ಅಕ್ಕಿ ಕಳವು ಪ್ರಕರಣದ ಉನ್ನತ ಮಟ್ಟದ ತನಿಖೆಯಾಗಬೇಕು ಮತ್ತು ಅಕ್ರಮ- ಸಕ್ರಮದಲ್ಲಿ ಜಮೀನು ಮಂಜೂರಾದ ಫಲಾನುಭವಿಗಳಿಗೆ ಸಾಗುವಳಿ ಚೀಟಿ ನೀಡಲು ವಾರದ ಗಡುವು
ಬಂಟ್ವಾಳ: ಬಿ.ಸಿ.ರೋಡಿಗೆ ಸಮೀಪದ ಪೊನ್ನೊಡಿ ರಾಜ್ಯ ಆಹಾರ ನಿಗಮದ ಅಕ್ಕಿ ಶೇಖರಣಾ ಕೇಂದ್ರದಿಂದ ಬಿ.ಪಿ.ಎಲ್. ಕಾರ್ಡ್‌ದಾರರಿಗೆ ಹಂಚಿಕೆಯಾಗುವ ಕೋಟ್ಯಂತರ ರೂ. ಮೌಲ್ಯದ ಸಾವಿರಾರು ಕಿಂಟ್ವಾಲ್ ಅಕ್ಕಿ ಕಳವು ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಮತ್ತು 2023 ನೇ ಸಾಲಿನ ಅಕ್ರಮ- ಸಕ್ರಮದಲ್ಲಿ ಜಮೀನು ಮಂಜೂರಾದ ಫಲಾನುಭವಿಗಳಿಗೆ ಸಾಗುವಳಿ ಚೀಟಿ ನೀಡಿ ವಾರದ ಗಡುವು ವಿಧಿಸಿ ಮಾಜಿ ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ ಅವರ ನೇತೃತ್ವದ ನಿಯೋಗ ಮಂಗಳವಾರ ಬಂಟ್ವಾಳ ತಹಶೀಲ್ದಾರರಿಗೆ ಮನವಿ ಸಲ್ಲಿಸಿತು.

ಪೊನ್ನೋಡಿಯ ಸಂಗ್ರಹಣಾ ಗೋದಾಮಿನಿಂದ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಸುಮಾರು 1.32 ಕೋ.ರೂ. ಮೌಲ್ಯದ 3850 ಕ್ವಿಂಟಾಲ್ ಅಕ್ಕಿ ಕಾಣೆಯಾಗಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಂದು ಪ್ರಕರಣ ದಾಖಲಾಗಿತ್ತು.
ಈ ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ತಾಲೂಕು ಆಹಾರ ನಿರೀಕ್ಷಕರ ಹಾಗೂ ಗೋದಾಮಿನ ಸಿಬ್ಬಂದಿಯನ್ನು ಅಮಾನತು ಮಾಡಿದ್ದು, ಬಿಟ್ಟರೆ ಈ ಹಗರಣದ ಹಿಂದಿರುವ ಜಾಲವನ್ನು ಪತ್ತೆ ಹಚ್ಚಿ ಅವರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳದಿರುವುದು ದುರ ದೃಷ್ಟಕರವಾಗಿದೆ ಎಂದು ಅವರು ಮನವಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅದೇ ರೀತಿ 2023 ನೇ ಸಾಲಿನ ಅಕ್ರಮ- ಸಕ್ರಮದಲ್ಲಿ ಜಮೀನು ಮಂಜೂರಾದ ಫಲಾನುಭವಿಗಳಿಗೆ ಇದುವರೆಗೂ ಸಾಗುವಳಿ ಚೀಟಿ ಸಿಕ್ಕಿರುವುದಿಲ್ಲ, ಸಾಗುವಳಿ ಚೀಟಿ ಸಿಕ್ಕಿರುವ ಕೆಲವು ಫಲಾನುಭವಿಗಳಿಗೆ ಆರ್.ಟಿ.ಸಿ. ಆಗಿರುವುದಿಲ್ಲ ಎಂದು ತಹಶೀಲ್ದಾರರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ.
ಈ ಎರಡು ಪ್ರಕರಣದ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ಜ.16 ರಂದು ಮಂಗಳವಾರ ತಾಲೂಕು ಕಚೇರಿಗೆ ಫಲಾನುಭವಿಗಳೊಂದಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದೆಂದು ತುಂಗಪ್ಪ ಬಂಗೇರ ಮನವಿಯಲ್ಲಿ ಎಚ್ಚರಿಸಿದ್ದಾರೆ.
ನಿಯೋಗದಲ್ಲಿ ಯೋಗೀಶ್ ಆಚಾರ್ಯ, ಕಾಂತಪ್ಪ ಕರ್ಕೇರ, ರಮಾನಂದ, ಹರೀಶ್ ನಾಯ್ಕ್ ಮೊದಲಾದವರಿದ್ದರು.
ಉಪತಹಶೀಲ್ದಾರ್ ನವೀನ್ ಬೆಂಜನಪದವು ಅವರು ಮನವಿ ಸ್ವೀಕರಿಸಿ, ತಹಶೀಲ್ದಾರರ ಗಮನಕ್ಕೆ ತರುವ ಭರವಸೆಯಿತ್ತರು.