ಬಂಟ್ವಾಳ: ಪ್ರಧಾನ ಮಂತ್ರಿ ಆತ್ಮ ನಿರ್ಭರ್ ನಿಧಿ ಯೋಜನೆಯಡಿ ಗುರುತಿಸಲ್ಪಟ್ಟ ಬೀದಿ ವ್ಯಾಪಾರಿಗಳ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯಡಿ ಸ್ವ ನಿಧಿಯಿಂದ “ಸಮೃದ್ಧಿ ಮೇಳ, ಮೈಭಿಡಿಜಿಟಲ್ ಕ್ಯಾಂಪ್ ಹಾಗೂ ಬೀದಿ ವ್ಯಾಪಾರಿಗಳಿಗೆ ಅರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವು ಬಂಟ್ವಾಳ ಪುರಸಭೆಯ ವತಿಯಿಂದ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಬುಧವಾರ ನಡೆಯಿತು.

ಜಿಲ್ಲಾ ಕೌಶಲ್ಯಭಿವೃದ್ಧಿ ಇಲಾಖೆಯ ಮಿಶನ್ ಮ್ಯಾನೇಜರ್ ಐರಿನ್ ರೆಬೆಲ್ಲೊ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಬೀದಿ ವ್ಯಾಪಾರಿಗಳಿಗೆ ಪಿ.ಎಂ.ಸ್ವನಿಧಿ ಯೋಜನೆಯಡಿ ಸಿಗುವ ಸಾಲ ಸೌಲಭ್ಯ ಹಾಗೂ ಬೀದಿ ವ್ಯಾಪಾರಿಗಳಿಗೆ ಸ್ವನಿಧಿ ಸೇವಾ ಸಮೃದ್ಧಿ ಕಾರ್ಯಕ್ರಮದಡಿ ಸರಕಾದ ವಿವಿಧ ಯೋಜನೆಗಳ ಪ್ರಯೋಜನವನ್ನು ಯಾವ ರೀತಿಯಲ್ಲಿ ಪಡೆಯಬಹುದು‌ ಎಂಬುದರ ಕುರಿತು  ಮಾಹಿತಿ ನೀಡಿದರು. 

ಬಂಟ್ವಾಳ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯಾದ ಶೀಲಾವತಿ ಅವರು ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಡಿ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಆಯುಷ್ಮಾನ್ ಭಾರತದ ಅಸಿಸ್ಟೆಂಟ್ ರಿಜನಲ್ ಕನ್ಸಲ್ಟೆಂಟ್ ಡಾ.ನೌಶಾದ್  ಅವರು ಆಯುಷ್ಮಾನ್ ಭಾರತ ಯೋಜನೆಯ ಕುರಿತು ಮಾಹಿತಿ ನೀಡಿದರೆ, ಕಾರ್ಮಿಕ ಇಲಾಖೆಯ ಅಧಿಕಾರಿ ವೀರಣ್ಣ ಅವರು ಪಿ.ಎಂ. ಶ್ರಮ ಯೋಗಿ ಮಾನ್ ಧನ್ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. 

ಕೆನರಾ ಬ್ಯಾಂಕ್ ಬಂಟ್ವಾಳ ಶಾಖೆ ಶರತ್, ಯೂನಿಯನ್ ಬ್ಯಾಂಕ್ ಬಂಟ್ವಾಳ ಶಾಖೆ ಮ್ಯಾನೇಜರ್ ಎಡ್ವಿನ್ ಸತೀಶ್, ಯೂನಿಯನ್ ಬ್ಯಾಂಕ್ ಬಿ.ಸಿ.ರೋಡು ಶಾಖೆಯ ಮ್ಯಾನೇಜರ್ ಯಶವಂತ್, ಯೂನಿಯನ್ ಬ್ಯಾಂಕ್ ಪಾಣೆಮಂಗಳೂರು ಶಾಖೆಯ ಮ್ಯಾನೇಜರ್ ವಿನೋದ್, ಎಸ್ .ಬಿ .ಐ.ನ ಲೋನ್ ಆಫೀಸರ್ ಲಾವಣ್ಯ, ಎಸ್. ಸಿ.ಡಿ ಸಿ.ಸಿ. ಬ್ಯಾಂಕಿನ ಮ್ಯಾನೇಜರ್ ಗಣೇಶ್ ಕಾರಂತ್, ಬ್ಯಾಂಕ್ ಆಪ್ ಬರೋಡಾ ಬಂಟ್ವಾಳ ಶಾಖೆಯ ಮ್ಯಾನೇಜರ್ ಆಶ್ವಿನಿ,ಇಂಡಿಯನ್ ಓವರ್ ಸೀಸ್ ಮ್ಯಾನೇಜರ್ ಗೌರವ್ ಪಾಲ್ , ಬಂಟ್ವಾಳ ಲಯನ್ಸ್ ಕ್ಲಬ್ ನ ಅಧ್ಯಕ್ಷ ಪ್ರಶಾಂತ್ ಕೋಟ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ವೇಳೆ ವಿವಿಧ ಬ್ಯಾಂಕುಗಳಿಂದ ಬೀದಿ ವ್ಯಾಪಾರಿಗಳಿಗೆ ಸಾಲ ಮಂಜೂರಾತಿ ಪತ್ರ ಹಾಗೂ ಕ್ಯೂ ಆರ್ ಕೋಡ್ ವಿತರಿಸಲಾಯಿತು. ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಬಂಟ್ವಾಳ ಹಾಗೂ ಎ.ಜೆ. ಅಸ್ಪತ್ರೆಯ ಸಮುದಾಯ ಚಿಕಿತ್ಸಾ ವಿಭಾಗದ ವೈದ್ಯಾಧಿಕಾರಿಗಳಿಂದ ಭಾಗವಹಿಸಿದ ಎಲ್ಲಾ ಬೀದಿ ವ್ಯಾಪಾರಿಗಳು ಮತ್ತವರ  ಕುಟುಂಬದ ಸದಸ್ಯರ ಆರೋಗ್ಯ ತಪಾಸಣೆ ನಡೆಸಲಾಯಿತು. 

ಅರ್ಹ ಫಲಾನುಭವಿಗಳಿಗೆ ಆರೋಗ್ಯ ಇಲಾಖೆಯಿಂದ ಆಯುಷ್ಮಾನ್ ಕಾರ್ಡ್ ಮಾಡಿಕೊಡಲಾಯಿತು.

ಜಯಶ್ರೀ, ವಿಮಲ, ಮಂಗಳರವರು ಪ್ರಾರ್ಥಿಸಿದರು. ಸಮುದಾಯ ಸಂಪನ್ಮೂಲ ವ್ಯಕ್ತಿ ಮಂಗಳರವರು ಸ್ವಾಗತಿಸಿದರು, ಸಮುದಾಯ ಸಂಪನ್ಮೂಲ ವ್ಯಕ್ತಿ ಗೀತಾ ವಂದಿಸಿದರು. ಪುರಸಭೆಯ ಸಮುದಾಯ ಸಂಘಟಕಿ ಉಮಾವತಿಯವರು ಕಾರ್ಯಕ್ರಮ ನಿರೂಪಿಸಿದರು. 

By Suddi9

Leave a Reply

Your email address will not be published. Required fields are marked *