Published On: Sat, Dec 2nd, 2023

ಡಿ.6 ರಂದು ಕಡೇಶಿವಾಲಯ ಶಾಲೆಯಲ್ಲಿ 17 ನೇ ಮಕ್ಕಳ ಸಾಹಿತ್ಯ ಸಮ್ಮೇಳನ

ಬಂಟ್ವಾಳ: ‘ಮಕ್ಕಳ ಕಲಾ ಲೋಕ’ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ನೇತೃತ್ವ ಹಾಗೂ ಕಡೇಶಿವಾಲಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ 17ನೇ “ಮಕ್ಕಳ ಸಾಹಿತ್ಯ ಸಮ್ಮೇಳನ”ವು ದಶಂಬರ್ 6 ರಂದು ಕಡೇಶಿವಾಲಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ‌ ನಡೆಯಲಿದೆ‌ ಎಂದು ಮಕ್ಕಳ ಕಲಾ ಲೋಕದ ಅಧ್ಯಕ್ಷ ರಮೇಶ್ ಎಂ. ಬಾಯಾರು ತಿಳಿಸಿದ್ದಾರೆ.

ಶುಕ್ರವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ‌ ಈ ಬಗ್ಗೆ ಮಾಹಿತಿ ನೀಡಿದ ಅವರು ಕಡೇಶಿವಾಲಯ ಸ.ಹಿ.ಪ್ರಾ. ಶಾಲಾ ವಿದ್ಯಾರ್ಥಿನಿ ಸಾನ್ವಿ ಸುವರ್ಣ ಸಮ್ಮೇಳನಾಧ್ಯಕ್ಷತೆಯನ್ನು ವಹಿಸಲಿದ್ದು, 16 ನೇ ವರ್ಷದ ಸಮ್ಮೇಳನಾಧ್ಯಕ್ಷೆ ಓಜಾಲ ಸ.ಹಿ.ಪ್ರಾ ಶಾಲಾ ವಿದ್ಯಾರ್ಥಿನಿ ಶ್ರುತಿಕಾ ಬಾಕಿಮಾರು ಸಮ್ಮೇಳನವನ್ನು ಉದ್ಘಾಟಿಸುವರು.

ಮಕ್ಕಳ ಸ್ವರಚಿತ ಕೃತಿಗಳನ್ನು ಕವಿ ವಿಶ್ವನಾಥ ಕುಲಾಲ್ ಮಿತ್ತೂರು ಬಿಡುಗಡೆಗೊಳಿಸುವರು. ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಎಸ್. ರಾವ್ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ, ಬಂಟ್ವಾಳ ತಾಲೂಕು ಕ.ಸಾ.ಪ. ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಕನ್ನಡ ಸಾಹಿತ್ಯ ಪರಿಷತ್ ನ ಹಾಗೂ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಹರಿಶ್ಚಂದ್ರ ಎಂ. ಕನ್ನಡ ಧ್ವಜಾರೋಹಣ ನೆರವೇರಿಸುವರು ಎಂದರು.

