ಕಾರಿಂಜದಲ್ಲಿ ಪ್ರಜ್ವಲಿಸಿದ ವೈಭವಪೂರ್ಣ ಲಕ್ಷ “ದೀಪ”
ಬಂಟ್ವಾಳ: ಕಾರ್ತಿಕ ದೀಪೋತ್ಸವದ ಪ್ರಯುಕ್ತ ಬಂಟ್ಚಾಳ ತಾಲೂಕಿನ ಇತಿಹಾಸ ಪ್ರಸಿದ್ದ ಭೂಕೈಲಾಸವೆಂದೇ ಪ್ರತೀತಿ ಹೊಂದಿರುವ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಧಾನದಲ್ಲಿ ಲಕ್ಷದೀಪೋತ್ಸವವು ಹಣತೆಯ ಬೆಳಕಿನ ಚಿತ್ತಾರದಲ್ಲಿ ವೈಭವಪೂರ್ಣವಾಗಿ ನೆರವೇರಿತು.
ಈಶ್ವರ ಸನ್ನಿಧಿಯಲ್ಲಿ ನೂರಾರು ಭಕ್ತರು ಹರಕೆಯ ತುಲಾಭಾರ ಸೇವೆ ಸಲ್ಲಿಸುವ ಮೂಲಕ ಪುನೀತರಾದರು. ರಾತ್ರಿ ಪಾರ್ವತಿ ಸನ್ನಿಧಿಯಲ್ಲಿ ವಿಶೇಷ ರಂಗಪೂಜೆ ನಡೆಯಿತು.
ಕಾವಳಮೂಡೂರು ಗ್ರಾಮದ ಬಲ್ಲೋಡಿ ಮಾಗಣೆ ಗುತ್ತಿನಿಂದ ದೇವಸ್ಥಾನಕ್ಕೆ ಶ್ರೀ ಕೊಡಮಣಿತ್ತಾಯ ದೈವದ ಭಂಡಾರ ಆಗಮಿಸಿ, ಬಳಿಕ ಭಕ್ತ ಸಮೂಹದ ನಡುವೆ ಕೊಡಮಣಿತ್ತಾಯ ದೈವದ ನೇಮ ಸಂಪನ್ನಗೊಂಡಿತು.
ಲಕ್ಷದೀಪೋತ್ಸವದ ನಿಮಿತ್ತ ಶ್ರೀ ಕಾರಿಂಜೇಶ್ವರ ದೇವರು ಪಾರ್ವತಿ ಸನ್ನಿಧಿಗಾಗಮಿಸಿ ಪರಸ್ಪರ ಭೇಟಿಯಾಗುವ ದೃಶ್ಯವನ್ನು ಭಕ್ತರು ಕಣ್ತುಂಬಿಕೊಂಡರು. ಪಾರ್ವತಿ, ಪರಮೇಶ್ವರ ದೇವರ ಉತ್ಸವ, ಕಟ್ಟೆ ಪೂಜೆಗಳು ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಹನುಮಗಿರಿ ಮೇಳದವರಿಂದ ಇಂದ್ರಪ್ರಸ್ಥ ಯಕ್ಷಗಾನ ಪ್ರದರ್ಶನ, ರಾತ್ರಿ ಅನ್ನಸಂತರ್ಪಣೆ ನಡೆಯಿತು.
ಬೆಳಗಿದ ಲಕ್ಷ ದೀಪಗಳು:
ರುದ್ರಗಿರಿಯ ಪದತಲದಿಂದ ಗದಾ ತೀರ್ಥ, ರಥ ಬೀದಿಯಿಂದ ತೊಡಗಿ ಶ್ರೀ ಕಾರಿಂಜೇಶ್ವರ ದೇವಸ್ಥಾನಕ್ಕೆ ಸಾಗುವ ಬೃಹತ್ ಬಂಡೆಯ ಮೆಟ್ಟಲುಗಳ ಇಕ್ಕೆಲಗಳಲ್ಲಿ, ಪಾರ್ವತಿ ಸನ್ನಿಧಿ ಹಾಗೂ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಸುತ್ತ ಜೋಡಿಸಲಾದ ಲಕ್ಷ ದೀಪಗಳನ್ನು ಸೇರಿದ್ದ ಭಕ್ತ ಸಮೂಹ ಏಕಕಾಲದಲ್ಲಿ ಹಣತೆ ಪ್ರಜ್ವಲಿಸಿ ಸಂಭ್ರಮ ಪಟ್ಟರು.
ವಿವಿಧ ಸಂಘ ಸಂಸ್ಥೆಗಳು, ಗ್ರಾಮಸ್ಥರು, ಭಕ್ತಾಧಿಗಳ ಸಹಕಾರದಿಂದ ಸುಮಾರು ಲಕ್ಷಕೂ ಮಿಕ್ಕಿ ಹಣತೆಗಳನ್ನು ಬೆಳಗಿಸಲಾಯಿತು. ಪಾರ್ವತಿ ಸನ್ನಿಧಿಯ ಅನ್ನಛತ್ರದ ಮೇಲ್ಛಾವಣಿಯ ಮೇಲೆ ಹಣತೆಯಲ್ಲಿ ರಚಿಸಲಾದ ಅಯೋಧ್ಯೆ ಶ್ರೀ ರಾಮ ಮಂದಿರದ ಪ್ರತಿಕೃತಿ, ಶಿವಲಿಂಗ, ದೇವಸ್ಥಾನದ ಆವರಣಗಳಲ್ಲಿ ನಿರ್ಮಿಸಿದ, ತ್ರಿಶೂಲ, ಸ್ವಸ್ತಿಕಗಳು ಸಹಿತ ವಿವಿಧ ಚಿತ್ತಾರಗಳು ಭಕ್ತರ ಸಮೂಹದ ಗಮನ ಸೆಳೆಯಿತು.
ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪುಳಿಮಜಲು ಮತ್ತು ಸಮಿತಿ ಸದಸ್ಯರು, ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಕಾವಳಮೂಡೂರು ಗ್ರಾ.ಪಂ. ಅಧ್ಯಕ್ಷ ಅಜಿತ್ ಕುಮಾರ್ ಶೆಟ್ಟಿ, ಕಾವಳಪಡೂರು ಗ್ರಾ.ಪಂ.ಅಧ್ಯಕ್ಷ ಲಕ್ಷ್ಮಿ ನಾರಾಯಣ ಶರ್ಮ, ಬಲ್ಲೋಡಿ ಮಾಗಣೆಗುತ್ತಿನ ಬಿ.ಪದ್ಮಶೇಖರ ಜೈನ್, ಗ್ರಾಮಣಿಗಳಾದ ಗಣಪತಿ ಮುಚ್ಚಿನ್ನಾಯ, ವೆಂಕಟರಮಣ ಮುಚ್ಚಿನ್ನಾಯ, ವೆಂಕಟ್ರಾಜ ಎಳಚಿತ್ತಾಯ ಹಾಗೂ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿದ್ದರು.