ಡಿ.3 ರಂದು ಬೆಂಜನಪದವಿನಲ್ಲಿ ಅಕ್ಷಯ ಪಾತ್ರ ಫೌಂಡೇಶನ್ ನ ಅಡುಗೆಕೋಣೆ ಉದ್ಘಾಟನೆ
ಬಂಟ್ವಾಳ: ಬಂಟ್ವಾಳ ತಾಲೂಕಿನ ಬೆಂಜನಪದವಿನಲ್ಲಿ ನಿರ್ಮಾಣಗೊಂಡಿರುವ ಮಂಗಳೂರು ಅಕ್ಷಯ ಪಾತ್ರ ಫೌಂಡೇಶನ್ ನ ಕೇಂದ್ರೀಕೃತ ಅಡುಗೆ ಮನೆ ಉದ್ಘಾಟನಾ ಸಮಾರಂಭ ದಶಂಬರ್ 3 ರಂದು 11.30 ಗಂಟೆಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ದಾನಿಗಳಾದ ಮಂಗಳೂರಿನ ಜಿಟಿ ಫೌಂಡೇಶನ್ ಮತ್ತು ದಿಯಾ ಸಿಸ್ಟಮ್ಸ್ ಪ್ರೈ.ಲಿ. ನ ವಿಜಯ್ ಮತ್ತು ಶಾಮ ಕೇಡಿಯಾ, ದಿವಂಗತ ಡಾ. ವಿ ರವಿಚಂದ್ರನ್ ಅವರ ದೂರದೃಷ್ಟಿ ಕೊಡುಗೆಯಾಗಿ ಈ ಅಡುಗೆಮನೆ ನಿರ್ಮಾಣಗೊಂಡಿದೆ.
ಉಡುಪಿಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಆರ್ಶೀವಚನ ನೀಡಲಿದ್ದು, ದಿವ್ಯ ಸಾನ್ನಿಧ್ಯವಿರಲಿದೆ. ಅಕ್ಷಯ ಪಾತ್ರ ಪ್ರತಿಷ್ಠಾನದ ಅಧ್ಯಕ್ಷ ಮಧು ಪಂಡಿತ್ ದಾಸ್, ಉಪಾಧ್ಯಕ್ಷ ಚಂಚಲಾಪತಿ ದಾಸ್, ದ.ಕ.ಸಂಸದರಾದ ನಳಿನ್ ಕುಮಾರ್ ಕಟೀಲ್, ಕರ್ನಾಟಕ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, ಬೆಂಗಳೂರಿನ ಸೆಂಚುರಿ ರಿಯಲ್ ಎಸ್ಟೇಟ್ ಗ್ರೂಪ್‌ನ ಅಧ್ಯಕ್ಷ ಡಾ. ಪಿ ದಯಾನಂದ ಪೈ, ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಜಿ.ಪಂ.ಸಿಇಒ ಡಾ. ಆನಂದ ಕೆ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
124 ಸರಕಾರ ಮತ್ತು 41 ಸರಕಾರಿ ಅನುದಾನಿತ ಸಂಸ್ಥೆಗಳ ಸಹಿತ 165 ಕ್ಕೂ ಹೆಚ್ಚು ಶಾಲೆಗಳಿಗೆ ಪೌಷ್ಟಿಕಯುತವಾದ 25,000 ಊಟವನ್ನು ಉತ್ಪಾದಿಸುವ ಸಾಮರ್ಥ್ಯದೊಂದಿಗೆ ಈ ಅಡುಗೆಕೋಣೆ ರೂಪುಗೊಂಡಿದ್ದು, ಸೌರಶಕ್ತಿ ಮತ್ತು ಸ್ವಚ್ಛ ಎಲ್ ಪಿಜಿ ಯನ್ನು ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.