, ನೇತ್ರ ಮತ್ತು ದಂತ ಚಿಕಿತ್ಸಾ ಶಿಬಿರ ಮೂಡುಪಡುಕೋಡಿ ಸ.ಹಿ.ಪ್ರಾ. ಶಾಲಾ ವಠಾರದಲ್ಲಿ ಭಾನುವಾರ ನಡೆಯಿತು.

ರಕ್ತದಾನ, ಆರೋಗ್ಯ ಶಿಬಿರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಅವರು ಉದ್ಘಾಟಿಸಿ ಮಾತನಾಡಿ, ರಕ್ತದಾನದಿಂದ ಮತ್ತೊಂದು ಜೀವ ಉಳಿಸಬಹುದು. ರಕ್ತದಾನದಿಂದ ಆರೋಗ್ಯವೂ ವೃದ್ಧಿಯಾಗುತ್ತದೆ.
ಆರೋಗ್ಯ ಕಾಳಜಿಗಾಗಿ ಇಂತಹ ಶಿಬಿರಗಳು ಸಹಕಾರಿಯಾಗಿದೆ. ಧಾರ್ಮಿಕ ಕಾರ್ಯಗಳೊಂದಿಗೆ ಸಾಮಾಜಿಕ ಕಳಕಳಿ ಹೊಂದಿದ ಶಾರದಾ ಸೇವಾ ಟ್ರಸ್ಟ್‌ನ ಕಾರ್ಯ ಪ್ರಶಂಸನೀಯ ಎಂದರು.

ಆಂಬ್ಯುಲೆನ್ಸ್ ಲೋಕಾರ್ಪಣೆ:
ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೆ.ಕೃಷ್ಣ ಕುಮಾರ್ ಪೂಂಜ ಅವರು ಆಂಬ್ಯುಲೆನ್ಸ್ ಲೋಕಾರ್ಪಣೆ ಗೊಳಿಸಿ ಮಾತನಾಡಿ, ಅರ್ಹರಿಗೆ ಸಹಾಯವಾಗುವ ಮೂಲಕ ಸಮಾಜಸೇವೆ ನಡೆಸುವುದು ಉತ್ತಮ ಕಾರ್ಯ. ಯಾವ ರೀತಿಯಲ್ಲೂ ಕೂಡ ಸಮಾಜ ಸೇವೆ ಮಾಡಬಹುದಾಗಿದೆ ಎಂದರು.
ನೈನಾಡು ಸಂತ ಫ್ರಾನ್ಸಿಸ್ ಆಸ್ಸಿಸ್ಸಿ ಚರ್ಚ್ ಧರ್ಮಗುರು ವಂ.ಫಾ.ಅನಿಲ್ ಅವಿಲ್ ಲೋಬೋ ಅವರು ಆಶೀರ್ವಚನ ನೀಡಿ, ಬಡವರಿಗೆ ನೀಡುವ ಸೇವೆ ದೇವರಿಗೆ ಪ್ರಿಯವಾಗುತ್ತದೆ.
ಸಹೋದರತೆ, ಮಾನವೀಯತೆಯಿಂದ ಎಲ್ಲರೂ ಒಂದಾದಾಗ ಊರು ಅಭಿವೃದ್ಧಿಯಾಗುತ್ತದೆ ಎಂದರು. ಇರ್ವತ್ತೂರು ಗ್ರಾ.ಪಂ.ಅಧ್ಯಕ್ಷೆ ಮಾಲತಿ ಅಧ್ಯಕ್ಷತೆ ವಹಿಸಿದ್ದರು. ಜ್ಯೋತಿಷ್ಯ ವಿದ್ವಾನ್ ವೆಂಕಟರಮಣ ಮುಚ್ಚಿನ್ನಾಯ, ಟ್ರಸ್ಟ್ ಗೌರವಾಧ್ಯಕ್ಷ ಹರೀಂದ್ರ ಪೈ, ಮಂಗಳೂರು ಎ.ಬಿ.ಶೆಟ್ಟಿ ಸ್ಮಾರಕ ದಂತ ವಿಜ್ಞಾನ ಸಂಸ್ಥೆ ಯ ವೈದ್ಯರಾದ ಡಾ.ದಿಶಾ, ಡಾ.ವೈಶಾಖ್, ಕಾವಳಕಟ್ಟೆ ಅಲ್ ಖಾದೀಸ್ ಶಾಲಾ ಆಡಳಿತಾಧಿಕಾರಿ ರಝಾಕ್ ಸಕಾಫಿ, ಚೆನ್ನೈತ್ತೋಡಿ ಗ್ರಾ.