ಮುಸುಕುಧಾರಿಗಳು ಮನೆಗೆ ನುಗ್ಗಿ ತಾಯಿ- ಮಗಳಿಗೆ ಚಾಕು ತೋರಿಸಿ ಲಕ್ಷಾಂತರ ರೂ. ಮೌಲ್ಯದ ನಗ-ನಗದು ಸುಲಿಗೆ
ಬಂಟ್ವಾಳ: ಬಿ.ಸಿ.ರೋಡು-ಬೆಳ್ತಂಗಡಿ ರಾ.ಹೆ.ಯ ಕಾವಳಪಡೂರು ಗ್ರಾಮದ ಮೇನಾಡು ಎಂಬಲ್ಲಿರುವ ಸಾಲುಮರದ ತಿಮ್ಮಕ್ಕನ ಟ್ರೀ ಪಾರ್ಕ್ ಮುಂಭಾಗದಲ್ಲಿರುವ ಮನೆಯೊಂದಕ್ಕೆ ನಾಲ್ವರು ಮುಸುಕುಧಾರಿಗಳು ನುಗ್ಗಿ ಮನೆಯಲ್ಲಿದ್ದ ತಾಯಿ-ಮಗಳಿಗೆ ಚಾಕು ತೋರಿಸಿ ಲಕ್ಷಾಂತರ ರೂ. ಮೌಲ್ಯದ ನಗ-ನಗದು ಸುಲಿಗೆ ಮಾಡಿರುವ ಘಟನೆ ಗುರುವಾರ ಬೆಳಗ್ಗಿನ ಜಾವ ನಡೆದಿದೆ.

ಮನೆಯಲ್ಲಿ ಪ್ಲೋರಿನಾ ಪಿಂಟೊ ಹಾಗೂ ಮಗಳು ಮರಿನಾ ಪಿಂಟೋ ಇಬ್ಬರು ಮಾತ್ರ ಇದ್ದು, ಈ ಸಂದರ್ಭ ಗಂಡಸರು ಯಾರು ಮನೆಯಲ್ಲಿಲ್ಲದಿದ್ದು, ಇದನ್ನೇ ಸದುಪಯೋಗ ಪಡೆದುಕೊಂಡ ದರೋಡೆಕೋರರು ಈ ಕೃತ್ಯ ನಡೆಸಿದ್ದಾರೆ.

ಮನೆಯಲ್ಲಿ ಗಂಡಸರಿಲ್ಲದ ವಿಚಾರ ಸ್ಥಳೀಯವಾಗಿ ತಿಳಿದವರು ಈ ಕೃತ್ಯದಲ್ಲಿ ಶಾಮೀಲಾಗಿರುವ ಬಗ್ಗೆ ಶಂಕಿಸಲಾಗಿದೆ.
ಬೆಳಿಗ್ಗಿನ ಜಾವ ಸುಮಾರು 6 ರಿಂದ 6-15 ರ ಹೊತ್ತಿಗೆ ಮನೆಯ ಬೆಲ್ ಸದ್ದು ಕೇಳಿ ಪ್ಲೋರಿನಾ ಪಿಂಟೊ ಅವರು ಮನೆಯ ಎದುರಿನ ಬಾಗಿಲು ತೆರೆದಾಗ ನಾಲ್ವರು ಮುಸುಕುದಾರಿಗಳು ಮನೆಯೊಳಗೆ ನುಗ್ಗಿ ಮನೆಯಲ್ಲಿದ್ದ ತಾಯಿ- ಮಗಳಿಗೆ ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ.
ಇದಕ್ಕೆ ಬಗ್ಗದಿದ್ದಾಗ ನಾಲ್ವರು ಆರೋಪಿಗಳು ಕೈಯಲ್ಲಿದ್ದ ಚಾಕು ತೋರಿಸಿ ಕೊಲ್ಲುವ ಬೆದರಿಕೆ ಒಡ್ಡಿದಾಗ ಗೊದ್ರೇಜ್ ಕಪಾಟಿನ ಬೀಗದ ಕೀಯನ್ನು ನೀಡಿದ್ದಾರೆ.
ಮುಸುಕುದಾರಿಗಳು ಗೊದ್ರೇಜ್ ನಲ್ಲಿರಿಸಲಾಗಿದ್ದ ಸುಮಾರು 3.20 ಲಕ್ಷ ರೂ.ಮೌಲ್ಯದ 82 ಗ್ರಾಂ ವಿವಿಧ ಮಾದರಿಯ ಚಿನ್ನಾಭರಣ, 30 ಸಾ.ರೂ.ನಗದು ಹಾಗೂ 11 ಸಾ.ರೂ. ಮೌಲ್ಯದ 2 ಮೊಬೈಲ್ ಪೋನನ್ನು ದೋಚಿ ಪರಾರಿಯಾಗಿದ್ದಾರೆ.
ಈ ಸಂದರ್ಭ ಅಡ್ಡ ಬಂದ ಮಗಳು ಮರೀನಾ ಪಿಂಟೋ ಅವರ ಕೈಗೆ ಚಾಕುವಿನಿಂದ ಗಾಯಗೊಳಿಸಿದ್ದಾರೆ. ಘಟನೆಯ ಸುದ್ದಿ ತಿಳಿದು ಮನೆಗಾಗಮಿಸಿದ ಗಾಯಾಳುವಿನ ಅಣ್ಣ ವೀಡಿಯೋಗ್ರಾಫರ್ ಆಸ್ಟಿನ್ ಪಿಂಟೋ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.
ಸುದ್ದಿ ತಿಳಿದ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ವಿಜಯ ಪ್ರಸಾದ್, ಗ್ರಾಮಾಂತರ ಠಾಣಾ ಇನ್ಸ್ ಪೆಕ್ಟರ್ ಶಿವಕುಮಾರ್, ಎಸ್.ಐ.ಹರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಯ ಬಗ್ಗೆ ಮಾಹಿತಿ ಪಡೆದರು. ಶ್ವಾನ ದಳ ಬೆರಳಚ್ಚು ತಜ್ಞರನ್ನು ಸ್ಥಳಕ್ಕೆ ಕರೆಸಿ ಪರಿಶೀಲನೆ ನಡೆಸಲಾಗಿದೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
ಪ್ಲೋರಿನಾ ಪಿಂಟೊ ಅವರ ಮನೆ ಹೆದ್ದಾರಿಗೆ ತಾಗಿಕೊಂಡೆ ಇದ್ದು, ಬಿ.ಸಿ.ರೋಡು- ಪುಂಜಾಲಕಟ್ಟೆ ರಾ.ಹೆ.ಯ ಅಗಲೀಕರಣದ ಹಿನ್ನಲೆಯಲ್ಲಿ ಇವರ ಮನೆ ಮುಂಭಾಗ ಭೂಸ್ವಾಧೀನವಾಗಿತ್ತು. ಬಳಿಕ ಇವರು ಅಲ್ಲೇ ಸಮೀಪ ಹೊಸ ಮನೆಯನ್ನು ನಿರ್ಮಿಸಿದ್ದರು.
ಜ್ಯೂಸ್ ಮೆಷಿನ್ ಕಳವು:
ಎರಡು ದಿನಗಳ ಹಿಂದೆಯಷ್ಠೆ ಹೆದ್ದಾರಿ ಬದಿಯಲ್ಲಿನ ಬೀದಿ ಬದಿ ವ್ಯಾಪಾರಿಯೋರ್ವರ ಕಬ್ಬಿನ ರಸದ ಜ್ಯೂಸ್ ಮೆಷಿನ್ ನನ್ನೇ ಹೊತ್ತೊಯ್ದಿದ್ದಾರೆ ಎಂದು ತಿಳಿದು ಬಂದಿದೆ.
ವಗ್ಗ ಜಂಕ್ಷನ್ ನಲ್ಲಿ ಸಿಸಿ ಕ್ಯಾಮರ:
ಕೃತ್ಯ ನಡೆದ ಮನೆಗಿಂತ ಸ್ವಲ್ಪ ದೂರದ ವಗ್ಗ ಜಂಕ್ಷನ್ ಇದ್ದು, ಅಲ್ಲಿ ಸಿಸಿ ಕ್ಯಾಮರ ಅಳವಡಿಸಲಾಗಿದೆ. ಆದರೆ ಆರೋಪಿಗಳು ಕೃತ್ಯದ ಬಳಿಕ ಪಕ್ಕದಲ್ಲೇ ಇರುವ ಮೂಡುಗೋಡಿನ ಹೊಸ ರಸ್ತೆಯ ಮೂಲಕ ತೆರಳಿದ್ದಾರೆಯೇ? ಅಥವಾ ಬಂಟ್ವಾಳ ಕಡೆಗೆ ಬಂದು ಎಸ್ಕೇಪ್ ಆಗಿದ್ದಾರೆಯೇ ಎಂಬುದೀಗ ಪೊಲೀಸರ ಮುಂದಿರುವ ಸವಾಲಾಗಿದೆ.
