ವೇದವ್ಯಾಸ ಧ್ಯಾನ ಮಂದಿರದಲ್ಲಿ ರಾಮ ನಾಮ ತಾರಕ ಜಪಯಜ್ಞಕ್ಕೆ ಚಾಲನೆ
ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ ನಡೆಯಲಿರುವ ಶ್ರೀ ವಿದ್ಯಾಗಣಪತಿ ಪ್ರತಿಷ್ಠೆ ಹಾಗೂ ೧೩ ಕೋಟಿ ರಾಮನಾಮ ತಾರಕ ಜಪಯಜ್ಞದ ಪ್ರಯುಕ್ತ ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ಜಪಮಾಲೆ ವಿತರಣೆ ಹಾಗೂ ರಾಮನಾಮ ಸ್ಮರಣೆಯ ಪಠಣಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.

ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ‘ರಾಮನಾಮ ತಾರಕ ಜಪ’ದ ಮಹತ್ವ ಹಾಗೂ ರಾಮನಾಮ ತಾರಕ ಮಂತ್ರವನ್ನು ಜಪಿಸುವ ವಿಧಾನವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

“ರಾಮನಾಮ ಸ್ಮರಣೆಯಿಂದ ಬುದ್ಧಿಶಕ್ತಿ ಚುರುಕಾಗುತ್ತದೆ, ಆತ್ಮಸ್ಥೈರ್ಯದ ಜೊತೆಗೆ ಮನೋಬಲವು ವೃದ್ಧಿಸುತ್ತದೆ. ದೈಹಿಕ ಶಕ್ತಿ ಹಾಗೂ ಮಾನಸಿಕ ಶಕ್ತಿಯನ್ನೂ ನೀಡುತ್ತದೆ. ‘ಶ್ರೀರಾಮ ಜಯರಾಮ ಜಯ ಜಯ ರಾಮ’ ಎಂಬ ೧೩ ಅಕ್ಷರದ ಈ ರಾಮನಾಮ ಸ್ಮರಣೆಯಿಂದ ಪುಣ್ಯದ ಜೊತೆಗೆ ಧೈರ್ಯ, ವಿಶ್ವಾಸ, ನಂಬಿಕೆ, ಯಶಸ್ಸು ಲಭಿಸುವುದು ನಿಶ್ಚಿತ ಎಂದರು.

ರಾಮನ ಆದರ್ಶಗಳನ್ನು ನಮ್ಮೊಳಗೆ ಅಳವಡಿಸಿಕೊಳ್ಳಬೇಕು. ಸೇತುವೆ ನಿರ್ಮಾಣದಲ್ಲಿ ಅಳಿಲು ಹೇಗೆ ಸೇವೆ ಮಾಡಿತು, ಅದೇ ರೀತಿ ರಾಮನ ಸೇವೆಯಲ್ಲಿ ನಮ್ಮನ್ನೂ ನಾವು ತೊಡಗಿಸಿಕೊಳ್ಳೋಣ” ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಮೊದಲಿಗೆ ಶ್ರೀರಾಮನಿಗೆ ದೀಪ ಬೆಳಗಿಸಿ, ಪುಷ್ಪಾರ್ಚನೆ ಮಾಡಲಾಯಿತಲ್ಲದೆ ವಿದ್ಯಾರ್ಥಿಗಳಿಗೆ ಶ್ರೀರಾಮಚಂದ್ರನ ಭಾವಚಿತ್ರ, ಜಪಮಾಲೆಯನ್ನು ವಿತರಿಸಲಾಯಿತು.
ಶ್ರೀರಾಮ ಮಂದಿರದ ಕೃಷ್ಣಪ್ಪ, ಸುಜಿತ್ ಕೊಟ್ಟಾರಿ, ಮುಖ್ಯೋಪಾಧ್ಯಾಯ ರವಿರಾಜ್ ಕಣಂತೂರು ವೇದಿಕೆಯದ್ದರು.