ರಂಗತರಂಗ ನಾಟಕ ಸಂಸ್ಥೆಯ ಸ್ಥಾಪಕ, ಸಮಾಜರತ್ನ ಕಾಪು ಲೀಲಾಧರ ಶೆಟ್ಟಿ ದಂಪತಿ ನೇಣಿಗೆ ಶರಣು
ಕೈಕಂಬ: ಕಾಪು ರಂಗತರಂಗ ನಾಟಕ ಸಂಸ್ಥೆಯ ಸ್ಥಾಪಕ, ಹೆಸರಾಂತ ಸಮಾಜ ಸೇವಕ, ಸಮಾಜರತ್ನ ಕೆ.ಲೀಲಾಧರ ಶೆಟ್ಟಿ(೬೮) ಹಾಗೂ ಅವರ ಪತ್ನಿ ವಸುಂಧರಾ ಶೆಟ್ಟಿ(೫೮) ದಂಪತಿ ಜೊತೆಯಾಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿರುವ ಘಟನೆ ಮಂಗಳವಾರ ಮಧ್ಯರಾತ್ರಿ ನಡೆದಿದೆ.
ಸರಳ ಸಜ್ಜನ ವ್ಯಕ್ತಿಯಾಗಿ, ಸಮಾಜ ಸೇವಕರಾಗಿ ಜನಪ್ರಿಯರಾಗಿದ್ದ ಲೀಲಾಧರ ಶೆಟ್ಟಿ ಹಿರಿಯ ರಂಗ ಕಲಾವಿದ, ಧಾರ್ಮಿಕ ಮುಂದಾಳು, ಧರಣಿ ಸೇವಾ ಸಂಸ್ಥೆಯ ಅಧ್ಯಕ್ಷ, ಕಾಪು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಮಂಗಳವಾರ ಮಧ್ಯರಾತ್ರಿ ೧೧:೨೦ರಿಂದ ೧೨:೩೦ರ ನಡುವಿನ ಅವಧಿಯಲ್ಲಿ ಮನೆಯ ಪಕ್ಕಾಸಿಗೆ ಒಂದೇ ಸೀರೆಯನ್ನು ಬಿಗಿದು ಅದರ ಎರಡೂ ತುದಿಗೆ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ಸಾವಿನ ಬಗ್ಗೆ ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸ್ಥಳೀಯರು ತಿಳಿಸಿದ್ದು ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೆ ಲಭ್ಯವಾಗಬೇಕಿದೆ. ಕಾಪು ಪೋಲಿಸರು ಸ್ಥಳಕ್ಕೆ ಭೇಟಿ ನೀಡಿದ್ದು ತನಿಖೆ ಮುಂದುವರೆಸಿದ್ದಾರೆ.
ಲೀಲಾಧರ ಶೆಟ್ಟಿ ಎಲ್.ಐ.ಸಿ. ಏಜೆಂಟರಾಗಿ, ಕಲಾ ಸಂಘಟಕರಾಗಿ, ಕಲಾಪೋಷಕರಾಗಿದ್ದರು, ವಿವಿಧ ಕಾರ್ಯಕ್ರಮಗಳ ಆಯೋಜಕರಾಗಿ ಕಲೆ, ಸಂಸ್ಖೃತಿ, ಸಂಸ್ಕಾರ, ಧಾರ್ಮಿಕ, ಜನಪದಮ ಶೈಕ್ಷಣಿಕ ಕ್ಷೇತ್ರಗಳ ಪೋಷಕರಾಗಿ ಸ್ವಾರ್ಥವಿಲ್ಲದೇ, ಕಳಂಕ ರಹಿತರಾಗಿ ಸಮಾಜದಲ್ಲಿ ಗುರುತಿಸಲ್ಪಟ್ಟಿದ್ದರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ಆಪ್ತರಾಗಿದ್ದ ಲೀಲಾಧರ ಶೆಟ್ಟಿ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಮತ್ತು ಜೆಡಿಎಸ್ ಅಭ್ಯರ್ಥಿಯಾಗಿ ಚುಣಾವಣೆ ಸ್ಪರ್ಧಿಸಿದ್ದರು. ಅನೇಕ ರಾಜಕೀಯ ಮತ್ತು ಸಾಮಾಜಿಕ ನಾಯಕರುಗಳಿಗೆ ಮಾರ್ಗದರ್ಶಕರಾಗಿದ್ದ ಅವರು ಮಜೂರು ನಾಗರಿಕ ದಮಿತಿ ಮೂಲಕ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿದ್ದು ಗಾಂ.ಪಂ. ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಕಾಪು, ಮಜೂರು, ಉಳಿಯಾರು, ಕರಂದಾಡಿ, ಜಲಂಚಾರು, ಮಲ್ಲಾರು ಪರಿಸರದ ವಿವಧ ದೇವಸ್ಥಾನ, ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ಧಾರದಲ್ಲಿ ಮುಂಚೂಣಿಯ ಪಾತ್ರ ವಹಿಸುತ್ತಿದ್ದ ಅವರು ಸರ್ವ ಧರ್ಮೀಯರೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದರು.
ಪ್ರಸ್ತುತ ಕರಂದಾಡಿ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷರಾಗಿ, ಹೊಸಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಗ್ರಾಮ ಪ್ರಚಾರ ಸಮಿತಿ ಪ್ರಧಾನ ಸಂಚಾಲಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.
ಲೀಲಾಧರ ಶೆಟ್ಟಿ ಅವರ ನಿಧನಕ್ಕೆ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರದ ನೂರಾರು ಮಂದಿ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.
೧೩ರಂದು ಬುಧವಾರ ಸಂಜೆ ಅಂತಿಮ ಸಂಸ್ಕಾರ:
ಲೀಲಾಧರ ಶೆಟ್ಟಿ ದಂಪತಿಯ ಅಕಾಲಿಕ ಮರಣ ಕಾಪುವಿನ ಜನತೆಯನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಬುಧವಾರ ಸಂಜೆ ೪ ಗಂಟೆಗೆ ಅವರ ಅಂತ್ಯಕ್ರೀಯೆ ನಡೆಯಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.