ಆರೋಪಿಗಳು ಕೃತ್ಯಕ್ಕಾಗಿ ಯಾವ ವಾಹನ ಬಳಸಿದ್ದಾರ ಅಥವಾ ಇಲ್ಲವಾ ಎಂಬುದು ಪೊಲೀಸರಿಗೆ ಸ್ಪಷ್ಟವಾಗಿಲ್ಲ, ಪ್ರಾಥಮಿಕ ಹಂತವಾಗಿ ವಗ್ಗ ಜಂಕ್ಷನ್ ನ ಸಿಸಿ ಕ್ಯಾಮರಾದ ಪೂಟೇಜ್ ಪರಿಶೀಲನೆ ನಡೆಸಿರುವ ಪೊಲೀಸರಿಗೆ ಸದ್ಯ ಆರೋಪಿಗಳ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿಲ್ಲ ಎಂದು ತಿಳಿದು ಬಂದಿದೆ.
ತಂಡ ರಚನೆ:
ಆರೋಪಿಗಳ ಪತ್ತೆಗಾಗಿ ಗ್ರಾಮಂತರ ಠಾಣೆಯ ಇನ್ಸ್ ಪೆಕ್ಟರ್ ನೇತೃತ್ವದಲ್ಲಿ ಹಾಗೂ ಎಸ್ .ಐ.ಹರೀಶ್ ಅವರ ನೇತೃತ್ವದ ವಿಶೇಷ ತಂಡ ರಚಿಸಲಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ.
ಕಳೆದೊಂದು ತಿಂಗಳಿನಿಂದ ಬಂಟ್ವಾಳದಾದ್ಯಂತ ಕಳ್ಳರ ಹಾವಳಿ ಅತಿಯಾಗಿದ್ದು, ಜನಸಾಮಾನ್ಯರು ಆತಂಕಕ್ಕೊಳಗಾಗಿದ್ದಾರೆ.
ಮಂಗಳೂರಿನಂತ ನಗರ ಪ್ರದೇಶದಲ್ಲಿ ಸಿಸಿಬಿಯಂತ ಪೊಲೀಸರ ವಿಶೇಷ ತಂಡ ರಾತ್ರಿಗಸ್ತಿನಲ್ಲಿರುತ್ತದೆ. ಆದರೆ ಬಂಟ್ವಾಳದಂತ ಬೆಳೆಯುತ್ತಿರುವ ನಗರ ಪ್ರದೇಶದಲ್ಲಿ ಅನುಭವಸ್ಥ ಮತ್ತು ಕೆಲ ಹಿರಿಯ ಪೊಲೀಸ್ ಸಿಬಂದಿಗಳನ್ನೊಳಗೊಂಡ ವಿಶೇಷ ಪೊಲೀಸ್ ತಂಡವೇ ಇಲ್ಲ, ಈ ರೀತಿಯ ಘಟನೆಗಳದಾಗ ಮಾತ್ರ ಎಚ್ಚೆತ್ತುಕೊಳ್ಳುವ ಪೊಲೀಸ್ ಅಧಿಕಾರಿಗಳು ಆರೋಪಿಗಳ ಪತ್ತೆಗಾಗಿ ತಂಡ ರಚಿಸಿ ಬಳಿಕ ಸಿಬ್ಬಂದಿಗಳನ್ನು ಆವರವರ ಠಾಣೆಗೆ ಕರ್ತವ್ಯಕ್ಕೆ ಕಳಿಸಲಾಗುತ್ತದೆ.
ಹಿಂದೆ ರಾತ್ರಿ ಬೀಟ್ ಪೊಲೀಸ್ ವ್ಯವಸ್ಥೆ ಇತ್ತಾದರೂ, ಅದು ಕೂಡ ಈಗ ಇಲ್ಲದಿದ್ದು, ಕಳ್ಳರಿಗೆ ವರದಾನವಾಗಿದೆ. ಹೆದ್ದಾರಿ ಗಸ್ತು ಪಡೆ 112 ಇದ್ದರೂ, ಅವರಿಗೆ ಘಟನೆಯ ಬಗ್ಗೆ ಕರೆ ಬಂದಾಗ ಮಾತ್ರ ಸ್ಥಳಕ್ಕೆ ಧಾವಿಸಬೇಕಾಗುತ್ತದೆ.
ಆದರೆ ರಾತ್ರಿ ವೇಳೆ ಕೆಲ ಆಯಕಟ್ಟಿನ ಸ್ಥಳದಲ್ಲಿ 112 ಗಸ್ತುಪಡೆಯ ಸಿಬ್ಬಂದಿಗಳು ಹೆದ್ದಾರಿಯಲ್ಲಿ ಸಂಚರಿಸುವ ಕೆಲ ವಾಹನಗಳನ್ನು ತಡೆದು ತಪಾಸಣೆಯ ನೆಪದಲ್ಲಿ ವಸೂಲಿ ಮಾಡುತ್ತಿರುವ ಆರೋಪ ವಾಹನ ಚಾಲಕರಿಂದ ಕೇಳಿಬಂದಿದೆ.