ಪಂ.ಅಧ್ಯಕ್ಷೆ ವನಿತಾ, ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಶಾರದಾ, ಪ್ರಗತಿಪರ ಕೃಷಿಕ ಡೆನಿಸ್ ಫೆರ್ನಾಂಡಿಸ್ ದೇರೊಟ್ಟು, ಉದ್ಯಮಿ ಮಹಮ್ಮದ್ ಷರೀಫ್, ಪಿಲಾತಬೆಟ್ಟು ಪ್ರಾ.ಕೃ.ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಂ.ತುಂಗಪ್ಪ ಬಂಗೇರ, ಧ.ಗ್ರಾ.ಯೋಜನೆ ಬಂಟ್ವಾಳ ಯೋಜನಾಧಿಕಾರಿ ಬಾಲಕೃಷ್ಣ, ಇರ್ವತ್ತೂರು ಬದ್ರಿಯಾ ಯಂಗ್‌ಮನ್ಸ್ ಅಸೋಸಿಯೇಶನ್ ಅಧ್ಯಕ್ಷ ಆಫಿಲ್, ನೈನಾಡು ಸಂತ ಫ್ರಾನ್ಸಿಸ್ ಆಸ್ಸಿಸ್ಸಿ ಚರ್ಚ್‌ಕೆಥೋಲಿಕ್ ಸಭಾ ಅಧ್ಯಕ್ಷ ನೋಯಲ್ ಡಿಸೋಜ, ಟ್ರಸ್ಟ್ ಪದಾಧಿಕಾರಿ ಶೇಖರ ಪೂಜಾರಿ, ನೈನಾಡು ಶ್ರೀ ರಾಮ ಯುವಕ ಸಂಘ ಅಧ್ಯಕ್ಷ ವಸಂತ ಪೂಜಾರಿ ಕೊಳಂಬೆಗರಿ, ಕಲ್ಲಡ್ಕ ಶ್ರೀ ದುರ್ಗಾ ಫ್ರೆಂಡ್ಸ್‌ಯುವಕರ ಟ್ರಸ್ಟ್ ಅಧ್ಯಕ್ಷ ರಮೇಶ್ ನಾಯ್ಕ ಪದವು ಶ್ರೀ ದುರ್ಗಾಪರಮೇಶ್ವರಿ ಯಕ್ಷ ಮಿತ್ರ ಬಳಗ ಸಂಘಟಕ ನಾರಾಯಣ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಕೆ.ಎಂ.ಸಿ. ಮಂಗಳೂರು ಬ್ಲಡ್ ಬ್ಯಾಂಕ್‌ನ ವೈದ್ಯೆ ಡಾ.ಅನುಷಿಕಾ ಅಗರ್‌ವಾಲ್ ಅವರು ರಕ್ತದಾನದ ಪ್ರಮಾಣ ಪತ್ರ ವಿತರಿಸಿದರು.
ಜೆಸಿಐ ಬಂಟ್ವಾಳ ಅಧ್ಯಕ್ಷೆ ರಶ್ಮಿ ಶೆಟ್ಟಿ ಸ್ವಾಗತಿಸಿದರು. ಟ್ರಸ್ಟ್ ಅಧ್ಯಕ್ಷ ಡಾ| ರಾಮಕೃಷ್ಣ ಎಸ್.ಪ್ರಸ್ತಾವಿಸಿ, ಪರಿಸರದಲ್ಲಿ ಆಂಬ್ಯುಲೆನ್ಸ್‌ನ ಆವಶ್ಯಕತೆ ಮನಗಂಡು ದಾನಿಗಳ ಸಹಕಾರದಿಂದ ಆರಂಭಿಸಲಾಗಿದೆ. ಕೇವಲ ಅಲ್ಪವೆಚ್ಚದಲ್ಲಿ ರೋಗಿಗಳಿಗೆ ಇದರ ಸೇವೆ ಒದಗಿಸಲಾಗುವುದು ಎಂದರು. ಗ್ರಾ.ಪಂ.ಸದಸ್ಯ ದಯಾನಂದ ನಾಯ್ಕ ಎರ್ಮೆನಾಡು ವಂದಿಸಿದರು. ಪತ್ರಕರ್ತ ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿದರು.