Published On: Wed, Dec 27th, 2023

ಪಟ್ಲ ಸತೀಶ್ ಶೆಟ್ಟಿಯವರು ಕಲಾವಿದರಿಗೊಂದು ಶಕ್ತಿ: ಉಡುಪಿ ಜಿಲ್ಲಾ ನ್ಯಾಯಾಧೀಶ ದಿನೇಶ್ ಹೆಗ್ಡೆ

ಬಂಟ್ವಾಳ: ಯಕ್ಷಗಾನದಲ್ಲಿ ದೊಡ್ಡ ಕ್ರಾಂತಿಯನ್ನು ಮಾಡಿರುವ ಪಟ್ಲ ಸತೀಶ್ ಶೆಟ್ಟಿಯವರು ಕಲಾವಿದರಿಗೊಂದು ಶಕ್ತಿಯಾಗಿದ್ದಾರೆ.  ಯಕ್ಷಗಾನದಿಂದ ಜ್ಞಾನದ ವೃದ್ದಿಯಾಗುತ್ತಿದ್ದು, ಮಕ್ಕಳಲ್ಲು ಯಕ್ಷಗಾನದ ಅಭಿರುಚಿ ಮೂಡಿಸುವ ನಿಟ್ಟಿನಲ್ಲಿ ಪೋಷಕರು ಪ್ರೋತ್ಸಾಹಿಸಬೇಕು‌ ಎಂದು‌‌‌  ಉಡುಪಿ ಜಿಲ್ಲಾ ನ್ಯಾಯಾಧೀಶ ದಿನೇಶ್ ಹೆಗ್ಡೆ ಬದ್ಯಾರು ಅವರು ಹೇಳಿದ್ದಾರೆ.

ಸೋಮವಾರ ಸಂಜೆ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನಡೆದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಪುಂಜಾಲಕಟ್ಟೆ ಘಟಕ ಹಾಗೂ ಮಹಿಳಾ ಘಟಕದ ೬ನೇ  ವಾರ್ಷಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಯಾಗಿದ್ದ ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲಗುತ್ತು ಸತೀಶ್ ಶೆಟ್ಟಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಯಕ್ಷಗಾನದಲ್ಲು ಸಾಕಷ್ಟು ಪರಿವರ್ತನೆ ಕಂಡಿದೆ.

ಇತ್ತೀಚಿನ ದಿನಗಳಲ್ಲಿ ನ್ಯಾಯಾಲಯದ ಆವರಣದಲ್ಲಿ ಯಕ್ಷಗಾನ ಪ್ರದರ್ಶನ ನಡೆಯುತ್ತಿರುವುದು ಹೊಸ ಬೆಳವಣಿಗೆಯಾಗಿದೆ. ಪಟ್ಲ ಪೌಂಡೇಶನ್ ನ ಪುಂಜಾಲಕಟ್ಟೆ ಘಟಕ ಯಕ್ಷ ಶಿಕ್ಷಣದ ಮೂಲಕ ಮಕ್ಕಳನ್ನು ಯಕ್ಷಗಾನದಲ್ಲಿ ತೊಡಗಿಸಿರುವುದು ಶ್ಲಾಘನೀಯವಾಗಿದೆ ಎಂದರು.

ಸರಕಾರಿ ಮತ್ತು ಖಾಸಗಿ ಸೇರಿದಂತೆ ಒಟ್ಟು 40 ಶಾಲೆಗಳ 4000 ವಿದ್ಯಾರ್ಥಿಗಳಿಗೆ ಯಕ್ಷ ಶಿಕ್ಷಣದ ಮೂಲಕ ಉಚಿತ ಯಕ್ಷಗಾನ ತರಬೇತಿ ನೀಡಲಾಗುತ್ತಿದ್ದು, ಜ. 28 ರಂದು ಮೂಡಬಿದ್ರೆಯಲ್ಲಿ ಇದಕ್ಕೆ ಚಾಲನೆ‌ ನೀಡಲಾಗುತ್ತಿದೆ‌ ಎಂದ ಅವರು ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕಾರ, ಸಂಸ್ಕೃತಿ ನೀಡುವಲ್ಲಿ ಪೋಷಕರ ಜೊತೆ ಸಮಾಜದ ಪ್ರೋತ್ಸಾಹವು ಅಗತ್ಯವಿದೆ ಎಂದರು.

ಜಿ.ಪಂ.ಮಾಜಿ ಉಪಾಧ್ಯಕ್ಷ ತುಂಗಪ್ಪ ಬಂಗೇರ, ಚಲನಚಿತ್ರ ನಿರ್ಮಾಪಕ ರವಿ ರೈ ಕಳಸ, ಉದ್ಯಮಿ‌ ನಾಗೇಶ್ ಪ್ರಭು, ಕಾವಳಮೂಡೂರು ಗ್ರಾ.ಪಂ.ಅಧ್ಯಕ್ಷ ಅಜಿತ್ ಶೆಟ್ಟಿ ಕಾರಿಂಜ, ಯಕ್ಷಧ್ರುವ ಪಟ್ಲ ಫೌಂಡೇಶನ್ ಪುಂಜಾಲಕಟ್ಟೆ ಘಟಕದ ಗೌರವಾಧ್ಯಕ್ಷ ಪುರುಷೋತ್ತಮ ಪೂಜಾರಿ, ಮಹಿಳಾ ಘಟಕ ಅಧ್ಯಕ್ಷೆ ಉಮಾ ಡಿ.ಗೌಡ, ಗೌರವಾಧ್ಯಕ್ಷೆ ಲಕ್ಷ್ಮೀ ಸಂಜೀವ ಶೆಟ್ಟಿ, ಸಂಚಾಲಕ ರಮೇಶ್ ಶೆಟ್ಟಿ ಮಜಲೋಡಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದರಾದ ಕಾಜಲ ವಿಶ್ವನಾಥ ಪೂಜಾರಿ ಮತ್ತು ದಿವಾಕರ ದಾಸ್ ಕಾವಳಕಟ್ಟೆ ಅವರನ್ನು ಸನ್ಮಾನಿಸಲಾಯಿತು. ಯಕ್ಷಗುರು ದೇವಿ ಪ್ರಸಾದ್ ಆಚಾರ್ಯ ಹಾಗೂ ಸಹಕರಿಸಿದವರನ್ನು ಗೌರವಿಸಲಾಯಿತು‌ ಘಟಕದ ಅಧ್ಯಕ್ಷ ಯಶೋಧರ ಶೆಟ್ಟಿ ಸ್ವಾಗತಿಸಿದರು. ಉದಯಕುಮಾರ್ ಶೆಟ್ಟಿ ವಂದಿಸಿದರು. ಪತ್ರಕರ್ತ ರತ್ನದೇವ್ ಪುಂಜಾಲಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

ಮಧ್ಯಾಹ್ನ ಘಟಕದ ವಿದ್ಯಾರ್ಥಿಗಳಿಂದ ಶ್ವೇತ ಕುಮಾರ ಚರಿತ್ರೆ ಮತ್ತು ಸಂಜೆ ಪಾವಂಜೆ ಮೇಳದವರಿಂದ “ಶ್ರೀ ದೇವೀ ಮಹಾತ್ಮೆ” ಯಕ್ಷಗಾನ ಪ್ರದರ್ಶನ ನಡೆಯಿತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter