ಕೋಳಿ ಅಂಕಕ್ಕಾಗಿ ಅನುಮತಿಗೆ ಪೋಲಿಸ್ ಠಾಣೆಗೆ ಬರಬೇಡಿ ಎಸ್. ಪಿ. ಹೇಳಿಕೆಗೆ ದ.ಕ.ಜಿಲ್ಲಾ ಜನಜಾಗೃತಿ ವೇದಿಕೆಯಿಂದ ಮೆಚ್ಚುಗೆ
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳ ಸಭೆಯು ವೇದಿಕೆಯ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಬಂಟ್ವಾಳದಲ್ಲಿರುವ ಉನ್ನತಿ ಸೌಧ ಸಭಾಂಗಣದಲ್ಲಿ ನಡೆಯಿತು.
ಕೋಳಿ ಅಂಕ ನಡೆಸಲು ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲ ಅನುಮತಿಗಾಗಿ ಪೋಲಿಸ್ ಠಾಣೆಗೆ ಬರಬೇಡಿ ಎಂದು ದ. ಕ. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಿಷ್ಯಂತ್ ರವರ ಹೇಳಿಕೆಗೆ ಸಭೆಯಲ್ಲಿ ಮೆಚ್ಚುಗೆ ಹಾಗೂ ಅಭಿನಂದನೆಯನ್ನು ವ್ಯಕ್ತ ಪಡಿಸಲಾಯಿತು.
ಜಿಲ್ಲೆಯ ಹಲವು ಕಡೆಯಲ್ಲಿ ಅನಧಿಕೃತವಾಗಿ ಕೋಳಿ ಅಂಕ, ಜೂಜಾಟಗಳು ಹಾಗೂ ಅಕ್ರಮ ಮದ್ಯ ಮಾರಾಟಗಳು ನಡೆಯುತ್ತಿದ್ದು, ಯಾವುದೇ ನಂಬಿಕೆಯ ನೆಪವೊಡ್ಡಿ ಸಮಾಜಕ್ಕೆ ಮಾರಕವಾದ ವಿಚಾರಗಳು ನಮಾಜದ ಸ್ವಾಸ್ಥ್ಯ ಹದಗೆಡಲು ಕಾರಣವಾಗುತ್ತಿದೆ. ಈ ನಿಟ್ಟಿನಲ್ಲಿ ಇಂತಹ ಸಮಾಜ ಬಾಹಿರ ವಿಚಾರವನ್ನು ಜಿಲ್ಲಾ ಜನಜಾಗೃತಿ ವೇದಿಕೆ ತೀವ್ರವಾಗಿ ಖಂಡಿಸುತ್ತಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಯಿತು.
ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯರ್ ಮಾತನಾಡಿ ಜಿಲ್ಲೆಯಲ್ಲಿ ಜನಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಸುಳ್ಯದಲ್ಲಿ ನಡೆದ ಶಿಬಿರದಲ್ಲಿ 131 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದು, ಧರ್ಮಾಧಿಕಾರಿ ಡಾ.ಹೆಗ್ಗಡೆಯವರು ಕೂಡ ಈ ಶಿಬಿರಕ್ಕಾಗಮಿಸಿ ಶಿಬಿರಾರ್ಥಿಗಳನ್ನು ಆಶೀರ್ವದಿಸಿದ್ದಾರೆ. ಶಿಬಿರಕ್ಕೆ ಯೋಜನೆಯಿಂದ 25 ಸಾ.ರೂ.ಅನುದಾನ ನೀಡಲಾತಿದ್ದು, ಮುಂದಿನ ವರ್ಷದಿಂದ ಬಜೆಟ್ ನಲ್ಲಿ ಅನುದಾನವನ್ನು ಹೆಚ್ಚಿಸುವ ಬಗ್ಗೆಯು ಅವರು ಸೂಚನೆ ನೀಡಿದರು.
ಅದೇ ರೀತಿ ಜಿಲ್ಲಾ ವೇದಿಕೆಗೆ ಪ್ರತೀ ತಾಲೂಕಿನಿಂದ 6 ಮಂದಿ ಕೋ ಆಫ್ಟ್ ಸದಸ್ಯರಿರಬೇಕು. ತಾಲೂಕು ಸಮಿತಿ ಇಲ್ಲದಿರುವ ತಾಲೂಕಿನಲ್ಲಿ ಹೊಸ ಸಮಿತಿ ರಚಿಸಲು ನಿರ್ದೇಶನ ನೀಡಿದ ಅವರು ತಾಲೂಕು ಸಮಿತಿಯ ಖಾತೆಯನ್ನು ಬದಲಾವಣೆ ಮಾಡುವ ಬಗ್ಗೆ ಸೂಚನೆ ನೀಡಿದರು.
ವೇದಿಕೆಯ ಸ್ಥಾಪಕಾಧ್ಯಕ್ಷ ವಸಂತ ಸಾಲ್ಯಾನ್ ಕಾಪಿನಡ್ಕ, ನಿಕಟಪೂರ್ವ ಜಿಲ್ಲಾಧ್ಯಕ್ಷ ಎನ್. ಎ ರಾಮಚಂದ್ರ ಉಪಸ್ಥಿತರಿದ್ದರು.
ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಸ್ವಾಗತಿಸಿದರು. ನಿರ್ದೇಶಕ ಪ್ರವೀಣ್ ಕುಮಾರ್ ವಂದಿಸಿದರು.