ವನ್ಯಜೀವಿ ದಾಳಿ: ರಿಕ್ಷಾ ಚಾಲಕ ಸಾವು
ಕೈಕಂಬ: ವನ್ಯಜೀವಿ ಮುಸಿಯ ದಾಳಿಯಿಂದ ನಿಯಂತ್ರಣ ಕಳೆದುಕೊಂಡ ರಿಕ್ಷಾ ಪಲ್ಟಿಯಾಗಿ ಅದರ ಚಾಲಕ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ ಘಟನೆ ಗುರುಪುರ ಕೈಕಂಬ ಮಳಲಿ ಸಮೀಪದ ರಸ್ತೆಯಲ್ಲಿ ಸಂಭವಿಸಿದೆ.

ಮಳಲಿ ಕೊಲ್ಲಬೆಟ್ಟು ನಿವಾಸಿ ರಿಕ್ಷಾ ಚಾಲಕ ಬೂಬ ಕುಲಾಲ್(೪೫) ಮೃತಪಟ್ಟ ದುರ್ದೈವಿ.
ಗುರುಪುರ ಕೈಕಂಬದಲ್ಲಿ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದ ಬೂಬ ಕುಲಾಲರು ಭಾನುವಾರ ಮಧ್ಯಾಹ್ನದ ನಂತರ ಕೈಕಂಬದಿಂದ ಮಳಲಿಗೆ ಹೋಗುತ್ತಿದ್ದರು. ಗುರುಪುರ ಕೈಕಂಬದ ಕೊಂಚ ದೂರ ರಿಕ್ಷಾ ಸಾಗುತ್ತಿದ್ದಂತೆ ವನ್ಯಜೀವಿ ಮುಸಿಯ(ಕೋತಿಯ ಜಾತಿಗೆ ಸೇರಿದ ಪ್ರಾಣಿ) ಒಮ್ಮೆಲೆ ದಾಳಿ ಮಾಡಿದೆ ಎನ್ನಲಾಗಿದೆ.
ಇದರಿಂದ ನಿಯಂತ್ರಣ ಕಳೆದುಕೊಂಡ ರಿಕ್ಷಾ ಪಲ್ಟಿಯಾಗಿ ಕೆಳಭಾಗದ ಮಣ್ಣು ಸಮತಟ್ಟು ಮಾಡಿದ ಜಾಗಕ್ಕೆ ಬಿದ್ದು ಗಂಭೀರ ಗಾಯಗೊಂಡು ಪ್ರಜ್ಞಾಹೀನರಾಗಿದ್ದ ಬೂಬ ಅವರನ್ನು ಸ್ಥಳೀಯ ರಿಕ್ಷಾ ಚಾಲಕರು ಹಾಗೂ ಸಾರ್ವಜನಿಕರು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು.
ಜೀವನ್ಮರಣ ಸ್ಥಿತಿಯಲ್ಲಿ ಹೋರಾಟ ನಡೆಸುತ್ತಿದ್ದ ಬೂಬ ಕುಲಾಲ್ ಸೋಮವಾರ ರಾತ್ರಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಬೃಹತ್ ಸಂಖ್ಯೆಯಲ್ಲಿ ಜನರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ, ಸಂತಾಪ ಸೂಚಿಸಿದ್ದಾರೆ.
ನಿಷ್ಠಾವಂತ ರಿಕ್ಷಾ ಚಾಲಕರಾಗಿದ್ದ ಬೂಬ ಕುಲಾಲ್ ಅವರ ಸಾವಿಗೆ ರಿಕ್ಷಾ ಚಾಲಕರು ಹಾಗೂ ಇಡೀ ಊರಿನ ಜನ ಕಂಬನಿ ಮಿಡಿದಿದ್ದಾರೆ. ಯಾವುದೇ ಕ್ಷಣದಲ್ಲಿ ಕರೆದರೂ ಬರುತ್ತಿದ್ದ ಬೂಬ ಕುಲಾಲ್ ಅನೇಕ ಮಂದಿಯನ್ನು ಕ್ಲಪ್ತ ಸಮಯದಲ್ಲಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆಯುತ್ತಿದ್ದರು. ಹಲವು ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಂಡಿದ್ದ ಅವರನ್ನು ಎಲ್ಲರೂ ಪ್ರೀತಿಯಿಂದ ‘ಬೂಬಣ್ಣʼ ಎಂದು ಕರೆಯುತ್ತಿದ್ದರು.
ಮೃತರು ಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದಾರೆ.
ವನ್ಯಜೀವಿ ದಾಳಿ: ಪರಿಹಾರಕ್ಕೆ ಆಗ್ರಹ
ವನ್ಯಜೀವಿಗಳು ದಾಳಿ ನಡೆಸಿ ಮಾನವರು ಮೃತಪಟ್ಟರೆ ಅವರ ಕುಟುಂಬಿಕರಿಗೆ ಸರ್ಕಾರ ದೊಡ್ಡ ಮಟ್ಟದಲ್ಲಿ ಪರಿಹಾರ ಒದಗಿಸುತ್ತಿದೆ. ಅದೇ ರೀತಿ ಬೂಬ ಕುಲಾಲ್ ಕೂಡಾ ವನ್ಯ ಜೀವಿ ಮುಸಿಯನ ಹಠಾತ್ ದಾಳಿಯಿಂದ ಮೃತಪಟ್ಟಿದ್ದು ಸರ್ಕಾರ ಇದಕ್ಕೆ ಸೂಕ್ತ ಪರಿಹಾರ ಕೊಡಬೇಕೆಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.
ಊರಿನ ಜನಪ್ರತಿನಿಧಿಗಳು, ಶಾಸಕರು ಈ ಬಗ್ಗೆ ಮುತುವರ್ಜಿ ವಹಿಸಿ ಅರಣ್ಯ ಇಲಾಖೆಯ ಗಮನಕ್ಕೆ ತಂದು ಮೃತರ ಕುಟುಂಬಿಕರಿಗೆ ಪರಿಹಾರಧನ ಒದಗಿಸುವಂತೆ ಆಗ್ರಹ ಕೇಳಿ ಬಂದಿದೆ.