ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪವಿತ್ರ ಮತ್ತು ಸೌರ್ಹಾತೆಯ ಕೇಂದ್ರ: ಯು.ಟಿ.ಖಾದರ್
ಬಂಟ್ವಾಳ: ಮಂಗಳೂರು- ಬೆಂಗಳೂರು ರಾ.ಹೆ.ಯ ತುಂಬೆಯಲ್ಲಿ ಜನತೆಯ ಪರಿಶ್ರಮ, ತ್ಯಾಗದ ಫಲವಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪವಿತ್ರ ಮತ್ತು ಸೌರ್ಹಾತೆಯ ಕೇಂದ್ರವಾಗಿ ಎದ್ದು ನಿಂತಿದೆ, ಇಲ್ಲಿನ ಜನರ ಬಹುಕಾಲದ ಕನಸು ಈಡೇರಿದೆ ಎಂದು ಕರ್ನಾಟಕ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಸಂತಸ ವ್ಯಕ್ತಪಡಿಸಿದರು.

ಫೆ.13 ರಿಂದ 23 ರವರೆಗೆ ದೇವಳದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಹಿನ್ನಲೆಯಲ್ಲಿ ಗುರುವಾರ ಸಂಜೆ ದೇವಳದ ವಠಾರದಲ್ಲಿ ಬಂಟ್ವಾಳ ತಾಲೂಕು ಮಟ್ಟದ ವಿವಿಧ ಇಲಾಖಾಧಿಕಾರಿ ಪೂರ್ವಭಾವಿ ಸಭೆ ನಡೆಸಿದ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ಇಲಾಖಾಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಬ್ರಹ್ಮಕಲಶದ ಯಶಸ್ವಿಗೆ ಸಹಕಾರ ನೀಡುವಂತೆ ಸೂಚಿಸಿದರು.
ಹೆದ್ದಾರಿಯ ಹೊಂಡ ಮುಚ್ಚಿ:
ರಾ.ಹೆ.ಇಲಾಖೆ ಗಿಡ ನೆಡಲೆಂದು ಹೊಂಡ ತೆಗೆದು ಹಲವು ಸಮಯವಾದರೂ ಗಿಡವನ್ನು ನೆಟ್ಟಿಲ್ಲ, ಹೊಂಡವನ್ನು ಮುಚ್ಚದೆ ಹಾಗೇ ಬಿಟ್ಟ ಪರಿಣಾಮ ಈಗಾಗಲೇ ಅಪಘಾತಗಳು ಸಂಭವಿಸಿ ಕೈ, ಕಾಲುಗಳನ್ನು ಕಳೆದುಕೊಳ್ಳುವಂತಾಗಿದೆ ಈ ಬಗ್ಗೆ ಮಾಧ್ಯಮಗಳು ಕೂಡ ಸಚಿತ್ರ ವರದಿ ಪ್ರಕಟಿಸಿದರೂ ಇಲಾಖೆ ಕ್ರಮ ಕೈಗೊಂಡಿಲ್ಲ ಎಂದು ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ಮತ್ತಿತರರು ವಿಧಾನ ಸಭಾಧ್ಯಕ್ಷರ ಗಮನಕ್ಕೆ ತಂದರು.
ತಕ್ಷಣ ಪ್ರತಿಕ್ರಿಯಿಸಿದ ಖಾದರ್ ಈಗ ತಾತ್ಕಲಿಕವಾಗಿ ಹೊಂಡ ಮುಚ್ಚಿ ಆನಂತರ ಗಿಡ ನಾಟಿ ಮಾಡುವಂತೆ ರಾ.ಹೆ. ಇಲಾಖೆಯ ಅಧಿಕಾರಿಗೆ ತಾಕೀತು ಮಾಡಿದರಲ್ಲದೆ ದೇವಸ್ಥಾನಕ್ಕೆ ಬರುವ ವಾಹನಗಳ ಅನುಕೂಲಕ್ಕಾಗಿ ತಾತ್ಕಲಿಕ ನೆಲೆಯಲ್ಲಿ ದೇವಳದ ಮುಂಭಾಗದಲ್ಲಿ ಡಿವೈಡರನ್ನು ಕಟ್ಟಿಂಗ್ ಮಾಡುವ ದೆಸೆಯಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವಂತೆಯು ಸೂಚಿಸಿದರು.
ದೇವಸ್ಥಾನದ ಪರಿಸರದಲ್ಲಿ ಸ್ವಚ್ಚತೆಗೆ ಹೆಚ್ಚಿನ ಅದ್ಯತೆ ನೀಡಬೇಕು, 10 ದಿನಗಳ ಮಟ್ಟಿಗೆ ವ್ಯವಸ್ಥೆಗಾಗಿ ನೋಡಲ್ ಅಧಿಕಾರಿಯನ್ನು ನೇಮಿಸಬೇಕು, ಯಾವುದೇ ಕಾರಣಕ್ಕೆ ಈ ಸಂದರ್ಭಗಳಲ್ಲಿ ಪವರ್ ಕಟ್ ಮಾಡಬಾರದು, ಭದ್ರತಾ ವ್ಯವಸ್ಥೆಗಾಗಿ ದೇವಳದ ಹೊರಭಾಗದಲ್ಲಿ ಸಿಸಿ ಕ್ಯಾಮರ ಅಳವಡಿಸಬೇಕು ಹಾಗೂ ಬ್ರಹ್ಮಕಲಶದ 10 ದಿನಗಳ ಕಾಲ ಗ್ರಾಮಾಂತರ ಬಸ್ ಗಳನ್ನು ದೇವಸ್ಥಾನದ ಮುಂಭಾಗದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕು ತಹಶೀಲ್ದಾರ್ ಅರ್ಚನಾ ಭಟ್, ಬಂಟ್ವಾಳ ಗ್ರಾಮಾಂತರ ಠಾಣೆಯ ಇನ್ಸ್ ಪೆಕ್ಟರ್ ಶಿವಪ್ರಸಾದ್, ತಾಲೂಕಿನ ವಿವಿಧ ಇಲಾಖಾಧಿಕಾರಿಗಳು ಹಾಗೂ ಸಮಿತಿ ಪದಾಧಿಕಾರಿಗಳಾದ ಜೀವನ್ ಆಳ್ವ, ಅರುಣ್ ಆಳ್ವ, ಉಮೇಶ್ ಸುವರ್ಣ, ಗಣೇಶ್ ಸಾಲಿಯಾನ್, ರಾಮಚಂದ್ರ ಸುವರ್ಣ, ಗೋಪಾಲಕೃಷ್ಣ ಸುವರ್ಣ ತುಂಬೆ, ಪ್ರಕಾಶ್ ಶೆಟ್ಟಿ ಶ್ರೀ ಶೈಲ ತುಂಬೆ, ಲೋಲಾಕ್ಷ ಶೆಟ್ಟಿ ಮೊದಲಾದವರಿದ್ದರು.
ಜೀರ್ಣೋದ್ದಾರ, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ಪ್ರಸ್ತಾವಿಸಿ, ಸ್ವಾಗತಿಸಿದರು. ಉಮೇಶ್ ರೆಂಜೋಡಿ ವಂದಿಸಿದರು.