ದ.17ರಂದು ರಾಮಕೃಷ್ಣ ತಪೋವನದಲ್ಲಿ ಅಯೋಧ್ಯಾ ಪತಿ “ಶ್ರೀರಾಮಚಂದ್ರರ ಪಟ್ಟಾಭಿಷೇಕ” ಅದ್ಭುತವಾಗಿ ನೆರವೇರಿತು
ಕೈಕಂಬ: ರಾಮಕೃಷ್ಣ ತಪೋವನ ಪೊಳಲಿಯಲ್ಲಿ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಅಯೋಧ್ಯಾ ಪತಿ ಶ್ರೀರಾಮ ಚಂದ್ರರ ಪಟ್ಟಾಭಿಷೇಕವು ದ.17ರಂದು ಭಾನುವಾರ ಸಂಪನ್ನಗೊಂಡಿತು.
ದ.೧೭ರಂದು ಭಾನುವಾರ ಅಪರಾಹ್ನ ೩:೦೦ಗಂಟೆಗೆ ಭವ್ಯ ಶೋಭಾಯಾತ್ರೆಯು ಕಳಶ ಹಿಡಿದ ಸ್ತ್ರೀಯರೊಂದಿಗೆ, ಸೀತಾ ಮಾತೆಯ ಸಹಿತ ಶ್ರೀ ರಾಮ ದೇವರ ವಿಗ್ರಹವನ್ನು ಪಲ್ಲಕ್ಕಿಯಲ್ಲಿ ಹೊತ್ತು ಪೊಳಲಿ ದೇವಸ್ಥಾನದಿಂದ ಹೊರಟು ತಪೋವನಕ್ಕೆ ಮೆರವಣೆಗೆಯ ಮೂಲಕ ಬಂದು ಮೂರ್ತಿ ಸ್ಥಾಪನೆಯು ವೈಭವದಿಂದ ನೆರವೇರಿತು.
ಬಳಿಕ ದೇವರಿಗೆ ಪಂಚಾಮೃತ ಅಭಿಷೇಕ, ಶೋಡಶೋಪಚಾರ ಪೂಜೆ, ರಜತ ಕಿರೀಟ ಧಾರಣೆ ನಡೆಯಿತು. ಶ್ರೀರಾಮ ಪಟ್ಟಾಭಿಷೇಕದ ನಂತರ ಮಹಾ ಮಂಗಳಾರತಿ ಹಾಗೂ ಲೋಕ ಕಲ್ಯಾಣಾರ್ಥವಾಗಿ ಆಶ್ರಮದ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿ ಪ್ರಾರ್ಥನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಪೂಜನೀಯ ವಿವೇಕ ಚೈತನ್ಯಾನಂದ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಯೋಗಾಚಾರ್ಯ ಪುಂಡರಿಕಾಕ್ಷ ಬೆಳ್ಳೂರು ಸ್ವಾಮಿ ಪ್ರವಚನ ನೀಡಿದರು. ನೆರೆದಿದ್ದ ಜನರು ಶ್ರೀ ರಾಮ ದೇವರ ಪಟ್ಟಾಭಿಷೇಕ ನೋಡಿ ಕಣ್ತುಂಬಿಕೊಂಡರು. ವಿವೇಕ ವೇದಿಕೆ ರಾಮಕೃಷ್ಣ ತಪೋವನ ಪೊಳಲಿಯ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.