“ನೃತ್ಯ ಧಾರ ಮತ್ತು ಕಲಾನಯನ ಪ್ರಶಸ್ತಿ” ಪ್ರಧಾನ ಸಮಾರಂಭ
ಬಂಟ್ವಾಳ: ಪುತ್ತೂರು ಶ್ರೀ ದೇವಿ ನೃತ್ಯಾರಾಧನಾ ಕಲಾ ಕೇಂದ್ರದ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದೊಂದಿಗೆ “ನೃತ್ಯ ಧಾರ ಮತ್ತು ಕಲಾನಯನ ಪ್ರಶಸ್ತಿ” ಪ್ರಧಾನ ಸಮಾರಂಭ ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಭಾನುವಾರ ಸಂಜೆ ನಡೆಯಿತು.

ಈ ಸಂದರ್ಭ ಖ್ಯಾತ ಯಕ್ಷಗಾನ ಹಾಸ್ಯ ಕಲಾವಿದ ರಸಿಕ ರತ್ನ ದಿ. ನಯನ ಕುಮಾರ್‌ರವರ ಸ್ಮರಣಾರ್ಥ “ಕಲಾನಯನ” ಪ್ರಶಸ್ತಿಯನ್ನು ಪುತ್ತೂರಿನ ಖ್ಯಾತ ಚರ್ಮವಾದ್ಯ ತಯಾರಕರು ಮತ್ತು ಕೊಳಲು ವಾದಕ ಪಿ.ರಾಜರತ್ನಂ ದೇವಾಡಿಗ ಅವರಿಗೆ ಪ್ರದಾನ ಮಾಡಲಾಯಿತು.
ಅದೇ ರೀತಿ ಖ್ಯಾತ ವಸ್ತ್ರ ವಿನ್ಯಾಸಗಾರರು ಮತ್ತು ಮುಖವರ್ಣಿಕೆ ಕಲಾವಿದ ಸುನೀಲ್ ಉಚ್ಚಿಲ ದಂಪತಿ ಅವರನ್ನು ಸನ್ಮಾನಿಸಲಾಯಿತು.
ಕರ್ನಾಟಕ ಕಲಾಶ್ರೀ ವಿದ್ವಾನ್ ಕೆ. ಚಂದ್ರಶೇಖರ ನಾವಡ ಅವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ತುಳುವೆರ್ ಜನಪದ ಕೂಟದ ಖಜಾಂಚಿ ಪ್ರಭು ರೈ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಇದೊಂದು ಅರ್ಥಗರ್ಭಿತವಾದ ಕಾರ್ಯಕ್ರಮವಾಗಿದ್ದು, ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ವ್ಯಕ್ತಿತ್ವ ನಿರ್ಮಾಣದ ಕೆಲಸವು ಸಂಸ್ಥೆಯಿಂದಾಗುತ್ತಿರುವುದು ಅಭಿನಂದನೀಯವಾಗಿದೆ ಎಂದರು.
ಬಾಲಕೃಷ್ಣ ಪ್ರಭು ವೇದಿಕೆಯಲ್ಲಿದ್ದರು, ಶ್ರೀ ದೇವಿ ನೃತ್ಯಾರಾಧನಾ ಕಲಾ ಕೇಂದ್ರದ ಸಂಚಾಲಕ ಉದಯ ವೆಂಕಟೇಶ್ ಭಟ್
ಸ್ವಾಗತಿಸಿದರು. ನೃತ್ಯ ನಿರ್ದೇಶಕಿ ರೋಹಿನಿ ಉದಯ್ ಪ್ರಸ್ತಾವನೆಗೈದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ನೃತ್ಯ ನಿರ್ದೇಶಕಿ, ವಿದುಷಿ ರೋಹಿನಿ ಉದಯ್ ಮತ್ತವರ ತಂಡದಿಂದ ನೃತ್ಯಧಾರ ಪ್ರದರ್ಶನ ನಡೆಯಿತು.