ಬದಿಯಡ್ಕದ ಶ್ರೀ ಭಾರತಿ ವಿದ್ಯಾಪೀಠದ ವಿದ್ಯಾರ್ಥಿನಿ ಆರಾಧ್ಯ ರೈ ಕೆ. ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಭಾಗವಹಿಸಿ ಶುಭ ಹಾರೈಸಲಿದ್ದಾರೆ ಎಂದ‌ ಅವರು ಪ್ರಾಥಮಿಕದಿಂದ ಪದವಿಪೂರ್ವ ಕಾಲೇಜು ತನಕದ ಸುಮಾರು ಐದು ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಸಮ್ಮೇಳನದ ವಿವಿಧ ಚಟುವಟಿಕೆಗಳಾದ ಕಿರು ನಾಟಕ, ಚಿತ್ರ ಚಿತ್ತಾರ, ಮಾತುಕತೆ ಮತ್ತು ಸಾಹಿತ್ಯ ಗೋಷ್ಠಿಗಳಲ್ಲಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಸಮ್ಮೇಳನದಲ್ಲಿ ಶಿಕ್ಷಕರು ಮಕ್ಕಳ ಹೆತ್ತವರು ಸಾಹಿತ್ಯಾಭಿಮಾನಿಗಳು ಮತ್ತು ಗ್ರಾಮಸ್ಥರು ಭಾಗವಹಿಸಲಿದ್ದಾರೆ. ದಿನವಿಡೀ ಜರಗುವ ಮಕ್ಕಳ ಸಾಹಿತ್ಯ ಕಾರ್ಯಕ್ರಮಗಳನ್ನು ತಾಲೂಕಿನ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರೇ ನಿರ್ವಹಿಸಲಿದ್ದಾರೆ. ಸಮ್ಮೇಳನದ ಯಶಸ್ವಿಗಾಗಿ ಸ್ವಾಗತ ಸಮಿತಿ ಸಹಿತ ವಿವಿಧ ಉಪಸಮಿತಿಗಳನ್ನು ರಚಿಸಲಾಗಿದೆ. ಸಮ್ಮೇಳನದ ಪ್ರಯುಕ್ತ “ಸ್ಮರಣ ಸಂಚಿಕೆ”ಯನ್ನು ಹೊರ ತರಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮಂಗಳೂರಿನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿ ಕಾರ್ತಿಕೇಯ ಆರ್. ಮಯ್ಯ ಪಾಣೆಮಂಗಳೂರು ರವರು ಸಮಾರೋಪ ಭಾಷಣ ಮಾಡಲಿದ್ದು, ಮಕ್ಕಳ ಸಾಹಿತ್ಯಾದಿ ಕಲೆಗಳಲ್ಲಿ ಹೆಚ್ಚು ತೊಡಗಿಸಿಕೊಂಡಿರುವ ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢ ಶಾಲೆಗೆ ತಾಲೂಕು ಮಟ್ಟದ ‘ಸಾಹಿತ್ಯ ತಾರೆ ಪ್ರಶಸ್ತಿ’, ಕಲಾವಿದ ರಾಜೇಶ್ ವಿಟ್ಲ ಅವರಿಗೆ ತಾಲೂಕು ಮಟ್ಟದ ‘ಬಾಲಬಂಧು ಪ್ರಶಸ್ತಿ’ಯನ್ನು ಈ ಸಂದರ್ಭ ಪ್ರದಾನ ಮಾಡಲಾಗುವುದು ಎಂದರು.

ಬಂಟ್ವಾಳ ತಾಲೂಕಿನ ಅನುದಾನ ರಹಿತ, ಅನುದಾನಿತ ಮತ್ತು ಸರಕಾರಿ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪ.ಪೂ ಕಾಲೇಜುಗಳಿಂದ  ಭಾಗವಹಿಸಲಿರುವ ಮಕ್ಕಳ, ಶಿಕ್ಷಕರ ಸಂಖ್ಯೆಯನ್ನು ಸಮ್ಮೇಳನಕ್ಕೆ ನಾಲ್ಕು ದಿನ ಮುಂಚಿತವಾಗಿ 9731444259 ಅಥವಾ 9741365132 ಸಂಖ್ಯೆಗೆ ಕರೆ ಅಥವಾ ಸಂದೇಶದ ಮೂಲಕ ತಿಳಿಸಿ ಸಹಕರಿಸುವಂತೆ ಅವರು ಈ ಸಂದರ್ಭದಲ್ಲಿ ಕೋರಿದರು.

ಸಮಿತಿ ಪದಾಧಿಕಾರಿಗಳಾದ ಕೆ.ಕೆ.ಶೆಟ್ಟಿ, ಹರೀಶ್ಚಂದ್ರ ಎಂ., ಮಾಧವ ರೈ ಭಂಡಸಾಲೆ, ಬಾಬು ಪೂಜಾರಿ ಕೆ., ಶಿವರಾಮ ಭಟ್, ಶರತ್ ಕುಮಾರ್, ಪುಷ್ಪಾ ಎಚ್.ಮೊದಲಾದವರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter